ಕರಡು ಮಾರ್ಗಸೂಚಿ: ಬಲಿಷ್ಠ ಒಕ್ಕೂಟಕ್ಕೆ ದಕ್ಷಿಣ ರಾಜ್ಯಗಳ ಬೇಡಿಕೆಗಳೇನಿರಬೇಕು?

Authored By: Tara Krishnaswamy

ಈ ಬರಹವು ನ್ಯೂಸ್ ಮಿನಿಟ್ ಮಿಂದಾಣದಲ್ಲಿ ಪ್ರಕಟವಾಗಿದ್ದ ಬರಹದ ಕನ್ನಡ ರೂಪ.

15ನೇ ಹಣಕಾಸು ಆಯೋಗಕ್ಕೆ ನೀಡಲಾಗಿರುವ ಮಾರ್ಗಸೂಚಿಗಳು ದಕ್ಷಿಣ ರಾಜ್ಯದ ನಾಯಕರುಗಳ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ದಕ್ಷಿಣದ ರಾಜ್ಯಗಳಲ್ಲಿ ಸಾಧಿಸಲಾಗಿರುವ ಆರ್ಥಿಕ ಹಾಗೂ ಸಾಮಾಜಿಕ ಏಳಿಗೆಯ ಕಾರಣದಿಂದಾಗಿಯೇ ಕೇಂದ್ರದಿಂದ ತಮಗೆ ದೊರೆಯಬೇಕಾದ ತೆರಿಗೆ ಸಂಪನ್ಮೂಲದ ಪ್ರಮಾಣ ಕಡಿಮೆಯಾಗುವ ಸಂದರ್ಭ ಸೃಷ್ಟಿಯಾಗಿರುವುದು  ಇದಕ್ಕೆ ಕಾರಣವಾಗಿದೆ.

ಉತ್ತಮ ತಲಾದಾಯ, ಕಡಿಮೆ ಹೆರುವೆಣಿಕೆ, ಹೆಚ್ಚಿನ ಕಲಿಕೆ ಮಟ್ಟ ಹಾಗೂ ಆರೋಗ್ಯ ಮಟ್ಟ ಹೊಂದಿರುವ ದಕ್ಷಿಣದ ರಾಜ್ಯಗಳು ತಮಗೆ ಹಣಕಾಸಿನ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರುತ್ತಿವೆ. ಕೇವಲ ಇದೊಂದೇ ಅವುಗಳ ದೂರಲ್ಲ ಬದಲಾಗಿ, ರಾಜ್ಯಗಳ ರಾಜಕೀಯ ಸ್ವಾಯತ್ತತೆ ಹಾಗೂ ಸಾಮಾಜಿಕ ನ್ಯಾಯದ ವಿಷಯಗಳಲ್ಲಿ ದೆಹಲಿಯ ಮಿತಿಮೀರಿದ ಹಸ್ತಕ್ಷೇಪ ಅವುಗಳ ಅಸಮಾಧಾನದ ಹಿಂದಿನ ಇನ್ನೊಂದು ಮುಖ್ಯ ಕಾರಣ.

ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ತನ್ನದೇ ಸ್ವಂತ ಬಾವುಟ ಹೊಂದಬೇಕು ಎನ್ನುವ ಆಸೆ ಕೇಂದ್ರ ಸರಕಾರದ ಒಪ್ಪಿಗೆಗೆ ಕಾದು ಕುಳಿತಿದೆ. ಕಾಲೇಜು ಮೆಟ್ಟಿಲು ಹತ್ತುವ ಹೆಣ್ಣು ಮಕ್ಕಳ ಸಂಖ್ಯೆ ೪೪% ಮುಟ್ಟಿರುವ ತಮಿಳುನಾಡಿನಂತಹ ರಾಜ್ಯ, ನೀಟ್ ತರದ ಪರೀಕ್ಷೆಯ ಉರುಳಿಗೆ ಸಿಲುಕಿ ತನ್ನ ಹಣದಿಂದ, ತನ್ನ ಜನರಿಗಾಗಿ ನಡೆಸುವ  ಮೆಡಿಕಲ್ ಕಾಲೇಜುಗಳಲ್ಲಿ ತಮಿಳು ಮಕ್ಕಳಿಗೆ ಮೆಡಿಕಲ್ ಸೀಟು ಕೊಡಿಸಲು ಆಗದೇ ಒದ್ದಾಡುವ ಸ್ಥಿತಿಗೆ ತಲುಪಿದೆ.   ವಿಶೇಷ ಸ್ಥಾನಮಾನಕ್ಕಾಗಿ ಕಾದು ಕುಳಿತಿರುವ ಆಂಧ್ರಪ್ರದೇಶ ರಾಜ್ಯವು ಕೇಂದ್ರ ಸರಕಾರದಿಂದ ವಂಚನೆಗೊಳಗಾಗಿದೆ. ಸಾಮಾಜಿಕವಾಗಿ ಅಭಿವೃದ್ಧಿಯಾಗಿರುವ ಕೇರಳ ರಾಜ್ಯವು ಕೇಂದ್ರದ ಅಡಿಯಾಳಾಗಿರಬೇಕಾಗಿರುವ ಪರಿಸ್ಥಿತಿಯಲ್ಲಿದೆ.

ಏಪ್ರಿಲ್ 10 2018 ರಂದು ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಎಲ್ಲಾ ದಕ್ಷಿಣ ರಾಜ್ಯಗಳ ಹಣಕಾಸು ಸಚಿವರ ಸಭೆ ಕರೆದಿದ್ದಾರೆ. ಹಾಗಾದರೆ, ಈ ಎಲ್ಲಾ ನಾಯಕರುಗಳು ಒಟ್ಟಾಗಿ ಸೇರಿದಾಗ ಅವರ ಬೇಡಿಕೆಗಳೇನಿರಬೇಕು?

ಕೇಂದ್ರದೊಂದಿಗಿನ ತಮ್ಮ ಕೊಡುಕೊಳ್ಳುವಿಕೆಯ ಬುನಾದಿಯಾಗಿ ಒಂದು ಬೇಡಿಕೆಗಳ ಪಟ್ಟಿಯ ಕರಡು ಇಲ್ಲಿದೆ. ಈ ಬೇಡಿಕೆ ಪಟ್ಟಿಯ ಉದ್ದೇಶ ಅತ್ಯಂತ ಸ್ಪಷ್ಟವಾದ, ವಿವರವಾದ ಒಂದು ದಾಖಲೆಯನ್ನು ಮುಂದಿಡುವುದಲ್ಲ, ಇದೊಂದು ತಿದ್ದುತ್ತಲೇ, ಬದಲಾಗುತ್ತಲೇ ಹೆಚ್ಚು ಸಮಗ್ರವಾಗುವ ಒಂದು ಕರಡನ್ನು ಜನರ ಮುಂದಿಡುವುದು. ಇಲ್ಲಿನ ಎಲ್ಲ ಉದ್ದೇಶಗಳನ್ನು ಒಂದೇ ದಿನದಲ್ಲಿ ಈಡೇರಿಸಲು ಆಗುವುದಿಲ್ಲ ಅಥವಾ ಅದನ್ನು ಈಡೇರಿಸಬೇಕು ಎನ್ನುವ ಆಶಯವು ಇಲ್ಲ. ಬದಲಾಗಿ ಇದು, ಗಟ್ಟಿಯಾದ ಒಕ್ಕೂಟ ವ್ಯವಸ್ಥೆಯತ್ತ ಒಂದು ಸಮಗ್ರ ಚರ್ಚೆಯನ್ನು ರೂಪಿಸುವ  ದಿಕ್ಕಿನತ್ತ ಯೋಚಿಸಲು ಬೇಕಿರುವ  ಒಂದು ತಾತ್ವಿಕ ಚೌಕಟ್ಟನ್ನು ಒದಗಿಸಿಕೊಡುವ ಪ್ರಯತ್ನವಾಗಿದೆ.

ದಕ್ಷಿಣ ರಾಜ್ಯಗಳ ಸಮೂಹದ ಬೇಡಿಕೆಗಳು (ಕರಡು)

ಮಾರ್ಗಸೂಚಿ: ಕೇಂದ್ರಕ್ಕೆ ಒಕ್ಕೂಟ ತತ್ವ – ರಾಜ್ಯಗಳಿಗೆ ಸ್ವಾಯತ್ತತೆ

 1. ರಾಜಕೀಯ ಪ್ರಾತಿನಿಧ್ಯ

ರಾಜ್ಯಸಭೆಯನ್ನು ಒಂದು ನಿಜವಾದ ರಾಜ್ಯಗಳ ಮಂಡಳಿಯ ಹಾಗೆ ನೋಡಬೇಕು. ಜನಸಂಖ್ಯೆಗನುಗುಣವಾಗಿ ಹಂಚುವುದನ್ನು ಕೈ ಬಿಟ್ಟು, ಪ್ರತಿಯೊಂದು ರಾಜ್ಯಕ್ಕೂ ಕನಿಷ್ಠ ಸೀಟುಗಳನ್ನು ಕೊಡಬೇಕು ಅದರ ಜೊತೆಗೆ ಜನಸಂಖ್ಯೆಯ ಅನುಗುಣವಾಗಿ ಸೀಟುಗಳನ್ನು ಹಂಚಿಕೆ ಮಾಡಬೇಕು. ಇಂದು ರಾಜ್ಯಸಭೆಯ ಸೀಟು ರಾಜಕೀಯ ನಾಯಕತ್ವಕ್ಕೆ ತೋರುವ ನಿಷ್ಠೆಗೆ ಪ್ರತಿಫಲವಾಗಿ ನೀಡಲಾಗುವ ದಾನವಾಗಿ, ನಿವೃತ್ತಿಯ ಅಂಚಿನಲ್ಲಿರುವ ರಾಜಕಾರಣಿಗಳಿಗೆ, ಹೊರರಾಜ್ಯದವರನ್ನು ದೆಹಲಿಗೆ ಕಳಿಸುವ ಸಾಧನವಾಗಿ ಬಳಕೆಯಾಗುತ್ತಿದೆ. ಇದು ಸಂಸತ್ತಿನಲ್ಲಿ ರಾಜ್ಯಗಳ ಪರ ಪ್ರಬಲವಾದ ಲಾಬಿ ರೂಪಿಸುವ ಪ್ರಯತ್ನಕ್ಕೆ ಹೊಡೆತ ನೀಡುತ್ತಿದೆ.

ಬರುವ 2026 ಕ್ಕೆ ಡಿಲಿಮಿಟೇಷನ್ ಪ್ರಕ್ರಿಯೆ ಮತ್ತೆ ಶುರುವಾಗಲಿದ್ದು ಆಗ 1971ರ ಜನಗಣತಿಗಿಂತ ಹೆಚ್ಚು ಇತ್ತೀಚಿನ ಜನಗಣತಿಯ ಅಂಕಿಅಂಶಗಳನ್ನು ಪರಿಗಣಿಸಲಾಗುವುದು ಎನ್ನಲಾಗಿದೆ. ಇದು ದಕ್ಷಿಣದ ರಾಜ್ಯಗಳಿಗೆ ಒಳ್ಳೆಯ ಹಾಗೂ ಕೆಟ್ಟ ಸುದ್ದಿಯಾಗಿದೆ.

ಒಳ್ಳೆಯ ಸುದ್ದಿ ಏನೆಂದರೆ, ಇತ್ತೀಚಿನ ಜನಸಂಖ್ಯೆಯನ್ನು ಪರಿಗಣಿಸಿದಾಗ ಒಟ್ಟಾರೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿನ ಇಂದಿರುವ ಸ್ಥಾನಗಳಲ್ಲಿ ಏರಿಕೆಯಾಗಬಹುದು ಅಥವಾ ದುಪ್ಪಟ್ಟಾಗಬಹುದು. ಹಲವಾರು ದಶಕಗಳಿಂದ ಈ ಎರಡು ಮನೆಗಳಲ್ಲಿ ಸದಸ್ಯರ ಸಂಖ್ಯೆಯನ್ನು ಏರಿಸಲಾಗಿಲ್ಲ. ಬೇರೆ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮನ್ನು ಪ್ರತಿನಿಧಿಸುತ್ತಿರುವ ಪ್ರತಿನಿಧಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಜನರನ್ನು ಪ್ರತಿನಿಧಿಸಲು ಹೆಚ್ಚು ಜನಪ್ರತಿನಿಧಿಗಳು ಲಭ್ಯರಾಗಬಹುದು. ಇದು ಒಳ್ಳೆಯದು.

ಇನ್ನು ಕೆಟ್ಟ ಸುದ್ದಿ ಏನೆಂದರೆ, ದಕ್ಷಿಣದ ರಾಜ್ಯಗಳು 2000-2005ರ ಸಮಯದಲ್ಲಿ ತಮ್ಮ ಜನಸಂಖ್ಯೆ ಬೆಳವಣಿಗೆಯ ದರದಲ್ಲಿ ಸಮತೋಲನವನ್ನು ತಂದುಕೊಂಡಿದ್ದಾವೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದಿ ಮಾತನಾಡುವ ಉತ್ತರದ ರಾಜ್ಯಗಳು ಈ ಹಂತದ ಬಗ್ಗೆ ಯೋಚಿಸುವ ಎರಡು ದಶಕಗಳ ಮುಂಚೆಯೇ ದಕ್ಷಿಣದ ರಾಜ್ಯಗಳು ಇದನ್ನು ಸಾಧಿಸಿವೆ. ಹಾಗಾಗಿ, ದಕ್ಷಿಣದ ಎಲ್ಲಾ ರಾಜ್ಯಗಳ ಒಟ್ಟು ಜನಸಂಖ್ಯೆ ಉತ್ತರ ರಾಜ್ಯಗಳಿಗೆ ಹೋಲಿಸಿದರೆ ಕೇವಲ ಒಂದು ಸಣ್ಣ ಪಾಲಷ್ಟೇ ಆಗುತ್ತದೆ. ಆದರೆ 1971ರಲ್ಲಿ ಅಂಕಿ ಅಂಶಗಳು ಉತ್ತರ ಮತ್ತು ದಕ್ಷಿಣದ  ರಾಜ್ಯಗಳ ಜನಸಂಖ್ಯೆಯನ್ನು ಹೋಲಿಸಬಹುದಾದ ಮಟ್ಟದಲ್ಲಿದ್ದವು ಎಂದು ಹೇಳುತ್ತವೆ. ಹೀಗಾಗಿ ದಕ್ಷಿಣ ರಾಜ್ಯಗಳ ವಿಧಾನಸಭೆಯ ಹಾಗೂ ಲೋಕಸಭೆಯ ಸೀಟುಗಳಲ್ಲಿ ದೊಡ್ಡ ಮಟ್ಟದ ಇಳಿಕೆ ಕಾಣಲಿದೆ. ಇದು ದಕ್ಷಿಣ ರಾಜ್ಯಗಳ ಒಳ್ಳೆಯ ಆಡಳಿತಕ್ಕೆ, ಶೈಕ್ಷಣಿಕ ಏಳಿಗೆ, ಆರೋಗ್ಯ ಸುಧಾರಣೆ ಹಾಗೂ ಲಿಂಗ ಸಮಾನತೆ ಸಾಧಿಸಿದ್ದಕ್ಕೆ ನೀಡಲಾಗುತ್ತಿರುವ ಶಿಕ್ಷೆಯೇ ಸರಿ. ಈ ಮೇಲಿನ ಅಂಶಗಳು ಹೆರುವೆಣಿಕೆ ಸ್ಥಿರತೆಗೆ ಬಹಳ ಮುಖ್ಯವಾದವು.

ರಾಜ್ಯ ವಿಧಾನಸಭೆಯ ಸೀಟುಗಳು ಹಾಗೂ ಲೋಕಸಭೆಯ ಸೀಟುಗಳು ಜನಸಂಖ್ಯೆಯ ಮೇಲೆ ನಿರ್ಧಾರವಾಗುತ್ತದೆ, ದಕ್ಷಿಣ ರಾಜ್ಯಗಳಿಗೆ ಆಗುವ ಅನ್ಯಾಯವನ್ನ ತಪ್ಪಿಸಲು ಈ ನಿಯಮವನ್ನು ತಿದ್ದಲು ಸಾಧ್ಯವಿಲ್ಲ. ಹಾಗಾಗಿ ದಕ್ಷಿಣ ರಾಜ್ಯಗಳ ಒಕ್ಕೂಟ:

 • ಇದನ್ನು ಹೇಗೆ ಸುಧಾರಿಸಬೇಕು ಎನ್ನುವುದರ ಬಗ್ಗೆ ಮಾತುಕತೆ ನಡೆಸಬೇಕು
 • ಹೆಚ್ಚಿನ ರಾಜ್ಯಸಭೆ ಪ್ರಾತಿನಿಧ್ಯಕ್ಕೆ ಒತ್ತಾಯಿಸಬೇಕು; ಹಾಗೂ
 • ಕೇಂದ್ರ ಕ್ಯಾಬಿನೆಟ್ಟಿನಲ್ಲಿ ದಕ್ಷಿಣ ಭಾರತದ ನಿರಂತರ ಪ್ರತಿನಿಧಿತ್ವಕ್ಕೆ ಒತ್ತಡ ಹೇರಬೇಕು
 1. ಚುನಾವಣೆಯ ಹಕ್ಕುಗಳು

ಏಕ ಕಾಲದಲ್ಲಿ ಕೇಂದ್ರ ಹಾಗೂ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಕೂಡದು. ರಾಜ್ಯಗಳಿಗೆ ತಮ್ಮದೇ ಚುನಾವಣಾ ವೇಳಾ ಪಟ್ಟಿ ಇರಬೇಕು. ಕೇಂದ್ರ ಹಾಗೂ ರಾಜ್ಯಗಳಲ್ಲಿ ಏಕಕಾಲದಲ್ಲಿ ಚುನಾವಣೆ ಏರ್ಪಟ್ಟರೆ, ರಾಜ್ಯ ಮಟ್ಟದ ಸಮಸ್ಯೆಗಳು, ರಾಜ್ಯದ ನಾಯಕರುಗಳು ಹಾಗೂ ಸ್ಥಳೀಯ ಪಕ್ಷಗಳು ಕಡೆಗಣನೆಗೆ ಒಳಗಾಗುತ್ತವೆ. ಏಕಕಾಲದ ಚುನಾವಣೆ ಮತದಾರರ ಗಮನವನ್ನು ಸ್ಥಳೀಯ ಸಮಸ್ಯೆಯಿಂದ ದೂರ ಮಾಡುತ್ತವೆ ಹಾಗೂ ಇದು ಹೆಚ್ಚು ಕೇಂದ್ರಿಕೃತವಾದ ಸರಕಾರಕ್ಕೆ ದಾರಿ ಮಾಡಿಕೊಡುತ್ತದೆ. ದಕ್ಷಿಣ ರಾಜ್ಯಗಳು ಒಂದು ಸಮೂಹವಾಗಿ, ಪ್ರತಿಯೊಂದು ರಾಜ್ಯದ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳಬಹುದಾದ ಚುನಾವಣಾ ಪದ್ಧತಿಗಳಿಗೆ ಒತ್ತಾಯಿಸಬೇಕು. ಉದಾ: ಮತದಾರರ ಪಟ್ಟಿಯ ತಿದ್ದುಪಡಿ, ನೇರವಾಗಿ ಮುಖ್ಯ ಮಂತ್ರಿಗಳನ್ನು ಆರಿಸುವ ವ್ಯವಸ್ಥೆ ಅಥವಾ ಎನ್.ಆರ್.ಐಗಳ ಮತದಾನ ಇತ್ಯಾದಿ. ರಾಜ್ಯದ ಚುನಾವಣೆಗಳನ್ನು ಆಯಾ ರಾಜ್ಯಗಳೇ ಮಾಡಿಕೊಳ್ಳಬಹುದು. ಭಾರತ ಸರಕಾರ ಮೇಲುಸ್ತುವಾರಿ ವಹಿಸಿಕೊಂಡು ನ್ಯಾಯಯುತ ಚುನಾವಣೆ ನಡೆಯುವಂತೆ ನೋಡಿಕೊಂಡರೆ ಸಾಕು.

 1. ಆರ್ಥಿಕ ಬೇಡಿಕೆಗಳು

15ನೇ ಹಣಕಾಸಿನ ಆಯೋಗಕ್ಕೆ ನೀಡಲಾಗಿರುವ ಕರಾರುಗಳನ್ನು ಪುನರ್ ಪರಿಶೀಲಿಸಬೇಕು ಹಾಗೂ ದಕ್ಷಿಣಕ್ಕೆ ಆಗುವ ಅನ್ಯಾಯವನ್ನು ಸರಿಪಡಿಸಲು ಶಿಫಾರಸ್ಸುಗಳನ್ನು ಮಾಡಬೇಕು

 • ಆಯೋಗದ ಲೆಕ್ಕಾಚಾರದಲ್ಲಿ 2011 ರ ಜನಗಣತಿಗೆ ನೀಡಲಾಗಿರುವ ತೂಕದ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಒಂದು ರಾಜ್ಯಕ್ಕೆ ಆಗುವ ಒಳ ವಲಸೆಯ ವಾರ್ಷಿಕ ಅಂಕಿ ಅಂಶಗಳನ್ನು ಬಳಸಿಕೊಂಡು ಅದರ ತೂಕದ ಪ್ರಮಾಣದ ಮೇಲೆ ಹಣಕಾಸಿನ ವಿತರಣೆ ಮಾಡಬೇಕು.ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಅಳತೆಗೋಲಾಗಿ ಇಟ್ಟುಕೊಂಡು, ಈ ವಿಷಯದಲ್ಲಿ ಒಳ್ಳೆಯ ಕೆಲಸ ಮಾಡಿರುವ ರಾಜ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
 • 14ನೇ ಹಣಕಾಸು ಆಯೋಗದ ಶಿಫಾರಸಿನಂತೆ 42% ಹಂಚಿಕೆ ಮಾಡಲಾಗುತ್ತಿರುವ ಮೊತ್ತವನ್ನು ಯಾವ ಕಾರಣಕ್ಕೂ ಕಡಿಮೆ ಮಾಡಬಾರದು.
 • ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೊನೆ ಹಾಡಬೇಕು. ಈ ಯೋಜನೆಗಳಿಗೆ ನೀಡಲಾಗುತ್ತಿದ್ದ ಹಣವನ್ನು ರಾಜ್ಯಗಳಿಗೆ ಅನುರೂಪವಾಗಿ ಹಂಚಬೇಕು ಹಾಗೂ ಇದರ ಮೇಲೆ ಕೇಂದ್ರ ಸರಕಾರಕ್ಕೆ ಯಾವುದೇ ಹಿಡಿತ ಇರಬಾರದು.
 • ರಾಜ್ಯಗಳ ಆದಾಯ ಕೊರತೆ ತುಂಬಿಕೊಡುವ ಕಾರ್ಯಕ್ರಮವನ್ನು ಸಂವಿಧಾನದ ಆಶಯದಂತೆ ಮುಂದುವರಿಸಬೇಕು ಹಾಗೂ ಅದನ್ನು ಯಾವುದೇ ರೀತಿಯಲ್ಲಿ ಬದಲಿಸಬಾರದು.

ತಮ್ಮ ಆರ್ಥಿಕ ಮುನ್ನಡೆಯಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿ ಸಾಧಿಸುತ್ತಿರುವ ರಾಜ್ಯಗಳಿಗೆ ಪ್ರೋತ್ಸಾಹ ನೀಡಬೇಕು. ಹೆಚ್ಚಿನ ಆದಾಯ ಹಾಗೂ ಕೆಲಸಗಳನ್ನು ಹುಟ್ಟು ಹಾಕುವ ಸಾಧನಗಳು ರಾಜ್ಯಗಳ ಕೈಯಲ್ಲಿ ಇರಬೇಕೇ  ಹೊರತು ಕೇಂದ್ರ ಸರಕಾರದ ಕೈಯಲ್ಲಿ ಅಲ್ಲ.

15ನೇ ಹಣಕಾಸು ಆಯೋಗಕ್ಕೆ ನೀಡಲಾಗಿರುವ ಮಾರ್ಗಸೂಚಿಯಲ್ಲಿ 2011ರ ಜನಗಣತಿಗೆ ಹೆಚ್ಚಿನ ತೂಕ ನೀಡಬಹುದು ಅನ್ನಲಾಗಿದೆ. ರಾಜ್ಯಗಳಿಗೆ ಹಂಚಲಾಗುವ ಹಣದ ಪ್ರಮಾಣವನ್ನು ನಿರ್ಧರಿಸುವ ಅಂಶಗಳಲ್ಲಿ ಇದೂ ಒಂದು. 2011ರ ಜನಗಣತಿ ಪರಿಗಣಿಸಿದರೆ ಈಗಾಗಲೇ ದಕ್ಷಿಣದ ರಾಜ್ಯಗಳಲ್ಲಿ ಇರುವ ಕಡಿಮೆ ಹೆರುವೆಣಿಕೆ ಕಾರಣದಿಂದಾಗಿ ದಕ್ಷಿಣದ ರಾಜ್ಯಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಅನ್ನುವ ವಾದದಲ್ಲಿ ಹುರುಳಿದೆ.

ಕೇಂದ್ರದ ಕೆಲವು ಯೋಜನೆಗಳಿಗೆ ಬರುವ ದುಡ್ಡು ಆಯಾ ಪ್ರದೇಶದಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಬಳಸುವ ಜನರ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಹಾಗಾಗಿ ನಾವು ಹಳೆಯ 1971ರ ಜನಗಣತಿಗೆ ಅಂಟಿಕೊಂಡು ಕೂಡುವುದು ಸಹ ತಪ್ಪಾಗುತ್ತದೆ. ಹೊಸ ಜನಗಣತಿ ಅಂಕಿಅಂಶಗಳನ್ನು ಪರಿಗಣಿಸಿದಲ್ಲಿ ದಕ್ಷಿಣದ ರಾಜ್ಯಗಳಿಗೆ ಬರುವ ಅನುದಾನದಲ್ಲಿ ದೊಡ್ಡ ಮಟ್ಟದ ಕಡಿತವಾಗಲಿದೆ. ಹಾಗಾಗಿ ಜನಸಂಖ್ಯೆಗೆ ನೀಡಲಾಗುವ ತೂಕದ ಪ್ರಮಾಣವನ್ನು ಸರಿಯಾದ ಹಾಗೂ ನ್ಯಾಯಸಮ್ಮತವಾದ ರೀತಿಯಲ್ಲಿ ನಿಗದಿಪಡಿಸಬೇಕು. ಇಂದು ದಕ್ಷಿಣದ ರಾಜ್ಯಗಳಲ್ಲಿ ಇರುವ ಉದ್ಯೋಗಾವಕಾಶಗಳಿಂದಾಗಿ ದೊಡ್ಡ ಮಟ್ಟದ ಒಳ ವಲಸೆ ಆಗುತ್ತಿದೆ. ದಕ್ಷಿಣದ ರಾಜ್ಯಗಳು ತೆರಿಗೆ ಹಂಚಿಕೆಯಲ್ಲಿ ವಲಸೆಗೆ ನೀಡಲಾಗುವ ತೂಕದ ಪ್ರಮಾಣವನ್ನು ಹೆಚ್ಚಿಸಲು ಕೋರಬೇಕು. ಇದರ ಜೊತೆಗೆ ಉತ್ತಮ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಹಣ ನೀಡುವುದರ ಮೂಲಕ ಇಂತಹ ಯೋಜನೆಗಳನ್ನು ಮುಂದುವರೆಸುವುದನ್ನು ಪ್ರೋತ್ಸಾಹಿಸಲು ಕೇಂದ್ರಕ್ಕೆ ಕೋರಬೇಕು.

15ನೇ ಹಣಕಾಸು ಆಯೋಗಕ್ಕೆ ನೀಡಲಾಗಿರುವ ಮಾರ್ಗಸೂಚಿಯಲ್ಲಿ ರಾಜ್ಯಗಳಿಗೆ ನೀಡಲಾಗುತ್ತಿರುವ 42% ದುಡ್ಡನ್ನು ಮರುಪರಿಶೀಲಿಸುವ ಬಗ್ಗೆ ಹೇಳಲಾಗಿದೆ. ಕೇಂದ್ರ ಇದರಲ್ಲಿ ಮೂಗು ತೂರಿಸದಂತೆ ನೋಡಿಕೊಳ್ಳಬೇಕು ಹಾಗೂ ದಕ್ಷಿಣದ ರಾಜ್ಯಗಳು ಈ ಸೂಚನೆಯನ್ನು ಬಲವಾಗಿ ವಿರೋಧಿಸಬೇಕು. ರಾಜ್ಯಗಳ ಏಳಿಗೆಗೆ ಈಗಿರುವ ಆದಾಯವನ್ನು ಕಾಪಾಡಿಕೊಂಡು ಹೆಚ್ಚಿಸಿಕೊಳ್ಳಬೇಕೇ ಹೊರತು ಕಡಿಮೆಯಾಗಿಸಬಾರದು.

ಮಾರ್ಗಸೂಚಿಯಲ್ಲಿರುವ ಮತ್ತೊಂದು ದೊಡ್ಡ ತೊಂದರೆ ಎಂದರೆ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಜಾರಿಗೆ ತರುವ ರಾಜ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ. ಪ್ರತಿಯೊಂದು ರಾಜ್ಯದ ಅಗತ್ಯಗಳು ಬೇರೆ ರೀತಿಯದ್ದಾಗಿರುತ್ತದೆ, ಅದಕ್ಕೆ ಬೇಕಿರುವ ಯೋಜನೆಗಳನ್ನು ಮಾಡಿಕೊಳ್ಳಲು ರಾಜ್ಯಗಳು ಸಶಕ್ತವಾಗಿವೆ ಹಾಗೂ ಬಹುತೇಕ ಎಲ್ಲ ನಾಗರೀಕ ಸೇವೆಗಳನ್ನು ನೀಡುತ್ತಿರುವುದು ರಾಜ್ಯ ಸರಕಾರಗಳೇ. ವಾಸ್ತವಕ್ಕೆ ದೂರವಾಗಿರುವ ಕೇಂದ್ರ ಯೋಜನೆಗಳು ರಾಜ್ಯ ಸರಕಾರಗಳನ್ನು ಕಡಿಮೆ ಪ್ರಯೋಜನದ ಅಥವಾ ಇಲ್ಲದ ಸಮಸ್ಯೆಗೆ ದುಡ್ಡನ್ನು ಖರ್ಚು ಮಾಡಲು ಪ್ರೇರೇಪಿಸುತ್ತದೆ. ಒಂದು ಉದಾಹರಣೆಗೆ: ಉತ್ತರ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆದ ಮಕ್ಕಳ ಸಾವಿನ ಪ್ರಕರಣಕ್ಕಿಂತ ಸ್ಮಾರ್ಟ್ ಸಿಟಿ ಅಥವಾ ಡಿಜಿಟಲ್ ಇಂಡಿಯಾಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದರಲ್ಲಿ ಏನು ಅರ್ಥವಿದೆ?

ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ರದ್ದುಗೊಳಿಸಬೇಕು ಮತ್ತು ಅದರಿಂದ ಉಳಿವ ಹಣವು ಕೇಂದ್ರದ ಬೊಕ್ಕಸಕ್ಕೆ ಹೋಗದೆ ನ್ಯಾಯಯುತವಾಗಿ ರಾಜ್ಯಗಳಿಗೆ ಹಂಚಿಕೆಯಾಗಬೇಕು. ಒಂದು ರಾಜ್ಯದ ಜನರ ಮೂಲಭೂತ ಅಭಿವೃದ್ಧಿಗೆ ಬೇಕಿರುವ ರಾಜ್ಯಗಳ ಆದಾಯದ ಕೊರತೆಯನ್ನುತುಂಬಿಕೊಡುವ ವ್ಯವಸ್ಥೆಯನ್ನು  ಸಂವಿಧಾನದ ಆಶಯದಂತೆ ರಕ್ಷಿಸಬೇಕು.

 1. ರಾಜ್ಯಗಳ ಹಕ್ಕುಗಳು

ಸಂವಿಧಾನದ ಜಂಟಿ ಪಟ್ಟಿಯಲ್ಲಿ ಇರುವ ವಿಷಯಗಳನ್ನು ರಾಜ್ಯದಪಟ್ಟಿಗೆ ಸೇರಿಸಬೇಕು ಅದರಲ್ಲೂ ರಾಜ್ಯದ ಆಡಳಿತಕ್ಕೆ ಸಂಬಂಧ ಪಟ್ಟ ವಿಷಯಗಳಿಗೆ ಮೊದಲ ಆದ್ಯತೆ.

ಭಾರತದಲ್ಲಿ ಅಂತರ್ಗತವಾಗಿರುವ ವೈವಿಧ್ಯತೆಯ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರದ ನಡುವೆ ಅಧಿಕಾರದ ಹಂಚಿಕೆ ಸಮತೋಲನದಿಂದ ಕೂಡಿರಬೇಕು. ರಾಜ್ಯಗಳ ಆಂತರಿಕ ವಿಷಯಗಳಲ್ಲಿ ರಾಜ್ಯಸರ್ಕಾರಕ್ಕೆ ಸರ್ವೋಚ್ಚ ಅಧಿಕಾರವಿರಬೇಕು. ಈ ಮೂಲಕ ಒಕ್ಕೂಟ ತತ್ವದ ತಳಹದಿಯನ್ನು ಎತ್ತಿ ಹಿಡಿಯಬೇಕು. ಕೇಂದ್ರೀಕರಣಕ್ಕೆ ಕಾರಣವಾಗುವ ಯಾವುದೇ ಭಾರತ ಸರಕಾರದ ನೀತಿಗಳನ್ನು ಪರಿಶೀಲಿಸಿ, ಭಾರತ ಸರಕಾರ ಅನಿಯಂತ್ರಿತವಾಗಿ ಅಧಿಕಾರಗಳನ್ನು ತನ್ನ ಹಿಡಿತಕ್ಕೆ ತಗೆದುಕೊಳ್ಳುವುದನ್ನು ತಡೆಯಬೇಕು. ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ಕಾವಲು ನಾಯಿಗಳಾಗಿ ಕೆಲಸ ಮಾಡಬೇಕು.

ದಕ್ಷಿಣ ರಾಜ್ಯಗಳ ಒಕ್ಕೂಟವು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸಬೇಕು ಉದಾ: ಭಾಷೆ, ಆಹಾರ, ಸಾಮಾಜಿಕ-ಸಾಂಸ್ಕೃತಿಕ ವಿಷಯಗಳು ಹಾಗೂ ಸಂಪ್ರದಾಯಗಳು. ಪ್ರತ್ಯೇಕ ವಿಷಯ ಪಟ್ಟಿಗಳ ಮೂಲಕ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರವನ್ನು ಬೇರ್ಪಡಿಸಬೇಕು. ಈ ಮೂಲಕ ಸೇವೆಗಳನ್ನು ನೀಡಬೇಕಾಗಿರುವುದು ಯಾರ ಹೊಣೆಗಾರಿಕೆ ಎನ್ನುವುದು ಸ್ಪಷ್ಟವಾಗುತ್ತದೆ ಹಾಗೂ ಈ ವಿಂಗಡಣೆಯಿಂದಾಗಿ ಆಯಾ ಸೇವೆಗಳನ್ನು ನೀಡುವ ಸರಕಾರಕ್ಕೆ ಹೆಚ್ಚಿನ ಹೊಣೆಗಾರಿಕೆ ಬರುತ್ತದೆ, ಇದರಿಂದಾಗಿ ಜನರಿಗೆ ಒಳಿತಾಗುತ್ತದೆ.

ಉದಾಹರಣೆಗೆ ಶಿಕ್ಷಣದ ವಿಷಯವನ್ನೇ ತಗೆದುಕೊಳ್ಳಿ, ಮೂಲಭೂತ ಸೌಕರ್ಯದಿಂದ ಹಿಡಿದು ಶಿಕ್ಷಕರ  ಸಂಬಳಕ್ಕೆ ಬೇಕಿರುವ ಅಗಾಧ ಸಂಪನ್ಮೂಲವನ್ನು ರಾಜ್ಯ ಸರಕಾರವು ನಗರಗಳು, ಪಟ್ಟಣಗಳು ​​ಮತ್ತು ಹಳ್ಳಿಗಳ ಉದ್ದಗಲಕ್ಕೂ ವೈದ್ಯರು, ಎಂಜಿನಿಯರುಗಳು, ಬ್ಯಾಂಕರ್ಗಳು ಮತ್ತು ಸಾಮಾಜಿಕ ವಿಜ್ಞಾನಿಗಳಿಗೆ ಜ್ಞಾನ ಮತ್ತು ಕೌಶಲಗಳನ್ನು ಸೃಷ್ಟಿಸಲು ಖರ್ಚು ಮಾಡುತ್ತದೆ. ಇಷ್ಟಾದರೂ ಕೇಂದ್ರ ಸರಕಾರ ಪ್ರವೇಶ ಪರೀಕ್ಷೆಗೆ ಯಾವ ನಿಯಮಗಳನ್ನು ಹೊಂದಿರಬೇಕು ಎಂದು ಯಾಕೆ ನಿರ್ದೇಶಿಸುತ್ತದೆ? ಕರ್ನಾಟಕದ ಒಳನಾಡಿನಲ್ಲಿ ಕೆಲಸ ಮಾಡುವ ಸಹಕಾರಿ ಬ್ಯಾಂಕ್ ನ ಸಿಬ್ಬಂದಿಯ ನೇಮಕಾತಿಯ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ನಡೆಯಬೇಕು ಎನ್ನುವ ನಿಯಮವನ್ನು ಕೇಂದ್ರ ಸರಕಾರ ಮಾಡುತ್ತದೆ. ಹೀಗೆ ಶಿಕ್ಷಣ ಹಾಗೂ ಸಾಮಾಜಿಕ-ಆರ್ಥಿಕ ಅಗತ್ಯತೆಗಳು ಬೇರ್ಪಡುತ್ತವೆ ಮತ್ತು ಶಿಕ್ಷಣದ ಮಟ್ಟ ಹೆಚ್ಚಿದರೂ ಸಹ ಅದಕ್ಕೆ ತಕ್ಕ ಬೆಳವಣಿಗೆ ರಾಜ್ಯಗಳಲ್ಲಿ ಕಾಣುವುದಿಲ್ಲ.

ಪ್ರಜೆಗಳ ದಿನ ನಿತ್ಯದ ಅಗತ್ಯಗಳನ್ನು ಪೂರೈಸುವ ಎಲ್ಲಾ ಸಾರ್ವಜನಿಕ ಸೇವೆಗಳನ್ನು ರಾಜ್ಯ ಸರಕಾರಗಳೇ ಒದಗಿಸುತ್ತಿವೆ ಹೊರತು ಕೇಂದ್ರ ಸರ್ಕಾರವಲ್ಲ. ಬಂದರುಗಳ ಸುಧಾರಣೆ, ಅಥವಾ ಕೃಷಿ ಉತ್ಪಾದಕತೆ ಅಥವಾ ಸಾರ್ವಜನಿಕ ಆರೋಗ್ಯ ಮುಂತಾದ ಅನೇಕ ಆಡಳಿತಾತ್ಮಕ ಸಮಸ್ಯೆಗಳು ಸಂಕೀರ್ಣವಾಗಿದ್ದು ಮತ್ತು ಅದಕ್ಕೆ ಆಯಾ ಕ್ಷೇತ್ರದ ಪರಿಣಿತಿ ಹೊಂದಿರಬೇಕಾದ ಅಗತ್ಯವಿರುತ್ತದೆ ಮತ್ತು ಈ ವಿಷಯಗಳು ಸ್ಥಳೀಯವಾಗಿ ನಿರ್ಧಾರವಾಗುವಂತಹವು. ಇದಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಸಹ ಹೊರತಾಗಿಲ್ಲ. ಆದರೂ ಸಹ ಭಾರತದ ಅಧಿಕಾರಿ ವರ್ಗ ಕೇಂದ್ರದಿಂದಲೇ ನಿಯಂತ್ರಿಸಲ್ಪಡುತ್ತದೆ.

ರಾಜ್ಯಗಳ ಆಡಳಿತದ ದಕ್ಷತೆಯನ್ನು ಹೆಚ್ಚಿಸಲು ರಾಜ್ಯಮಟ್ಟದ ನಾಗರಿಕ ಸೇವೆಗಳ ಮೂಲಕ ಮಾಡಬಹುದು. ಆಲ್ ಇಂಡಿಯಾ ಸೇವೆಗಳ ಅಧಿಕಾರ ಮತ್ತು ವ್ಯಾಪ್ತಿಯನ್ನು ಕಡಿಮೆಗೊಳಿಸಲು ದಕ್ಷಿಣ ರಾಜ್ಯಗಳ ಸಮೂಹ ಶಿಫಾರಸು ಮಾಡಬೇಕು; ಭಾರತದ ಬಹುಪಾಲು ಆಡಳಿತವು ಅಸ್ತಿತ್ವದಲ್ಲಿರಬೇಕಾದ  ರಾಜ್ಯಗಳಲ್ಲಿ ಅತ್ಯುತ್ತಮ ಪ್ರತಿಭೆಯನ್ನು ನಿಯೋಜಿಸಬೇಕು. ಪ್ರತಿ ರಾಜ್ಯದ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ಬೇಕಾದ ಕ್ಷೇತ್ರೀಯ ಪರಿಣಿತಿಯನ್ನು ಬೆಳೆಸಲು ಆದ್ಯತೆ ನೀಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಪೊಲೀಸ್ ಸೇವೆಗೂ ಸಹ ಇದೆ ಮಾನದಂಡವಾಗಿರಬೇಕು. ಯಾವುದೇ ಕೇಡರ್ ಅಥವಾ ಅಧಿಕಾರವನ್ನು ನಿಯಂತ್ರಿಸುವುದು ಕೇಂದ್ರದ ಹೊಣೆಗಾರಿಕೆಯಾಗಿರದೆ ರಾಜ್ಯಗಳ ಅಧಿಕಾರದ ವ್ಯಾಪ್ತಿಯಲ್ಲಿ ಬರಬೇಕು.

 1. ಸಾಂಸ್ಕೃತಿಕ ವೈವಿಧ್ಯತೆ

ಆಯಾ ರಾಜ್ಯದ ಭಾಷೆ ಹಾಗೂ ಇಂಗ್ಲಿಷ್ ಭಾಷೆ ಇರುವ ಎರಡು ಭಾಷೆಯ ಭಾಷಾ ನೀತಿಯ ಅನುಷ್ಠಾನಕ್ಕೆ ರಾಜ್ಯಗಳು ಒತ್ತಾಯಿಸಬೇಕು. ಇಂಗ್ಲಿಷ್ ಭಾಷೆಯೊಂದೇ ಭಾರತದ ಉದ್ದಗಲಕ್ಕೂ ಸಂಪರ್ಕ ಭಾಷೆಯಾಗಿ ಕೆಲಸ ಮಾಡಬೇಕು. ಹಿಂದಿಯೇತರ ಭಾಷಿಕರ ವಿರುದ್ಧ ಯಾವುದೇ ತಾರತಮ್ಯ ಇರಕೂಡದು ಹಾಗೂ ಕೇಂದ್ರದ ನಿಧಿಯಲ್ಲಿ ಅಥವಾ ಸಾರ್ವಜನಿಕ ಸೇವೆಗಳಲ್ಲಿ ಹಿಂದಿ ಭಾಷಿಕರಿಗೆ ವಿಶೇಷ ಸವಲತ್ತುಗಳು ಇರಕೂಡದು. ಅನನ್ಯ ಹಾಗೂ ಪುರಾತನವಾಗಿರುವ ದಕ್ಷಿಣ ಭಾರತದ ಪರಂಪರೆಯನ್ನು ಪರಿಶೋಧಿಸಬೇಕು ಹಾಗೂ ಕಾಪಾಡಿಕೊಳ್ಳಬೇಕು.

ಸಾಮಾಜಿಕ-ಸಾಂಸ್ಕೃತಿಕ ವಿಷಯಗಳಲ್ಲಿ ಕೇಂದ್ರೀಕೃತ ವಿಧಾನ ಬಳಸುವುದು ದಕ್ಷಿಣ ಭಾರತದ ಸಾಮಾಜಿಕ ಅಂಶಗಳನ್ನು, ಭಾಷೆಗಳನ್ನು, ಸ್ಥಳೀಯ ಗುಂಪುಗಳನ್ನು ಹಾಗೂ ಆಹಾರ ಪದ್ಧತಿಯನ್ನು ಕಡೆಗಣಿಸಿದಂತಾಗುತ್ತದೆ.

ವಾಸ್ತವವಾಗಿ ದಕ್ಷಿಣದ ರಾಜ್ಯಗಳು ಪುರಾತನ ದ್ರಾವಿಡ ಸಾಂಸ್ಕೃತಿಕ ಮತ್ತು ಭಾಷಾಶಾಸ್ತ್ರದ ಇತಿಹಾಸವನ್ನು ಹಂಚಿಕೊಂಡಿವೆ ಮತ್ತು ಅವುಗಳನ್ನು ಸಂರಕ್ಷಿಸುವ, ಬೆಳೆಸುವ ಮತ್ತು ಸಂಭ್ರಮಿಸುವ ಕೆಲಸವನ್ನು ಈ ರಾಜ್ಯಗಳೇ ಸೇರಿ ಮಾಡಬಹುದು.

ದಕ್ಷಿಣದ ರಾಜ್ಯಗಳ ಸಮೂಹವು ಸೇರಿ ಮಾಡಬೇಕಾಗಿರುವ ಕೆಲಸಗಳು:

 • ಸಂವಿಧಾನದಲ್ಲಿ ಹಿಂದಿ ಭಾಷೆಗೆ ಕೊಡಮಾಡಿರುವ ಎಲ್ಲಾ ಸವಲತ್ತುಗಳನ್ನು ತಗೆದು ಹಾಕಬೇಕು
 • ಎಲ್ಲಾ ಸಾರ್ವಜನಿಕ ಸೇವೆಗಳು ಎಲ್ಲಾ ಸ್ಥಳೀಯ ಭಾಷೆಗಳ್ಲಲಿ ದೊರೆಯುವಂತೆ ಮಾಡಬೇಕು. ಉದಾ: ರಾಷ್ಟ್ರೀಕೃತ ಬ್ಯಾಂಕ್, ಕೋರ್ಟ್, ರಸ್ತೆಗಳು, ಸಾರಿಗೆ ಮಾಹಿತಿ, ಅರ್ಜಿಗಳು ಮುಂತಾದವು
 • ಕಾಲಾಂತರದಲ್ಲಿ ರಾಷ್ಟ್ರೀಯ ಮಟ್ಟದ ಕೆಲಸಗಳಲ್ಲಿ, ಸೇನೆಯಲ್ಲಿ ಇಂಗ್ಲೀಷ್ ಭಾಷೆಯ ಜೊತೆಗೆ ಎಲ್ಲಾ ಭಾಷೆಗಳ ಬಳಕೆ.

ಇದುವರೆಗೂ ಮತ್ತು ಮುಂದೆ

ಪ್ರಜಾಪ್ರಭುತ್ವದಲ್ಲಿ ಜನಲಕ್ಷಣವೇ  ಆರ್ಥಿಕ ಹಾಗೂ ರಾಜಕೀಯವಾದ ಸರಕು. ಅಸಮಾನವಾದ ಏಳಿಗೆಯೆನ್ನುವುದು ಎರಡಂಚಿನ ಕತ್ತಿ ಇದ್ದ ಹಾಗೆ. ಕೇಂದ್ರ ಸರಕಾರದ ನೀತಿಗಳು ರಾಜ್ಯಗಳ ಸಾಮಾಜಿಕ-ಆರ್ಥಿಕ ಸಾಧನೆಗಳನ್ನು ಪ್ರೋತ್ಸಾಹಿಸುವಂತಿರಬೇಕು, ರಾಜ್ಯಗಳ ಬೆಳವಣಿಗೆಯು ಕೇವಲ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಹೆಚ್ಚಿನ ತಲಾದಾಯ ಹೊಂದುವುದು ಮಾತ್ರವಲ್ಲದೆ ಅದನ್ನು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೆಚ್ಚಿಸಲು ಉಪಯೋಗಿಸಿಕೊಳ್ಳುವಂತಿರಬೇಕು.

ಕೇಂದ್ರ ಸರಕಾರವು ತನ್ನ ಮುಖ್ಯ ಕೆಲಸಗಳಾದ ರಕ್ಷಣೆ, ವಿದೇಶ ಸಂಬಂಧ, ಕರೆನ್ಸಿ, ರಾಷ್ಟ್ರವ್ಯಾಪಿ ಮಾರುಕಟ್ಟೆ ಮತ್ತು ಕೆಲವು ಮೂಲಭೂತ ಮೂಲಸೌಕರ್ಯಗಳನ್ನು ಹೊರತುಪಡಿಸಿ ಇತರೇ ವಿಷಯಗಳನ್ನು ರಾಜ್ಯಗಳಿಗೆ ಬಿಟ್ಟು ಕೊಡಬೇಕು. ಈ ಮೂಲಕ ರಾಜ್ಯಗಳಿಗೆ ತಮಗಿರುವ ನಿಜವಾದ ಶಕ್ತಿಯ ಪರಿಚಯ ಮಾಡಿಕೊಡಬೇಕು.

ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಿದಾಗ ಮಾತ್ರ ಜನರು ತಮ್ಮ ಮತಕ್ಕೆ ಜವಾಬ್ದಾರರಾಗಿರುತ್ತಾರೆ. ಅವರು ಬಿತ್ತಿದ್ದನ್ನೇ ಬೆಳೆಯುತ್ತಾರೆ. ಹೆಚ್ಚಿನ ಜವಾಬ್ದಾರಿಯನ್ನು ಸ್ಥಳೀಯ ಮಟ್ಟದಲ್ಲಿ ವಹಿಸಿದಾಗ ಅದು ಅದಕ್ಕೆ ತಕ್ಕ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ, ಈ ಮೂಲಕ ಫಲಿತಾಂಶ ಉತ್ತಮಗೊಳ್ಳುವಂತೆ ಮಾಡುತ್ತದೆ. ಅದೇ ರೀತಿ ಸ್ಥಳೀಯ ಏಳಿಗೆ ಸ್ಥಳೀಯವಾಗಿ ದುಡಿದ ಆದಾಯದಿಂದ ಮಾಡಿದಲ್ಲಿ ಸರಕಾರಗಳು ಹೆಚ್ಚಿನ ಹಣಕಾಸಿನ ಜವಾಬ್ದಾರಿ ವಹಿಸಿಕೊಳ್ಳುತ್ತವೆ. ಇದೇ ದುಡ್ಡು ಬೇರೆಡೆಯಿಂದ ಬಂದಲ್ಲಿ ಈ ಹೊಣೆಗಾರಿಕೆ ಇರುವುದಿಲ್ಲ.

ದಕ್ಷಿಣ ರಾಜ್ಯಗಳ ಒಕ್ಕೂಟದ ಮಂತ್ರ ಒಂದೇ ಆಗಿರಬೇಕು ಅದು ಒಕ್ಕೂಟ ತತ್ವವನ್ನು ಕೇಂದ್ರದಲ್ಲಿ ಇಟ್ಟುಕೊಂಡು ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ಪಡೆಯುವುದು. ಇದು ಭಾರತದಾದ್ಯಂತ ಇರಬೇಕಾದ ತತ್ವವಾಗಿದೆ. ದುರದೃಷ್ಟಕರ ಸಂಗತಿಯೆಂದರೆ ಹಿಂದಿ ಭಾಷಿಕ ರಾಜ್ಯಗಳು ಈ ಮೇಲಿನ ಸಂಗತಿಗಳನ್ನು ಒಪ್ಪಿಕೊಳ್ಳದೆ ಇರಬಹುದು ಇದಕ್ಕೆ ಕಾರಣ ಕೇಂದ್ರ ಸರಕಾರದ ಮೇಲಿನ ಅವುಗಳ ಅತೀವ ಅವಲಂಬನೆ ಹಾಗೂ ಆ ರಾಜ್ಯಗಳಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಗಳು.

ಈ ಬೇಡಿಕೆಗಳು ಒಂದು ಮೇಲು ಮೇಲಿನ ಆಡಳಿತದ ಪರಿಕಲ್ಪನೆಯಲ್ಲ. ಭಾರತದಂತಹ ಹಲವು ರಾಜ್ಯಗಳ ಒಕ್ಕೂಟಕ್ಕೆ ಬೇಕಾದ ಆಡಳಿತದಲ್ಲಿನ ವೈವಿಧ್ಯತೆಯನ್ನು ಸಮನ್ವಯಗೊಳಿಸಲು ಪ್ರಯತ್ನಿಸುತ್ತದೆ.

ಈ ಮಾರ್ಗಸೂಚಿ ಕೇವಲ ಆರಂಭ ಮಾತ್ರ. ಒಂದು ವೇಳೆ ಇವುಗಳನ್ನು ಅಳವಡಿಸಿಕೊಂಡಲ್ಲಿ, ಸಂಸ್ಕರಿಸಿದಲ್ಲಿ ಮತ್ತು ಜಾರಿಗೆ ತಂದಲ್ಲಿ ಇದು ಭಾರತವನ್ನು ಹೆಚ್ಚು ದೃಢವಾದ ಮತ್ತು ಪ್ರಬುದ್ಧವಾದ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವನ್ನಾಗಿಸುತ್ತದೆ. ಆಗ ಇದು ನಿಜವಾಗಿಯೂ ಜನರಿಂದಾದ ಪ್ರಜಾಪ್ರಭುತ್ವ ಎನ್ನಿಸಿಕೊಳ್ಳುತ್ತದೆ.

ಕಾವೇರಿ ನಿರ್ವಹಣಾ ಮಂಡಳಿ – ಯಾರಿಗೆ ಒಳಿತು? ಯಾರಿಗೆ ಕೆಡಕು?

Authored by : Chetan Jeeral

ದಕ್ಷಿಣ ಕರ್ನಾಟಕದ ಜೀವನಾಡಿಯಾಗಿರುವ ಕಾವೇರಿ ನದಿ ನೀರಿನ ಹಂಚಿಕೆ ಹಲವಾರು ದಶಕಗಳಿಂದ ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳ ನಡುವೆ ನಡೆಯುತ್ತಲೇ ಬಂದಿರುವುದು ನಮ್ಮೆಲರಿಗೂ ಗೊತ್ತಿರುವ ವಿಚಾರವೇ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಹಾಗು ಕೇರಳ ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ಮಾಡಲು ನ್ಯಾಯಾಧಿಕಾರಣವನ್ನು ಸ್ಥಾಪಿಸಲಾಗಿತ್ತು. ಈ ನ್ಯಾಯಾಧಿಕಾರಣವು 2007 ರಲ್ಲಿ ಅಂತಿಮ ನದಿ ನೀರು ಹಂಚಿಕೆಯನ್ನು ಮಾಡಿತು. ಈ ಹಂಚಿಕೆಯನ್ನು ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯವು ಒಪ್ಪದಿದ್ದರೂ ಕೇಂದ್ರ ಸರಕಾರ ಗೆಜೆಟ್ ನಲ್ಲಿ ಪ್ರಕಟಿಸಿ ಸಾಂವಿಧಾನಿಕ ಮಾನ್ಯತೆಯನ್ನು ತಂದು ಕೊಟ್ಟಿತು. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಅದರಲ್ಲೂ ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳು ಸುಪ್ರೀಂ ಕೋರ್ಟ್ ನಲ್ಲಿ ಈಗಲೂ ನದಿ ನೀರು ಹಂಚಿಕೆಯ ವಿಷಯವಾಗಿ ತಮಗೆ ನ್ಯಾಯ ಕೊಡಿಸುವಂತೆ ಹೋರಾಡುತ್ತಿವೆ.

ಹಲವು ದಶಕಗಳಿಂದ ನಡೆಯುತ್ತಲೇ ಬಂದಿರುವ ಕಾವೇರಿ ನದಿ ನೀರು ಹಂಚಿಕೆ ವಿಚಾರ ಹಲವು ಮಜಲುಗಳನ್ನು ದಾಟಿ ಬಂದಿದೆ. ಒಂದು ನ್ಯಾಯಾಧಿಕರಣ, ನದಿ ನೀರು ಪ್ರಾಧಿಕಾರ, ನಿರ್ವಹಣಾ ಮಂಡಳಿ, ಅದರ ಅಡಿಯಲ್ಲಿ ಸಮಿತಿಗಳು ಹೀಗೆ ಹಲವಾರು ಸಮಿತಿಗಳು ಆಗಿ ಹೋಗಿವೆ ಹಾಗು ಇವುಗಳೆಲ್ಲದರ ಬಗ್ಗೆ ಕೋರ್ಟ್ ನಲ್ಲಿ ತಕರಾರುಗಳನ್ನು ಸಲ್ಲಿಸಲಾಗಿದೆ. ಈ ಯಾವುದೇ ಸಮಿತಿಗಳು ಬಗೆಹರಿಸಲಾಗದ ಸಮಸ್ಯೆಯನ್ನು ಕಾವೇರಿ ನಿರ್ವಹಣಾ ಮಂಡಳಿ ಬಗೆಹರಿಸಲು ಸಾಧ್ಯವೇ?

ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಿ ಎಂದ ಸುಪ್ರೀಂ ಕೋರ್ಟ್
ಸೆಪ್ಟೆಂಬರ್ 2016 ನದಿ ನೀರು ಹಂಚಿಕೆಯ ವಿಷಯವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನಾಲ್ಕು ವಾರದೊಳಗೆ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಆದರೆ ಈ ನ್ಯಾಯಮಂಡಳಿ ಸ್ಥಾಪನೆಗೆ ಕೇಂದ್ರ ಸರಕಾರ ವಿರೋಧಿಸಿತು, ಇದಕ್ಕೆ ಕಾರಣ ಕರ್ನಾಟಕದಲ್ಲಿ ನಡೆದ ದೊಡ್ಡ ಮಟ್ಟದ ಪ್ರತಿಭಟನೆ ಹಾಗು ಹೋರಾಟಗಳು. ಒಂದು ವೇಳೆ ಈ ನಿರ್ವಹಣಾ ಮಂಡಳಿ ಜಾರಿಗೆ ಬಂದಿದ್ದರೆ ಕರ್ನಾಟಕಕ್ಕೇ ತನ್ನ ರಾಜ್ಯದಲ್ಲಿ ಹರಿಯುವ ಕಾವೇರಿ ನದಿ ನೀರಿನ ಮೇಲಿನ ಹಿಡಿತವೇ ಕೈತಪ್ಪಿ ಹೋಗುತ್ತಿತ್ತು.

ಏನಿದು ಕಾವೇರಿ ನಿರ್ವಹಣಾ ಮಂಡಳಿ?
ಕಾವೇರಿ ನದಿ ನೀರು ಹಂಚಿಕೆಯನ್ನು ಮಾಡಲು ನಿಯೋಜಿಸಲಾಗಿದ್ದ ನ್ಯಾಯಾಧಿಕರಣ ತಾನು 2007 ರಲ್ಲಿ ನೀಡಿರುವ ತೀರ್ಪನ್ನು ಜಾರಿಗೆ ತರಲು ಕಾವೇರಿ ನಿರ್ವಹಣಾ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಹೇಳಿತ್ತು. ಈ ಮಂಡಳಿಯು ಕೇಂದ್ರ ಸರಕಾರದ ಜಲಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತದೆ ಹಾಗು ಮಂಡಳಿಗೆ ತೀರ್ಪಿನ ಪ್ರಕಾರ ನೀರು ಹಂಚಿಕೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿದೆ.

ಕಾವೇರಿ ನಿರ್ವಹಣಾ ಮಂಡಳಿಯ ಸದಸ್ಯರು ಯಾರು?
ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ಒಬ್ಬ ಪೂರ್ಣಾವಧಿಯ ಅಧ್ಯಕ್ಷರು ಹಾಗು ಕೇಂದ್ರದಿಂದ ನಾಮಕರಣಗೊಂಡ ಇಬ್ಬರು ಸದಸ್ಯರು ಇರುತ್ತಾರೆ. ಅಧ್ಯಕ್ಷ ಪದವಿಗೆ ಆಯ್ಕೆಯಾಗುವವರು ಜಲ ಸಂಪನ್ಮೂಲ ನಿರ್ವಹಣೆಯಲ್ಲಿ 20 ವರ್ಷ ಕ್ಕಿಂತ ಹೆಚ್ಚು ಅನುಭವವುಳ್ಳ ಮುಖ್ಯ ಇಂಜಿನೀಯರ್ ಹುದ್ದೆ ಹೊಂದಿರಬೇಕು. ಕೇಂದ್ರ ನಿಯೋಜಿಸುವ ಇಬ್ಬರು ಸದಸ್ಯರಲ್ಲಿ ಒಬ್ಬರು ಮುಖ್ಯ ಇಂಜಿನೀಯರ್ ಹುದ್ದೆ ಹೊಂದಿರುವ ನೀರಾವರಿ ಇಂಜಿನೀಯರ್ ಆಗಿರಬೇಕು ಇವರಿಗೆ ಜಲಾಶಯಗಳ ಉಸ್ತುವಾರಿ, ನಿರ್ವಹಣೆ ಹಾಗು ದೊಡ್ಡ ನೀರಾವರಿ ಯೋಜನೆಗಳನ್ನು ನಿರ್ವಹಿಸುವ ಅನುಭವ 15 ವರ್ಷಕ್ಕಿಂತ ಹೆಚ್ಚಿರಬೇಕು. ಇನ್ನೊಬ್ಬ ಕೃಷಿ ಕ್ಷೇತ್ರದಲ್ಲಿ ಪರಿಣಿತರಾಗಿರಬೇಕು ಹಾಗು ಕೃಷಿ ಅರ್ಥಶಾಸ್ತ್ರದಲ್ಲಿ 15 ವರ್ಷಕ್ಕಿಂತ ಹೆಚ್ಚಿನ ಅನುಭವ ಇರಬೇಕು.

ಈ ಅಧ್ಯಕ್ಷರು ಹಾಗು ಸದಸ್ಯರ ಅವಧಿ 3 ವರ್ಷವಿದ್ದು ಇದನ್ನು 5 ವರ್ಷದ ತನಕ ವಿಸ್ತರಿಸಬಹುದು. ಇದಲ್ಲದೆ ಕೇಂದ್ರ ಸರಕಾರದ ಜಲಸಂಪನ್ಮೂಲ ಇಲಾಖೆ ಹಾಗು ಕೇಂದ್ರ ಕೃಷಿ ಇಲಾಖೆಯ ತಲಾ ಇಬ್ಬರು ಮುಖ್ಯ ಇಂಜಿನಿಯರ್ ಹುದ್ದೆಯ ಸದಸ್ಯರು ಈ ಮಂಡಳಿಯಲ್ಲಿ ಅರೆಕಾಲಿಕ ಸದಸ್ಯರಾಗಿರುತ್ತಾರೆ.
ಇವರನ್ನು ಹೊರತುಪಡಿಸಿ ಕರ್ನಾಟಕ, ತಮಿಳುನಾಡು, ಕೇರಳ ಹಾಗು ಪಾಂಡಿಚೇರಿ ರಾಜ್ಯಗಳಿಂದ ತಲಾ ಒಬ್ಬ ಸದಸ್ಯರನ್ನು ರಾಜ್ಯಗಳು ನೇಮಿಸಬೇಕು. ರಾಜ್ಯದಿಂದ ನಾಮಕರಣ ಆಗುವ ಸದಸ್ಯರು ಮುಖ್ಯ ಇಂಜಿನೀಯರ್ ಹುದ್ದೆಯವರಾಗಿರಬೇಕು ಹಾಗು ಇವರು ಈ ಮಂಡಳಿಯ ಅರೆಕಾಲಿಕ ಸದಸ್ಯರಾಗಿರುತ್ತಾರೆ. ಇದಲ್ಲದೆ ವ್ಯಾಜ್ಯಹೊಂದಿರುವ ರಾಜ್ಯಗಳನ್ನು ಹೊರತು ಪಡಿಸಿ ಬೇರೆ ರಾಜ್ಯದ ಒಬ್ಬ ನೀರಾವರಿ ಇಂಜಿನೀಯರ್ (ನಿರ್ದೇಶಕ ಸ್ಥಾನ) ಒಬ್ಬರು ಕಾರ್ಯದರ್ಶಿಯಾಗಿರುತ್ತಾರೆ.

ನಿರ್ವಹಣಾ ಮಂಡಳಿಯ ಸದಸ್ಯರಿಗಿರುವ ಅಧಿಕಾರವೇನು?
ಈ ನಿರ್ವಹಣಾ ಮಂಡಳಿಯು ಸಭೆಯಲ್ಲಿ ತಗೆದುಕೊಳ್ಳುವ ತೀರ್ಮಾನಗಳು ಒಪ್ಪಿತವಾಗಲು ಕನಿಷ್ಠ ಆರು ಮಂದಿ ಸದಸ್ಯರು ಹಾಜರಿರಬೇಕು ಹಾಗು ಸಭೆಯ ತೀರ್ಮಾನಗಳನ್ನು ಬಹುಮತದ ಆಧಾರದ ಮೇಲೆ ಒಪ್ಪಿಕೊಳ್ಳಲಾಗುತ್ತದೆ. ಈ ಸಮಿತಿಯು ರಾಜ್ಯಗಳ ಜೊತೆ ಚರ್ಚಿಸಿ ಹಾಗು ಕೇಂದ್ರ ಸರಕಾರದ ಒಪ್ಪಿಗೆಯ ಮೇರೆಗೆ ಮಂಡಳಿಯ ಪ್ರಧಾನ ಕಚೇರಿ ಎಲ್ಲಿರಬೇಕು ಎಂದು ನಿರ್ಧರಿಸಬಹುದು.
ಮಂಡಳಿಯ ನಿರ್ದೇಶಕರು ಸಭೆಗಳಿಗೆ ಕೇಂದ್ರ ಜಲ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಕೇಂದ್ರ (Indian Agriculture Research Institute) ಅಥವಾ ಬೇರೆ ಯಾವುದೇ ಸಂಸ್ಥೆ/ವಿಶ್ವವಿದ್ಯಾಲಯಗಳ ಜನರನ್ನು ವಿಶೇಷ ಅತಿಥಿಗಳಾಗಿ ಸಭೆಗೆ ಆಹ್ವಾನಿಸಬಹುದು ಅಥವಾ ಮಂಡಳಿ ತಗೆದು ಕೊಳ್ಳುವ ನಿರ್ಣಯಗಳನ್ನು ಜಾರಿಗೆ ತರಲು ಬಳಸಿಕೊಳ್ಳಬಹುದು.

ಮಂಡಳಿ ಹೇಗೆ ಕೆಲಸ ಮಾಡುತ್ತದೆ?
ಈ ಮಂಡಳಿಯು ಕಾವೇರಿ ನದಿ ಪಾತ್ರದಲ್ಲಿ ಲಭ್ಯವಿರುವ ನೀರಿನ ವಾಸ್ತವಾಂಶ ತಿಳಿಯಲು ಸುಸಜ್ಜಿತ ಸಂವಹನ ಜಾಲ ಹಾಗು ಮಾಹಿತಿ ರವಾನೆ ಮತ್ತು ಮಾಹಿತಿ ಪರಿಷ್ಕರಣೆ ಕೇಂದ್ರವೊಂದನ್ನು ಸ್ಥಾಪಿಸತಕ್ಕದ್ದು. ಈ ಕೆಲಸದ ಜವಾಬ್ದಾರಿಯನ್ನು ಕೇಂದ್ರ ಜಲ ಮಂಡಳಿ ಅಥವಾ ಕೇಂದ್ರ/ರಾಜ್ಯ ಸರಕಾರದ ಸಂಸ್ಥೆಗೆ ವಹಿಸಬಹುದು.

ಕೇಂದ್ರ ಜಲ ಮಂಡಳಿ (CWC) ಕರ್ನಾಟಕ ಹಾಗು ಕೇರಳದ ಗಡಿಯಲ್ಲಿ ಹೆಚ್ಚುವರಿ ನೀರು ಮಾಪನ ಕೇಂದ್ರಗಳನ್ನು ಸ್ಥಾಪಿಸಬೇಕು. ಇದು ಕೇರಳದಿಂದ ಕರ್ನಾಟಕದ ಒಳಗೆ ಹರಿಯುವ ಕಬಿನಿ ಹಾಗು ಅದರ ಉಪನದಿಗಳ ಒಳ ಹರಿವಿನ ಪ್ರಮಾಣ ಅರಿಯಲು. ಇದರ ಜೊತೆ ಕೇರಳದಿಂದ ತಮಿಳುನಾಡಿಗೆ ಕಬಿನಿ ಹಾಗು ಅದರ ಉಪನದಿಗಳಿಂದ ಲಭ್ಯವಾಗುವ ಉಪಯೋಗಿಸದ ನೀರನ ಪ್ರಮಾಣದ ಹರಿವಿನ ಮಾಹಿತಿ ಕಲೆಹಾಕಲು ಕೇರಳ ಹಾಗು ತಮಿಳುನಾಡು ರಾಜ್ಯದ ಗಡಿಯಲ್ಲಿ ಸ್ಥಾಪಿಸಬೇಕು.

ನಿರ್ವಹಣಾ ಮಂಡಳಿಯು ಬಿಳಿಗುಂಡ್ಲುವಿನ ಮಾಪನ ಕೇಂದ್ರದ ಹತ್ತಿರ ಕೃಷ್ಣರಾಜಸಾಗರ ಜಲಾಶಯ ಹಾಗು ಕಬಿನಿ ಮತ್ತು ಉಪನದಿಗಳಿಂದ ಕಾವೇರಿಗೆ ಸೇರುವ ನೀರಿನ ಪ್ರಮಾಣವನ್ನು ಅಳೆಯುವುದು. ಈ ಕೆಲಸವನ್ನು ಕಾವೇರಿ ನಿರ್ವಹಣಾ ಮಂಡಳಿಯು ರಾಜ್ಯದ ಅಧೀನದಲ್ಲಿರುವ ಸಂಸ್ಥೆಗಳು ಹಾಗು ಕಾವೇರಿ ನಿಯಂತ್ರಣ ಮಂಡಳಿಗಳ ಸಹಾಯದಿಂದ ಮಾಡುತ್ತದೆ.

ಕಾವೇರಿ ನಿರ್ವಹಣಾ ಮಂಡಳಿಯ ಗಮನವು ಕಾವೇರಿ ನದಿಪಾತ್ರದಲ್ಲಿರುವ ನೀರಿನ ಮಟ್ಟ, ಮಳೆಯ ಗತಿ, ಒಳಹರಿವಿನ ಪ್ರಮಾಣದ ವಿಮರ್ಶೆ ಮಾಡುವುದರ ಮೂಲಕ ರಾಜ್ಯಗಳಿಗೆ ಹಂಚಬೇಕಾದ ಪ್ರಮಾಣ ಹಾಗು ಸಮಯದ ಕಡೆ ಇರುತ್ತದೆ. ಒಂದು ವೇಳೆ ಮಳೆಯ ಪ್ರಮಾಣ ಕಡಿಮೆ ಇದ್ದಲ್ಲಿ, ನಿಯಂತ್ರಣ ಮಂಡಳಿ ನೀಡುವ ವರದಿಯ ಆಧಾರದ ಮೇಲೆ ರಾಜ್ಯಗಳಿಗೆ ಬೆಳೆಯಲು ಹೇಳಲಾಗಿರುವ ಬೆಳೆಯ ಆಧಾರದ ಮೇಲೆ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ನೀರಿನ ಪ್ರಮಾಣವನ್ನು ಕಡಿಮೆ ಮಾಡುವ ಬಗ್ಗೆ ಪರಿಗಣಿಸಬಹುದು.

ಮಂಡಳಿಯು ರಾಜ್ಯಗಳು ತಮ್ಮ ನದಿಪಾತ್ರದಲ್ಲಿರುವ ಎಲ್ಲಾ ಆಣೆಕಟ್ಟುಗಳು ಸರಿಯಾದ ವಿನ್ಯಾಸ ಹೊಂದಿವೆ ಅನ್ನುವುದರ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ರಾಜ್ಯಗಳ ಆಣೆಕಟ್ಟೆಯಿಂದ ಹೊರಬಿಡಲಾಗುವ ನೀರಿನ ಮಾಹಿತಿಯ ಬಗ್ಗೆ ಗಮನಹರಿಸುವುದರ ಜೊತೆಗೆ ಈ ಆಣೆಕಟ್ಟೆಗಳು ಸರಿಯಾದ ನಿಯಂತ್ರಣ ವಿನ್ಯಾಸ ಹೊಂದಿವೆ ಎನ್ನುವುದರ ಬಗ್ಗೆ ನಿಗಾವಹಿಸಬೇಕು. ಈ ಮಂಡಳಿಯು ರಾಜ್ಯಗಳಿಗೆ ಜಲಾಶಯಗಳಲ್ಲಿ ಹಿಂದಿನ ವರ್ಷದಿಂದ ಉಳಿಸಿಕೊಂಡಿರುವ ನೀರು, ಒಳ ಹರಿವು, ಹೊರ ಹರಿವು, ಮಳೆಯ ಮಾಹಿತಿ, ನೀರಾವರಿ ಪ್ರದೇಶದ ಮಾಹಿತಿ ಹಾಗು ಬಳಸಿಕೊಂಡಿರುವ ನೀರಿನ ಮಾಹಿತಿ ನೀಡುವುದಕ್ಕೆ ಹೇಳಬಹುದು.

ಕೇರಳದ ಬಾಣಾಸುರಸಾಗರ, ಕರ್ನಾಟಕದ ಹೇಮಾವತಿ, ಹಾರಂಗಿ, ಕಬಿನಿ ಮತ್ತು ಕೃಷ್ಣರಾಜಸಾಗರ ಹಾಗು ತಮಿಳುನಾಡಿನ ಕೆಲ ಭವಾನಿ, ಅಮರಾವತಿ ಹಾಗು ಮೆಟ್ಟೂರು ಜಲಾಶಯಗಳು ಕೇಂದ್ರ ನಿರ್ವಹಣಾ ಮಂಡಳಿಯ ನಿರ್ದೇಶನದ ಅನುಸಾರ ಆಯಾ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಕೃಷಿ, ವಿದ್ಯುತ್ ಉತ್ಪಾದನೆ, ಕುಡಿಯಲು ಹಾಗು ಕೈಗಾರಿಕೆ ಉಪಯೋಗಕ್ಕೆ ಬೇಕಿರುವ ನೀರಿನ ಪ್ರಮಾಣದ ಹಂಚಿಕೆ ಆಗಬೇಕು. ಉಳಿದ ನೀರನ್ನು ಹಾಗೆಯೇ ಉಳಿಸಿಕೊಳ್ಳುವ, ಪೋಲಾಗದಂತೆ ತಡೆಯುವ ಹೊಣೆ ರಾಜ್ಯಗಳದ್ದು.

ನಿರ್ವಹಣಾ ಮಂಡಳಿಗೆ ನೀಡಲಾಗಿರುವ ಮಾರ್ಗಸೂಚಿಗಳೇನು?
ನಿರ್ವಹಣಾ ಮಂಡಳಿಯು ಜಲವರ್ಷದ ಮೊದಲು ಅಂದರೆ ವರ್ಷದ ಜೂನ್ ತಿಂಗಳಿನಲ್ಲಿ ಜಲಾಶಯಗಳಲ್ಲಿ ಹಾಲಿ ಇರುವ ನೀರಿನ ಮಟ್ಟ ಎಷ್ಟು ಎಂದು ತಿಳಿದುಕೊಳ್ಳಬೇಕು. ಆ ವರ್ಷ ಎಷ್ಟು ಪ್ರಮಾಣದ ಮಳೆ ಬೀಳುತ್ತದೆ ಎನ್ನುವುದನ್ನು ನಿರ್ಧರಿಸಲಾಗದ ಕಾರಣ ಶೇ 50 % ನೀರು ಲಭ್ಯತೆಯ ಆಧಾರದ ಮೇಲೆ (ಅಂದರೆ 740 ಟಿ.ಎಂ.ಸಿ) ಪ್ರತಿ ರಾಜ್ಯಕ್ಕೂ ಎಷ್ಟು ನೀರು ಹಂಚಿಕೆಯಾಗಬೇಕು ಎಂದು ನಿರ್ಧರಿಸಲಾಗುವುದು.

ಆ ಋತುವಿನ ಮೊದಲ 10 ದಿನಗಳಲ್ಲಿ ಆಯಾ ರಾಜ್ಯದ ಪಾಲಿಗೆ ನೀಡಲಾಗಿರುವ ನೀರನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗುವುದು. ಆದರೆ ರಾಜ್ಯಗಳು ಪಡೆಯುವ ನೀರಿನ ಪ್ರಮಾಣ ಪ್ರತಿ ರಾಜ್ಯವು ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ಸಲ್ಲಿಸುವ ಪ್ರಸ್ತಾವನೆಗೆ ಅನುಗುವನಾಗಿ ನೀಡಲಾಗುತ್ತದೆ. ಒಂದು ವೇಳೆ ನೀರಿನ ಲಭ್ಯತೆ ನಾವು ಕೇಳಿದ್ದಕ್ಕಿಂತ ಹೆಚ್ಚಿದ್ದರೂ, ರಾಜ್ಯ ಕೇಳಿದಷ್ಟು ಮಾತ್ರವೇ ನೀರನ್ನು ಬಿಡುಗಡೆ ಮಾಡಲಾಗುತ್ತದೆ.

ಸಂಕಷ್ಟದ ಸಮಯದಲ್ಲಿ ನೀರಿನ ಹಂಚಿಕೆ ಹೇಗೆ?
ಸಾಮಾನ್ಯವಾಗಿ ಮುಂಗಾರು ಜೂನ್ ತಿಂಗಳ ಹೊತ್ತಿನಲ್ಲಿ ಕೇರಳ ರಾಜ್ಯವನ್ನು ಪ್ರವೇಶಿಸುತ್ತದೆ. ಒಂದು ವೇಳೆ ಮುಂಗಾರು ಪ್ರವೇಶ ನಿಧಾನವಾದಲ್ಲಿ ಕಬಿನಿ ಹಾಗು ಕೃಷ್ಣರಾಜಸಾಗರ ಜಲಾಶಯಗಳ ಒಳ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅಲ್ಲಿಂದ ನೀರಿನ ಬಿಡುಗಡೆಯು ತಡವಾಗಿ ಆಗುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧಿಕಾರಣವು ಮೇ ತಿಂಗಳ ಅಂತ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಉಳಿಸಿ ಎಂದು ಹೇಳಿದೆ.

ಸತತವಾಗಿ ಎರಡು ವರ್ಷ ಮಳೆ ಬರದೇ ಇದ್ದ ಪಕ್ಷದಲ್ಲಿ ಅದು ಸಂಕಷ್ಟದ ಪರಿಸ್ಥಿತಿಗೆ ದೂಕುತ್ತದೆ. ಇಂತಹ ಸಮಯದಲ್ಲಿ ಕಾವೇರಿ ನಿರ್ವಹಣಾ ಮಂಡಳಿಯು ನೀರು ಬಿಡುಗಡೆ ಮಾಡುವ ಗಡುವನ್ನು ಸಡಿಲಿಸಿ, ಲಭ್ಯತೆಯ ಆಧಾರದ ಮೇಲೆ ಯಾವುದೇ ರಾಜ್ಯಗಳಿಗೂ ಅನ್ಯಾಯವಾಗದಂತೆ ನೀರಿನ ಹಂಚಿಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನೀರು ಬಿಡುಗಡೆಯ ಸಮಯವನ್ನು ಮಂಡಳಿಯು ಬದಲಿಸುವ ಹಕ್ಕನ್ನು ಹೊಂದಿದೆ.

ರಾಜ್ಯಗಳು ಸಹಕರಿಸದ ಪಕ್ಷದಲ್ಲಿ?
ನಿರ್ವಹಣಾ ಮಂಡಳಿಗೆ ಅಥವಾ ಮಂಡಳಿಯ ಸದಸ್ಯರು ಅಥವಾ ಮಂಡಳಿಯಿಂದ ನೇಮಿಸಲ್ಪಟ್ಟಿರುವ ಪ್ರತಿನಿಧಿ ನ್ಯಾಯಾಧಿಕರಣದ ಆದೇಶವನ್ನು ಅನುಷ್ಠಾನಗೊಳಿಸಲು ಕಾವೇರಿ ನದಿಪಾತ್ರದಲ್ಲಿರುವ ಯಾವುದೇ ಜಾಗ, ಕಟ್ಟಡ ಅಥವಾ ಮಾಪನ ಕೇಂದ್ರಕ್ಕೆ ಹೋಗುವ ಅಧಿಕಾರವಿದೆ.
ಒಂದು ವೇಳೆ ನಿರ್ವಹಣಾ ಮಂಡಳಿಗೆ ತಮಿಳುನಾಡು, ಕೇರಳ, ಕರ್ನಾಟಕ ಅಥವಾ ಪಾಂಡಿಚೇರಿ ರಾಜ್ಯಗಳು ಸಹಕರಿಸುತ್ತಿಲ್ಲ ಎಂದು ಅನ್ನಿಸಿದ ಪಕ್ಷದಲ್ಲಿ ಅದು ಕೇಂದ್ರ ಸರಕಾರದ ಸಹಾಯ ಪಡೆಯಬಹುದು. ಒಂದು ವೇಳೆ ಯಾವುದಾದರೂ ರಾಜ್ಯ ಮಂಡಳಿಯ ಆದೇಶದಂತೆ ನೀರು ಬಿಡದ ಪಕ್ಷದಲ್ಲಿ ಅಥವಾ ತಡ ಮಾಡಿದಲ್ಲಿ, ಮಂಡಳಿಯು ಆ ರಾಜ್ಯಕ್ಕೆ ಸಿಗಬೇಕಿರುವ ನೀರಿನಲ್ಲಿ ಕಡಿತಗೊಳಿಸಬಹುದು.

ಮಂಡಳಿಯ ವೆಚ್ಚ ಯಾರು ಭರಿಸಬೇಕು?
ಮಂಡಳಿಯು ತನ್ನ ದಿನ ನಿತ್ಯದ ಕೆಲಸಗಳನ್ನು ನಿರ್ವಹಿಸಲು ತನ್ನದೇ ನಿಯಮಗಳನ್ನು ರೂಪಿಸಿಕೊಳ್ಳಬಹುದು. ಮಂಡಳಿಯ ಎಲ್ಲ ವೆಚ್ಚಗಳನ್ನು ರಾಜ್ಯ ಸರಕಾರಗಳು ಭರಿಸಬೇಕು. ಕೇರಳ – 15 %, ಕರ್ನಾಟಕ – 40 %, ತಮಿಳುನಾಡು – 40 % ಹಾಗು ಪಾಂಡಿಚೇರಿ – 15 %. ಆಯಾ ರಾಜ್ಯದ ಪ್ರತಿನಿಧಿಗಳ ವೆಚ್ಚವನ್ನು ರಾಜ್ಯಗಳೇ ಭರಿಸಬೇಕು. ನಿರ್ವಹಣಾ ಮಂಡಳಿಯ ಸೂಚನೆಯಂತೆ ಮಾಹಿತಿ ಕಲೆಹಾಕಲು ಬಳಸಲಾಗುವ ಯಂತ್ರೋಪಕರಣಗಳ ವೆಚ್ಚವನ್ನು ಸಂಬಂಧಿಸಿದ ರಾಜ್ಯಗಳು ಭರಿಸಬೇಕು.

ಕಾವೇರಿ ನಿರ್ವಹಣಾ ಮಂಡಳಿ ಸ್ವಾಯತ್ತತೆಗೆ ಮಾರಕ
ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳ ನಡುವೆ ವ್ಯಾಜ್ಯಗಳಿವೆ ನಿಜ ಆದರೆ ಈ ವ್ಯಾಜ್ಯವನ್ನು ಸರಿಪಡಿಸಲು ಕಾವೇರಿ ನಿರ್ವಹಣಾ ಮಂಡಳಿ ಜಾರಿಗೆ ಬಂದರೆ ಕಳ್ಳರಿಗೆ ಹಗ್ಗ ಕೊಟ್ಟು ನಮ್ಮ ಕಟ್ಟಿಸಿಕೊಂಡಂತೆ ಆಗುತ್ತದೆ ರಾಜ್ಯಗಳ ಪರಿಸ್ಥಿತಿ. ಕೇಂದ್ರ ಸರಕಾರ ಸ್ಥಾಪಿಸುವ ಯಾವುದೇ ಮಂಡಳಿಗಳು ಅದರ ಅಡಿಯಾಳುಗಳು ಎನ್ನುವುದು ಭಾರತದ ರಾಜಕೀಯ ಪರಿಸ್ಥಿತಿಯನ್ನು ಅರಿತುಕೊಂಡವರಿಗೆ ತಿಳಿದಿರುತ್ತದೆ. ಈ ಕಾವೇರಿ ನಿರ್ವಹಣಾ ಮಂಡಳಿಯು ಅದಕ್ಕಿಂತ ಭಿನ್ನಾವಾಗಿ ಇರ್ರುತ್ತದೆ ಅನ್ನುವ ನಿರೀಕ್ಷೆಯನ್ನು ರಾಜ್ಯಗಳು ಇಟ್ಟುಕೊಳ್ಳುವಂತಿಲ್ಲ.

ಕಾವೇರಿ ನಿರ್ವಹಣಾ ಮಂಡಳಿಯ ಸಮಿತಿಯ ಬಗ್ಗೆ ಮೇಲೆ ನೋಡಿದ್ದೇವೆ ಅದರ ಪ್ರಕಾರ ಸಮಿತಿಯ ನಿರ್ಣಯಗಳು ಜಾರಿಗೆ ಬರಬೇಕಾದಲ್ಲಿ ಕನಿಷ್ಠ ಆರುಜನ ಇರಬೇಕು (Quorum) ಅನ್ನುವ ನಿಮಯ ಮಾಡಲಾಗಿದೆ. ಆದರೆ ಈ ಆರುಜನರಲ್ಲಿ ರಾಜ್ಯಗಳ ಪ್ರತಿನಿಧಿಗಳು ಕಡ್ಡಾಯವಾಗಿ ಇರಬೇಕು ಎಂದು ಎಲ್ಲೂ ಹೇಳಿಲ್ಲ. ಅಂದರೆ ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟಂತೆ ಸಮಿತಿಯಲ್ಲಿ ಅಧ್ಯಕ್ಷರು, ಇಬ್ಬರು ಸದಸ್ಯರು, ಕೇಂದ್ರ ಜಲಮಂಡಳಿಯ ಇಬ್ಬರು ಸದಸ್ಯರು, ಕೇಂದ್ರ ಕೃಷಿ ಇಲಾಖೆಯ ಇಬ್ಬರು ಸದಸ್ಯರು, ಕಾರ್ಯದರ್ಶಿಗಳು ಸೇರಿದಂತೆ ಒಟ್ಟು ಎಂಟು ಜನ ಸದಸ್ಯರು ವ್ಯಾಜ್ಯಗಳಿಗೆ ಒಳಪಟ್ಟ ರಾಜ್ಯಗಳನ್ನು ಹೊರತುಪಡಿಸಿ ಇದ್ದಾರೆ. ಹಾಗೆ ಕರ್ನಾಟಕ, ತಮಿಳುನಾಡು, ಕೇರಳ ಹಾಗು ಪಾಂಡಿಚೇರಿ ರಾಜ್ಯಗಳ ಒಬ್ಬ ಪ್ರತಿನಿಧಿ ಸಮಿತಿಯಲ್ಲಿ ಇರುತ್ತಾರೆ.

ಒಂದು ವೇಳೆ ಕಾವೇರಿ ನದಿ ಪಾತ್ರದ ಎಲ್ಲಾ ರಾಜ್ಯಗಳು ಒಟ್ಟಾಗಿ ನಿಂತರು ಕಾವೇರಿ ನಿರ್ವಹಣಾ ಮಂಡಳಿ ವ್ಯತಿರಿಕ್ತವಾದ ನಿರ್ಧಾರಗಳನ್ನು ಕೈಗೊಳ್ಳುವ ಅಥವಾ ಜಾರಿಗೆ ತರುವ ಅಧಿಕಾರವನ್ನು ಹೊಂದಿರುತ್ತದೆ, ಕಾರಣ ಕೇಂದ್ರ ನೇಮಿಸಿದ ಸದಸ್ಯರೇ ಹೆಚ್ಚಿರುವಾಗ ಬಹುಮತ ಅವರ ಕಡೆಗೆ ಇರುತ್ತದೆ. ಇನ್ನೊಂದೆಡೆ ಯಾವುದೇ ರಾಜ್ಯದ ಪ್ರತಿನಿಧಿಯೊಬ್ಬ ಇರದ ಸಮಯದಲ್ಲೂ ನಿರ್ಣಯವನ್ನು ಮಂಡಳಿ ತಗೆದುಕೊಳ್ಳಬಹುದು ಅಥವಾ ನಿರ್ಣಯವನ್ನು ಜಾರಿಗೆ ತರಬಹುದು.

ರಾಜ್ಯಗಳು ನಿರ್ವಹಣಾ ಮಂಡಳಿ ನೀಡಿರುವ ತೀರ್ಪನ್ನು ಪಾಲಿಸದಿದ್ದರೆ ಮಂಡಳಿಯು ಕೇಂದ್ರ ಸರಕಾರದ ಸಹಾಯ ಪಡೆಯಬಹುದು ಎಂದು ಹೇಳಿದೆ. ಉದಾಹರಣೆಗೆ ಒಂದು ವೇಳೆ ಕರ್ನಾಟಕ ರಾಜ್ಯವು ಮಂಡಳಿ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕ ಇದನ್ನು ಪಾಲಿಸುವುದಿಲ್ಲ ಎಂದರೆ ಮಂಡಳಿ ಕೇಂದ್ರ ಸರಕಾರದ ಸಹಾಯ ಪಡೆದು ನೀರು ಬಿಡುಗಡೆ ಮಾಡಬಹುದು, ಅಂದರೆ ನಮ್ಮ ಜಲಾಶಯಗಳು, ಆಣೆಕಟ್ಟೆಗಳು ಕೇಂದ್ರ ಸರಕಾರದ ಹಿಡಿತಕ್ಕೆ ಹೋಗುತ್ತವೆ ಅನ್ನುವುದು ಅರ್ಥವಾಗುತ್ತದೆ.

ಕೇಂದ್ರ ಸರಕಾರದ ಮೇಲೆ ಯಾವ ರಾಜ್ಯದ ಪ್ರಭಾವ ಎಷ್ಟಿದೆ ಎನ್ನುವುದರ ಮೇಲೆ ಆ ರಾಜ್ಯಕ್ಕೆ ಕೇಂದ್ರದಿಂದ ಎಷ್ಟು ಸಹಾಯ ಸಿಗುತ್ತದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಇನ್ನು ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೇ ಅನ್ಯಾಯವಾಗುತ್ತಲೇ ಬಂದಿದೆ, ಮತ್ತೊಂದು ಕಡೆ ನೆರೆಯ ತಮಿಳುನಾಡಿನ ಪಕ್ಷಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಎಲ್ಲ ಸರಕಾರಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಹೊಂದಿವೆ, ಹಾಗಿದ್ದಾಗ ತಮಿಳುನಾಡಿನ ಸರಕಾರ ತನಗೆ ಬೇಕಾದಾಗ ಕೇಂದ್ರದ ಮೇಲೆ ಒತ್ತಡ ಹೇರಿ ನಿರ್ವಹಣಾ ಮಂಡಳಿಯ ಮೂಲಕ ನೀರು ಪಡೆದುಕೊಳ್ಳುವುದಿಲ್ಲ ಅಂತ ಹೇಗೆ ನಂಬುವುದು? ಅಥವಾ ನಿರ್ವಹಣಾ ಮಂಡಳಿಯು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತದೆ ಅಂತ ಹೇಗೆ ನಂಬುವುದು?
ಇನ್ನು ನಿರ್ವಹಣಾ ಮಂಡಳಿಯು ಯಾವ ರಾಜ್ಯ ಯಾವ ಬೆಲೆ ಬೆಳೆಯಬೇಕು ಎಂದು ನಿರ್ಧಾರ ಮಾಡುತ್ತದಂತೆ. ಹಾಗಿದ್ದರೆ ಆ ನದಿ ಪಾತ್ರದ ಜನರು ಯಾವರ ಬೆಳೆ ಬೆಳೆಯಬೇಕು ಎನ್ನುವುದನ್ನು ರೈತರು ಮಂಡಳಿಯ ಆದೇಶದ ಮೇಲೆ ಬೆಳೆಯಬೇಕಾಗುತ್ತದೆ.

ನಿರ್ವಹಣಾ ಮಂಡಳಿಯ ಸದ್ಯದ ಸ್ಥಿತಿ ಏನು?
ಅಕ್ಟೋಬರ್ 2016 ನದಿ ನೀರು ಹಂಚಿಕೆಯ ವಿಚಾರವಾಗಿ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು. ಕೇಂದ್ರ ಸರಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ನಿರ್ವಹಣಾ ಮಂಡಳಿ ಜಾರಿಗೆ ತರಲು ಕೇಂದ್ರ ಸರಕಾರದ ಒಪ್ಪಿಗೆ ಇದೆ ಎಂದು ಕೋರ್ಟ್ ಮುಂದೆ ಹೇಳಿಕೆ ಕೊಟ್ಟಿದ್ದರು. ಕರ್ನಾಟಕ ಸರಕಾರ ಕೇಂದ್ರ ಸರಕಾರದ ನಿಲುವಿಗೆ ಬಲವಾಗಿ ವಿರೋಧ ವ್ಯಕ್ತಪಡಿಸಿತ್ತು. ಇದಾದ ನಂತರ ಕೋರ್ಟ್ ಮುಂದೆ ಹಾಜರಾದ ಮುಕುಲ್ ಅವರು ತಮ್ಮ ಹಿಂದಿನ ನಿಲುವು ತಪ್ಪು ತಿಳುವಳಿಕೆ ಇಂದ ಆಗಿದ್ದು, ಕೇಂದ್ರ ಸರಕಾರಕ್ಕೆ ನಿರ್ವಹಣಾ ಮಂಡಳಿಯನ್ನು ಸದ್ಯಕ್ಕೆ ಜಾರಿಗೆ ತರುವ ಯಾವುದೇ ಯೋಜನೆಯಿಲ್ಲ ಎಂದ ಕೋರ್ಟ್ ಗೆ ತಿಳಿಸಿದರು ಹಾಗು ಅಂತರ್ ರಾಜ್ಯ ಜಲವಿವಾದ ಕಾಯ್ದೆ, 1956 ರ ಅಡಿಯಲ್ಲಿ ಕೋರ್ಟ್ ಗೆ ನಿರ್ವಹಣಾ ಮಂಡಳಿ ಸ್ಥಾಪಿಸಲು ಆದೇಶ ನೀಡಲು ಆಗುವುದಿಲ್ಲ ಎಂದು ತಿಳಿಸಿದರು. ನಿರ್ವಹಣಾ ಮಂಡಳಿ ಜಾರಿಗೆ ತರಬೇಕು ಎನ್ನುವುದು ಕೇವಲ ಒಂದು ಅಭಿಪ್ರಾಯವಷ್ಟೇ, ಕೇಂದ್ರ ಸರಕಾರ ಇದನ್ನು ಒಪ್ಪಲು ಅಥವಾ ತಿರಸ್ಕರಿಸಲು ಅವಕಾಶ ಹೊಂದಿದೆ. ನಿರ್ವಹಣಾ ಮಂಡಳಿ ಜಾರಿಗೆ ತರುವುದು ಶಾಸಕಾಂಗದ ಕೆಲಸ ಇದರಲ್ಲಿ ಕೋರ್ಟ್ ಆದೇಶ ನೀಡಲು ಬರುವುದಿಲ್ಲ. ಹಾಗಾಗಿ ಕೋರ್ಟ್ ನ ಆದೇಶವನ್ನು ಹಿಂಪಡೆಯ ಬೇಕು ಅಥವಾ ತಡೆ ಹಿಡಿಯಬೇಕು ಎಂದು ಕೇಳಿಕೊಂಡಿದ್ದರು. ಇದಾದ ನಂತರ ನಿರ್ವಹಣಾ ಮಂಡಳಿ ಜಾರಿಗೆ ತರುವುದರ ಕುರಿತು ಕೋರ್ಟ್ ಆಗಲಿ ಅಥವಾ ಕೇಂದ್ರ ಸರಕಾರವಾಗಲಿ ಮಾತನಾಡಿಲ್ಲ.

ಈ ಮೇಲಿನ ಎಲ್ಲ ವಿಷಯಗಳನ್ನು ಗಮನಿಸಿದರೆ ನಿರ್ವಹಣಾ ಮಂಡಳಿ ಸ್ಥಾಪನೆಯಂತಹ ನಿರ್ಧಾರ ರಾಜ್ಯಗಳು ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೊಂದಿರುವ ಹಿಡಿತವನ್ನು ನಿಧಾನವಾಗಿ ಕೇಂದ್ರದ ಕೈಗೆ ತಗೆದುಕೊಳ್ಳುವ ಮೂಲಕ ಎಲ್ಲವನ್ನು ಕೇಂದ್ರದಿಂದಲೇ ನಿಭಾಯಿಸುವ ಸಂಚು ಸ್ಪಷ್ಟವಾಗಿ ಕಾಣುತ್ತಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲೆ ಹಾಗು ಪ್ರಜಾಪ್ರಭುತ್ವದ ಮೇಲೆ ಕೇಂದ್ರ ಸರಕಾರ ಮಾಡುತ್ತಿರುವ ದಾಳಿಯಂತೆಯೇ ಕಾಣಿಸುತ್ತಿದೆ. ಕೇಂದ್ರ ಸರಕಾರದ ಇಂತಹ ಯೋಜನೆಗಳಿಗೆ ನ್ಯಾಯಾಧೀರ್ರನಗಳು, ನಿರ್ವಹಣಾ ಮಂಡಳಿಗಳು ದಾಳವಾಗಬಾರದು.

ಮುಂದಾಗಬೇಕಿರುವುದು?
ಭಾರತ ದೇಶ ಅಸ್ತಿತ್ವಕ್ಕೆ ಬರುವುದಕ್ಕಿಂತ ಮುಂಚಿನಿಂದಲೂ ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳು ಒಂದಾಗಿ ಬಾಳಿವೆ, ಇತಿಹಾಸದಲ್ಲಿ ಎರಡು ರಾಜ್ಯಗಳ ನಡೆವು ಕೊಡುಕೊಳ್ಳುವ ವ್ಯವಹಾರಗಳು ನಡೆದಿವೆ. ಶತಮಾನಗಳಿಂದ ಕುಡಿ ಬಾಳಿರುವ ರಾಜ್ಯಗಳು ಹಾಗು ಜನರು ಕಾವೇರಿ ನದಿ ನೀರು ಹಂಚಿಕೆಯ ಸಮಸ್ಯೆಯನ್ನು ಕುಳಿತುಕೊಂಡು ಬಗೆಹರಿಸಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ, ಇದಕ್ಕೆ ನಮ್ಮ ಜನನಾಯಕರುಗಳು ಮನಸ್ಸು ಮಾಡಬೇಕು.

ವರದಿಯೊಂದರ ಪ್ರಕಾರ ವರ್ಷದಿಂದ ವರ್ಷಕ್ಕೆ ಕಾವೇರಿ ಕಣಿವೆ ಹಾಗು ನದಿ ಪಾತ್ರದಲ್ಲಿ ಬೀಳುತ್ತಿದ್ದ ಮಳೆಯ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತಿದೆ, ಇದರ ಜೊತೆಗೆ ಬೆಳೆಯುತ್ತಿರುವ ನಗರಗಳು ಹಾಗು ಕೃಷಿ ಹೆಚ್ಚು ಹೆಚ್ಚು ನೀರನ್ನು ಬೇಡುತ್ತಿವೆ, ಆದರೆ ಕೊಡಲು ನೀರೆಲ್ಲಿದೆ ಅನ್ನುವುದು ನಾವು ಕೇಳಿಕೊಳ್ಳಬೇಕಿರುವ ಪ್ರಶ್ನೆ. ಇನ್ನೊಂದು ವರದಿಯ ಪ್ರಕಾರ ಕಾವೇರಿ ನದಿಪಾತ್ರದಲ್ಲಿ ಆಗುತ್ತಿರುವ ಅಕ್ರಮ ಮರಳು ಸಾಗಾಣಿಕೆ, ಕೈಗಾರಿಕೆ ತ್ಯಾಜ್ಯ ನದಿಗೆ ಹರಿಬಿಡಲಾಗುತ್ತಿರುವುದರಿಂದ ನೀರು ಕಲುಷಿತಗೊಂಡು ಕುಡಿಯಲು ಹಾಗು ಕೃಷಿಗೆ ಯೋಗ್ಯವಾಗಿ ಉಳಿಯುವುದಿಲ್ಲ. ಅಕ್ರಮ ಮರುಳು ಸಾಗಾಣಿಕೆಯಿಂದ ಕಾವೇರಿಯ ಸಾಂಪ್ರದಾಯಿಕ ನದಿಪಾತ್ರ ಕುಗ್ಗುತ್ತಿದೆ ಹಾಗು ನದಿಪಾತ್ರದ ದಾರಿಯೇ ಬದಲಾಗುವ ಅಪಾಯವಿದೆ.

ಕಾವೇರಿ ನದಿಪಾತ್ರದಲ್ಲಿರುವ ರೈತರು ಯತ್ತೇಚ್ಛವಾಗಿ ನೀರು ಸಿಗುತ್ತದೆನ್ನುವ ಕಾರಣಕ್ಕೆ ಹೆಚ್ಚು ನೀರು ಬೇಡುವ ಬೆಳೆಗಳನ್ನೇ ಬೆಳೆಯುತ್ತ ಬರುತ್ತಿದ್ದಾರೆ, ಅದರ ಜೊತೆಗೆ ನೀರಿನ ಬಳಕೆ ಸರಿಯಾಗಿ ಆಗದ ಕಾರಣ ನೀರು ಪೋಲಾಗಿ ಬೇರೆಯವರ ಉಪಯೋಗಕ್ಕೆ ಸಿಗದಂತಾಗಿದೆ. ಈ ಪರಿಸ್ಥಿತಿ ಕರ್ನಾಟಕ ಹಾಗು ತಮಿಳುನಾಡು ರಾಜ್ಯದಲ್ಲಿ ಸರ್ವೇಸಾಮಾನ್ಯ.

ನಶಿಸುತ್ತಿರುವ ಅರಣ್ಯ ಸಂಪತ್ತು, ಅಕ್ರಮ ಮರಳು ಸಾಗಾಣಿಕೆ, ಕುಗ್ಗುತ್ತಿರುವ ನದಿ ಪಾತ್ರ ಹೀಗೆ ಹಲವಾರು ವಿಷಯಗಳು ಇವತ್ತು ಕಾವೇರಿ ನದಿಯಲ್ಲಿ ಎಷ್ಟು ನೀರು ಸಿಗುತ್ತದೆ ಎನ್ನುವುದನ್ನು ನಿರ್ಧರಿಸುತ್ತವೆ ಹಾಗಿರುವಾಗ ದೆಹಲಿಯಲ್ಲಿ ಕುಳಿತಿರುವ ಅಧಿಕಾರಿಯಾಗಲಿ, ನ್ಯಾಯಾಧಿಕಾರಣವಾಗಲಿ, ಅಥವಾ ಸರಕಾರಗಳಾಗಲಿ ಈ ವಿಷಯವನ್ನು ಬಗೆಹರಿಸಲು ಸಾಧ್ಯವಿಲ್ಲ. ಈ ವಿವಾದ ಬಗೆಹರಿಸಲು ಜನರು ಮುಂದಾಗಬೇಕಿದೆ. ಕರ್ನಾಟಕದ ಹಾಗು ತಮಿಳುನಾಡಿನ ರೈತರು, ಜಲ ತಜ್ಞರು ಹಾಗು ಜನರು ಪರಸ್ಪರ ಕೂತು ಚರ್ಚಿಸಿ ನದಿಯ ನೀರಿನ ಗರಿಷ್ಟ ಉಪಯೋಗ ಹೇಗೆ ಪಡೆಯಬಹುದು ಹಾಗು ಇಬ್ಬರು ಲಾಭವಾಗುವಂತೆ ನೀರನ್ನು ಹೇಗೆ ಹಂಚಿಕೊಳ್ಳಬಹುದು ಎನ್ನುವುದನ್ನು ನಿರ್ಧರಿಸಬೇಕು. ಎರಡು ರಾಜ್ಯಗಳ ಜನರ ನಡುವೆ ಪರಸ್ಪರ ನಂಬಿಕೆ, ಸ್ನೇಹ ಬೆಳೆಯಬೇಕಾಗಿದೆ.

2017ರ ಆಗಸ್ಟ್ ತಿಂಗಳಿನಲ್ಲಿ ವಿಜಯಪುರದಲ್ಲಿ ನಡೆದ ರಾಷ್ತ್ರೀಯ ಜಲಸಮಾವೇಶ ಇಂತಹ ಒಂದು ವೇದಿಕೆಗೆ ಮುನ್ನುಡಿಯಾಗಿದೆ. ಅಲ್ಲಿ ಕರ್ನಾಟಕ, ತಮಿಳುನಾಡು ಭಾಗದ ರೈತರು ಹಾಗು ನೀರಾವರಿ ತಜ್ಞರು ಇರುವ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ ಅನ್ನುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಂವಾದ ನಿರಂತರವಾಗಿ ನಡೆಯಬೇಕು. ನದಿ ನೀರನ್ನು ಸೌಹಾರ್ದವಾಗಿ ಹಂಚಿಕೊಳ್ಳುವುದರ ಜೊತೆಗೆ ನದಿ ನೀರನ್ನು ಹಾಗು ನದಿ ಪಾತ್ರವನ್ನು ಮುಂದಿನ ಪೀಳಿಗೆಗೆ ಸರಿಯಾದ ಸ್ಥಿತಿಯಲ್ಲಿ ದಾಟಿಸುವ ಪಣತೊಡಬೇಕು. ನೈಸರ್ಗಿಕ ಸಂಪತ್ತು ನಮಗಷ್ಟೇ ಅಲ್ಲ, ಇಡೀ ಜನಾಂಗಕ್ಕೆ ಸೇರಿದ್ದು ಎನ್ನುವುದನ್ನು ನೆನಪಿನಲ್ಲಿ ಇಡಬೇಕು.

ಜಿ ಎಸ್ ಟಿ – ಒಂದು ಕಿರುನೋಟ

Authored by : Chetan Jeeral

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ದೊಡ್ಡ ಮಟ್ಟದ ಸುಧಾರಣೆಯಾಗಿದ್ದು ಹಣಕಾಸಿನ ಕ್ಷೇತ್ರದಲ್ಲಿ ಹಾಗು ಈ ಬದಲಾವಣೆಗೆ ಕಾರಣ ಕೇಂದ್ರ ಸರಕಾರ ಇತ್ತೀಚಿಗೆ ಜಾರಿಗೆ ತಂದಿರುವ ಜಿ.ಎಸ್.ಟಿ ಸುಧಾರಣೆಯ ಮೂಲಕ ಎಂದು ನಮಗೆಲ್ಲ ಹೇಳಲಾಗುತ್ತಿದೆ. ಜಿ.ಎಸ್.ಟಿ ಎಂದರೆ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಎಂದು. ಜಿ.ಎಸ್.ಟಿ ಜಾರಿಗೆ ತರುವ ಮೂಲಕ ತೆರಿಗೆ ಸರಳವಾಗುತ್ತವೆ, ಭಾರತಾದ್ಯಂತ ಒಂದೇ ತರಿಗೆ, ಒಂದು ಮಾರುಕಟ್ಟೆ, ಹೆಚ್ಚಿನ ಪ್ರಮಾಣದ ಉತ್ಪಾದನೆ, ಜಿ.ಡಿ.ಪಿ ಯಲ್ಲಿ ಹೆಚ್ಚಳ ಹಾಗು ದೇಶದಲ್ಲಿ ಹೂಡಿಕೆಗೆ ಇದು ಸಹಕಾರಿ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಈ ಜಿ.ಎಸ್.ಟಿ ಜಾರಿಗೆ ಬಂದರೆ ರಾಜ್ಯಗಳಿಗೆ ನಿಜಕ್ಕೂ ಉಪಯೋಗವಾಗಲಿದೆಯೇ?

ಜಿ.ಎಸ್.ಟಿ ಯ ಇತಿಹಾಸ
ಮೊದಲನೆಯದಾಗಿ ಜಿ.ಎಸ್.ಟಿ ಜಾರಿಗೆ ತರಬೇಕು ಎನ್ನುವ ಮಾತು ಇಂದು ನಿನ್ನೆಯದಲ್ಲ, ಬದಲಾಗಿ ಹಿಂದೆ 1999 ರಲ್ಲೇ ಈ ಬಗ್ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರು ಸಮಿತಿಯೊಂದನ್ನು ರಚಿಸಿ ಅಂದಿನ ಪಶ್ಚಿಮ ಬಂಗಾಳದ ಹಣಕಾಸು ಮಂತ್ರಿ ಅಸಿಮ್ ದಾಸಗುಪ್ತ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಜಿ.ಎಸ್.ಟಿ ಯ ಮಾದರಿಯೊಂದನ್ನು ತಯಾರು ಮಾಡುವಂತೆ ಹೇಳಲಾಗಿತ್ತು. ಈ ಸಮಿತಿಗೆ ಏಕ ತೆರಿಗೆ ಜಾರಿಗೆ ತರಲು ಬೇಕಿರುವ ತಂತ್ರಜ್ಞಾನ ಹಾಗು ಸಲಕರಣೆಗಳನ್ನು ಜೋಡಿಸುವ ಕೆಲಸ ವಹಿಸಲಾಗಿತ್ತು. 2003 ರಲ್ಲಿ ವಾಜಪೇಯಿಯವರ ಸರಕಾರ ವಿಜಯ್ ಕೇಳ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿ ತೆರಿಗೆ ಸುಧಾರಣೆಗಳ ಬಗ್ಗೆ ವರದಿ ನೀಡಲು ಸೂಚಿಸಿತ್ತು. 2005 ರಲ್ಲಿ ಕೇಳ್ಕರ್ ಸಮಿತಿಯು 12 ನೇ ಹಣಕಾಸು ಆಯೋಗದ ಸಲಹೆಯಂತೆ ಜಿ.ಎಸ್.ಟಿ ಜಾರಿಗೆ ತರಲು ಶಿಫಾರಸ್ಸು ಮಾಡಿತು.

2004 ರಲ್ಲಿ ಬಿಜೆಪಿ ನೇತೃತ್ವದ ಸರಕಾರ ಪತನಗೊಂಡ ನಂತರ ಅಧಿಕಾರಕ್ಕೆ ಬಂದ ಯುಪಿಎ ಸರಕಾರದ ಹೊಸ ಹಣಕಾಸು ಸಚಿವ ಶ್ರೀ ಚಿದಂಬರಂ ಅವರು ಹಿಂದೆ ಮಾಡಲಾಗಿದ್ದ ಜಿ.ಎಸ್.ಟಿ ಕೆಲಸವನ್ನು ಕೈಗೆತ್ತಿಕೊಂಡರು ಹಾಗು 2010 ಏಪ್ರಿಲ್ 1 ರಿಂದ ಜಿ.ಎಸ್.ಟಿ ಜಾರಿಗೆ ತರುವ ಬಗ್ಗೆ ಪ್ರಸ್ತಾಪ ಮಾಡಿದರು. ಆದರೆ ಅಸಿಮ್ ದಾಸಗುಪ್ತ ಅವರ ಸರಕಾರ ಪಶ್ಚಿಮ ಬಂಗಾಳದಲ್ಲಿ ಪತನಗೊಂಡ ಕಾರಣ ಅವರು ಸಮಿತಿಯ ಮುಖ್ಯಸ್ಥ ಹುದ್ದೆ ತ್ಯಜಿಸಬೇಕಾಯಿತು, ಹೀಗಾಗಿ ಜಿ.ಎಸ್.ಟಿ ಯ ಅನುಷ್ಠಾನ ಹಿಂಬದಿಗೆ ಸರಿಯಿತು.

2014 ರಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ಸರಕಾರ ಹಿಂದಿನ ಎನ್.ಡಿ.ಎ ಸರಕಾರದ ಕೂಸಾಗಿದ್ದ ಜಿ.ಎಸ್.ಟಿ ಗೆ ಮರುಜೀವ ಕೊಟ್ಟಿತು. ಹಣಕಾಸು ಸಚಿವರಾದ ಶ್ರೀ ಅರುಣ್ ಜೈಟ್ಲಿ ಅವರು ಜಿ.ಎಸ್.ಟಿ ಜಾರಿಗೆ ತರುವ ಬಗ್ಗೆ ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಸಭೆಯಲ್ಲಿ ಬಹುಮತ ಗಳಿಸಿದರು. ಇದರ ಜೊತೆಗೆ ಎಲ್ಲಾ ರಾಜ್ಯಗಳು ಹಾಗು ಕೇಂದ್ರಾಡಳಿತ ರಾಜ್ಯಗಳು ಜಿ.ಎಸ್.ಟಿ ಯನ್ನು ವಿಧಾನಸಭೆಯಲ್ಲಿ ಅನುಮೋದಿಸಿದವು. ಈ ಹಿನ್ನೆಲೆಯಲ್ಲಿ ಜುಲೈ 1 2017 ರಿಂದ ಭಾರತಾದ್ಯಂತ ಜಿ.ಎಸ್.ಟಿ ಜಾರಿಗೆ ಬಂದಿದೆ.

ಜಿ.ಎಸ್.ಟಿ ಯ ಮಂಡಳಿ
ಹಾಗಿದ್ದರೆ ಜಿ.ಎಸ್.ಟಿ ಯ ಅಡಿಯಲ್ಲಿ ಪ್ರತಿಯೊಂದು ವಸ್ತುವಿಗೂ ತೆರಬೇಕಾದ ತೆರಿಗೆಯನ್ನು ನಿರ್ಧರಿಸುವವರಾರು? ಇದಕ್ಕೆ ಉತ್ತರ, ಜಿ.ಎಸ್.ಟಿ ಮಂಡಳಿ. ಈ ಮಂಡಳಿಯು ಪ್ರತಿಯೊಂದು ವಸ್ತುವಿಗೂ ತೆರಿಗೆಯ ಪ್ರಮಾಣವನ್ನು ತೀರ್ಮಾನಿಸುತ್ತದೆ. ಈ ಮಂಡಳಿಯ ಮುಖ್ಯಸ್ಥರಾಗಿ ಕೇಂದ್ರ ಸರಕಾರದ ಹಣಕಾಸು ಮಂತ್ರಿಗಳು ಇರುತ್ತಾರೆ, ಇದರ ಜೊತೆಗೆ ಪ್ರತಿ ರಾಜ್ಯದ ಹಣಕಾಸು ಮಂತ್ರಿಗಳು ಈ ಮಂಡಳಿಯ ಸದಸ್ಯರಾಗಿರುತ್ತಾರೆ. ಒಂದು ಪಕ್ಷ ರಾಜ್ಯದ ಹಣಕಾಸು ಮಂತ್ರಿಗಳು ಈ ಮಂಡಳಿಯ ಸದಸ್ಯರಾಗಲು ಸಾಧ್ಯವಿಲ್ಲದ ಪಕ್ಷದಲ್ಲಿ ರಾಜ್ಯದ ಬೇರೆ ಮಂತ್ರಿಯೊಬ್ಬರನ್ನು ಸದಸ್ಯರನ್ನಾಗಿ ಮಾಡಬಹುದು.

ಜಿ.ಎಸ್.ಟಿ ಮಂಡಳಿ ತಗೆದುಕೊಳ್ಳುವ ನಿರ್ಧಾರ ಜಾರಿಗೆ ಬರಲು ಶೇ 75 ರಷ್ಟು ಓಟುಗಳು ಇರಬೇಕು. ಇದರಲ್ಲಿ ಶೇ 33.33 ರಷ್ಟು ಓಟಿನ ಹಕ್ಕನ್ನು ಕೇಂದ್ರ ಸರಕಾರ ಹೊಂದಿದೆ. ಉಳಿದ 66.67 ಓಟುಗಳನ್ನು ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಪ್ರತಿಯೊಂದು ರಾಜ್ಯಕ್ಕೂ 1 ಓಟಿನ ಹಕ್ಕನ್ನು ನೀಡಲಾಗಿದೆ. ಅಂದರೆ ಕೇಂದ್ರ ಸರಕಾರವೇ ತನ್ನ ಬಳಿ ಹೆಚ್ಚಿನ ಶಕ್ತಿ ಉಳಿಸಿಕೊಂಡು ರಾಜ್ಯಗಳನ್ನು ದುರ್ಬಲವನ್ನಾಗಿ ಮಾಡಿರುವುದು ಎದ್ದು ಕಾಣುತ್ತದೆ. ಒಂದು ವೇಳೆ ರಾಜ್ಯಗಳು ಯಾವುದೋ ಒಂದು ಬದಲಾವಣೆಯನ್ನು ಜಾರಿಗೆ ತರಲು ಮಂಡಳಿಯ ಮುಂದೆ ಪ್ರಸ್ತಾಪ ಮಾಡಿ, ಅದು ಕೇಂದ್ರ ಸರ್ಕಾರಕ್ಕೆ ಒಪ್ಪಿಗೆಯಾಗದಿದ್ದಲ್ಲಿ ಆ ಪ್ರಸ್ತಾವವನ್ನು ಸುಲಭವಾಗಿ ಸೋಲುವಂತೆ ಮಾಡುವ ಶಕ್ತಿಯನ್ನು ಕೇಂದ್ರ ಸರಕಾರ ಇಟ್ಟುಕೊಂಡಿದೆ. ಅದೇ ರೀತಿ ರಾಜ್ಯಗಳ ವಿರೋಧದ ನಡುವೆಯೂ ಕೇಂದ್ರ ಬಲವಂತವಾಗಿ ರಾಜ್ಯಗಳು ತನ್ನ ಪ್ರಸ್ತಾವವನ್ನು ಒಪ್ಪಿಕೊಳ್ಳುವಂತೆ ಮಾಡುವ ಶಕ್ತಿ ಇಟ್ಟುಕೊಂಡಿದೆ. ಇದೆ ವಿಷಯಕ್ಕೆ ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಜಯಲಲಿತಾ ಅವರು ಕೇಂದ್ರ ತನ್ನ ಬಳಿ ಶೇ 25 ಕ್ಕಿಂತ ಹೆಚ್ಚಿನ ಓಟುಗಳನ್ನು ಇಟ್ಟುಕೊಳ್ಳಬಾರದು ಎಂದು ಆಗ್ರಹಿಸಿದ್ದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಯಾವ ಪಕ್ಷ ಕೇಂದ್ರದಲ್ಲಿ ಹಾಗು ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರದಲ್ಲಿದೆಯೋ ಅದು ತನಗೆ ಬೇಕಾದ ಹಾಗೆ ನಿಯಮಗಳನ್ನು, ತೆರಿಗೆಯ ಪ್ರಮಾಣವನ್ನು ನಿರ್ಧರಿಸುವ ಹಕ್ಕನ್ನು ಬಿಟ್ಟುಕೊಟ್ಟಂತೆ ಆಗುತ್ತದೆ ಹಾಗು ಇದನ್ನು ಒಪ್ಪದ ರಾಜ್ಯಗಳು ಬೇರೆ ದಾರಿಯಿಲ್ಲದೆ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಜಿ.ಎಸ್.ಟಿ ಸ್ವರೂಪ
ಜಿ.ಎಸ್.ಟಿ ಮಸೂದೆಯಲ್ಲಿ 4 ರೀತಿಯ ತೆರಿಗೆಗಳನ್ನು ಪರಿಚಯಿಸಲಾಗಿದೆ, ರಾಜ್ಯ ಜಿ.ಎಸ್.ಟಿ (SGST ), ಕೇಂದ್ರ ಜಿ.ಎಸ್.ಟಿ (CGST ), ಇಂಟಿಗ್ರೇಟೆಡ್ ಜಿ.ಎಸ್.ಟಿ (IGST ), ಕೇಂದ್ರಾಡಳಿತ ಜಿ.ಎಸ್.ಟಿ (UTGST ). ಒಂದು ರಾಜ್ಯದ ಒಳಗಡೆ ಆಗುವ ವ್ಯಾಪಾರಕ್ಕೆ ರಾಜ್ಯ ಹಾಗು ಕೇಂದ್ರದ ಜಿ.ಎಸ್.ಟಿ ತೆರಿಗೆಗಳು ಸಂಗ್ರಹಿಸಲ್ಪಡುತ್ತವೆ. ಒಂದು ವೇಳೆ ಎರಡು ರಾಜ್ಯಗಳ ನಡುವೆ ವ್ಯಾಪಾರ ಆಗುತ್ತಿದ್ದರೆ ಇಂಟಿಗ್ರೇಟೆಡ್ ಜಿ.ಎಸ್.ಟಿ ತೆರಿಗೆ ಮಾತ್ರ ಸಂಗ್ರಹಿಸಲಾಗುತ್ತದೆ. ಈ ಐ.ಜಿ.ಎಸ್.ಟಿ ಯನ್ನು ಕೇಂದ್ರ ಸರಕಾರ ಸಂಗ್ರಹಿಸಿ, ಅದ್ರಲ್ಲಿ ರಾಜ್ಯಗಳಿಗೆ ಸೇರಬೇಕಾದ ಪಾಲನ್ನು ನೀಡುತ್ತದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಆಗುವ ವ್ಯಾಪಾರಕ್ಕೆ ಯು.ಜಿ.ಎಸ್.ಟಿ ಸಂಗ್ರಹಿಸಲಾಗುತ್ತದೆ.

ಜಿ.ಎಸ್.ಟಿ ಯಿಂದ ರಾಜ್ಯಗಳಿಗೆ ಲಾಭವಿದೆಯೇ?
ಒಂದೇ ದೇಶ ಒಂದು ಮಾರುಕಟ್ಟೆ ಎನ್ನುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಜಿ.ಎಸ್.ಟಿ ಯನ್ನು ಉತ್ಸಾಹದಿಂದ ಭಾರತಾದ್ಯಂತ ಜಾರಿಗೆ ತಂದಿದೆ. ಇದನ್ನು ರಾಜ್ಯಗಳು ಒಪ್ಪಿಕೊಂಡಿವೆ ಸಹ. ಆದರೆ ಜಿ.ಎಸ್.ಟಿ ಯಂತಹ ಪ್ರಮುಖ ಹಣಕಾಸಿನ ಮಸೂದೆ ರಾಜ್ಯದ ಅಧಿವೇಶನಗಳಲ್ಲಿ ಸದ್ದು ಮಾಡಿದ್ದನ್ನು ನಾವು ಕಾಣಲೇ ಇಲ್ಲ. ಹಾಗಿದ್ದರೆ ಜಿ.ಎಸ್.ಟಿ ಕರ್ನಾಟಕದಂತಹ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಸಹಕಾರಿಯಾಗಲಿದೆಯೇ? ತಮಿಳುನಾಡು, ಪಶ್ಚಿಮ ಬಂಗಾಳ ಮುಂತಾದ ಕೆಲವೇ ರಾಜ್ಯಗಳು ಮಾತ್ರ ಜಿ.ಎಸ್.ಟಿ ವಿರುದ್ಧ ಧ್ವನಿ ಎತ್ತಿದ್ದವು. ಜಿ.ಎಸ್.ಟಿ ಯಿಂದ ರಾಜ್ಯಗಳ ಹಣಕಾಸಿನ ಸ್ವಾಯತ್ತತೆಗೆ ಪೆಟ್ಟು ಬೀಳಲಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿ. ಜಯಲಲಿತಾ ಅವರು ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಿದ್ದರು, ಅವರ ಸಾವಿನ ಹಿಂದೆಯೇ ತಮಿಳುನಾಡಿನಿಂದ ಈ ವಿಷಯವಾಗಿ ಯಾವುದೇ ವಿರೋಧ ಕೇಳಿಬಂದಿಲ್ಲ. ಹಾಗಿದ್ದರೆ ಜಿ.ಎಸ್.ಟಿ ಯಿಂದ ರಾಜ್ಯಗಳಿಗೆ ಆಗುವ ತೊಂದರೆಗಳೇನು ನೋಡೋಣ ಬನ್ನಿ.

ಮೊದಲನೆಯದಾಗಿ ಈ ಹಿಂದೆ ರಾಜ್ಯಗಳಿಗೆ ಇದ್ದ ತೆರಿಗೆ ವಿಧಿಸುವ ಸ್ವಾತಂತ್ರ್ಯಕ್ಕೆ ಕಡಿವಾಣ ಬಿದ್ದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ತನ್ನ ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗೆ ಬೇಕಾದ ಸಂಪನ್ಮೂಲವನ್ನು ಹೊಂದಿಸಿಕೊಳ್ಳಲು ಇರುವ ಏಕೈಕ ಮಾರ್ಗ ತನ್ನ ಜನರಿಂದ ತೆರಿಗೆ ಸಂಗ್ರಹಿಸುವುದು. ಈ ಸಂಗ್ರಹವಾದ ಹಣದಲ್ಲಿ ಕೇಂದ್ರಕ್ಕೆ ಕೊಡಬೇಕಾದ ಪಾಲು ಕೊಟ್ಟು ಉಳಿದ ಹಣದಲ್ಲಿ ಒಂದು ವರ್ಷಕ್ಕೆ ಯೋಜನೆಗಳನ್ನು ತಯಾರಿಸುತ್ತದೆ. ಒಂದು ವೇಳೆ ಬರ, ಪ್ರವಾಹ, ಅಥವಾ ಮತ್ತಾವುದೋ ಕಾರಣಕ್ಕೆ ಹಣದ ಕೊರತೆ ಬಿದ್ದಾಗ ತೆರಿಗೆಯನ್ನು ಜಾಸ್ತಿ ಮಾಡಿ ಸಂಪನ್ಮೂಲ ಸಂಗ್ರಹಿಸುತ್ತಿದ್ದವು. ಅಥವಾ ಹಣದ ಹರಿವು ಜಾಸ್ತಿ ಇದ್ದಾಗ ರಾಜ್ಯದಲ್ಲಿ ತೆರಿಗೆಯನ್ನು ಕಡಿಮೆ ಮಾಡಿದ ಉದಾಹರಣೆಗಳು ಇವೆ. ಆದರೆ ಜಿ.ಎಸ್.ಟಿ ಜಾರಿಗೆ ಬಂದ ನಂತರ ಈ ಶಕ್ತಿಯನ್ನು ರಾಜ್ಯದ ಕೈಗಳಿಂದ ಕಿತ್ತುಕೊಳ್ಳಲಾಗಿದೆ. ಹೀಗೆ ಮಾಡುವುದರ ಮೂಲಕ ಕೇಂದ್ರ ಸರಕಾರವು ರಾಜ್ಯಗಳ ಸ್ವಾಯತ್ತತೆ ಹಾಗು ಹಕ್ಕುಗಳ ಮೇಲೆ ದಾಳಿ ಮಾಡಿದೆ.

ಸಂವಿಧಾನದ ಪ್ರಕಾರ ರಾಜ್ಯಗಳಿಗೆ ಮಾರಾಟ ತೆರಿಗೆಯನ್ನು ವಿಧಿಸುವ ಸಂಪೂರ್ಣ ಹಕ್ಕಿದೆ. ಇದು ರಾಜ್ಯಗಳ ಶೇ 80 ರಷ್ಟು ಆದಾಯಕ್ಕೆ ಕಾರಣವಾಗಿತ್ತು. ಆದರೆ ಜಿ.ಎಸ್.ಟಿ ಜಾರಿಗೆ ಬಂದ ನಂತರ ರಾಜ್ಯಗಳಿಗೆ ತಾವು ವಿಧಿಸಬಹುದಾಗಿದ್ದ ತೆರಿಗೆಯ ಪ್ರಮಾಣದ ಶಕ್ತಿ ಇಲ್ಲದಂತಾಗುತ್ತದೆ.

ಜಿ.ಎಸ್.ಟಿ ಯ ನೆಪದಲ್ಲಿ ಒಂದು ದೇಶ ಒಂದು ತೆರಿಗೆ ಎನ್ನುವ ಕೇಂದ್ರ ಸರಕಾರ ಆಯಾ ರಾಜ್ಯದ ಇತಿಹಾಸ, ಸಂಸ್ಕೃತಿ, ಸಾಮಾಜಿಕ ಹಾಗು ಆರ್ಥಿಕ ಆಯಾಮಗಳನ್ನು ಗೌಣ ಮಾಡಿ, ವ್ಯಾಪಾರ ಮಾಡುವವರಿಗೆ ಮಾರುಕಟ್ಟೆ ಕಟ್ಟಿಕೊಡುವುದೇ ತಮ್ಮ ಉದ್ದೇಶ ಎನ್ನುವುದನ್ನು ಸ್ಪಷ್ಟವಾಗಿ ಸಾರಿದೆ. ಒಂದು ರಾಜ್ಯ ಪಾಲಿಸಬೇಕಾದ ತೆರಿಗೆ ಸ್ವರೂಪವನ್ನು ಜಿ.ಎಸ್.ಟಿ ಮಂಡಳಿ ನಿರ್ಧಾರ ಮಾಡುತ್ತದೆ. ಈ ಮಂಡಳಿ ತಗೆದುಕೊಳ್ಳುವ ನಿರ್ಧಾರ ಭಾರತ ಎಲ್ಲ ರಾಜ್ಯಗಳು ಪಾಲಿಸಬೇಕಾಗುತ್ತದೆ. ಮಂಡಳಿಯೇ ಎಲ್ಲವನ್ನು ನಿರ್ಧರಿಸುತ್ತದೆ ಎಂದರೆ ರಾಜ್ಯಗಳಲ್ಲಿ ಜನರು ಆರಿಸುವ ಸರಕಾರಕ್ಕೆ ಬೆಲೆ ಏನು?

ರಾಜ್ಯಗಳ ಸ್ವಾಯತ್ತತೆ ಹಾಗು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೆಲಸ ಜಿ.ಎಸ್.ಟಿ ಮಾಡುತ್ತಿದೆ. ಹಾಗಿದ್ದರೆ ರಾಜ್ಯಗಳ ಪ್ರತಿನಿಧಿಗಳು ಜಿ.ಎಸ್.ಟಿ ಮಂಡಲಿಯಲ್ಲಿ ಇದ್ದಾರಲ್ಲ? ಜಿ.ಎಸ್.ಟಿ ಮಂಡಳಿ ಎಲ್ಲಾ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯ ನೀಡುತ್ತಿದೆ ಹಾಗಿದ್ದ ಮೇಲೆ ಸ್ವಾಯತ್ತತೆ ಕಾಪಾಡಿದಂತೆ ಆಗಿದೆಯಲ್ಲವೇ ಎಂದು ಪ್ರಶ್ನೆ ಮೂಡುವುದು ಸಹಜ. ಮಂಡಳಿಯಲ್ಲಿ ಪ್ರತಿ ರಾಜ್ಯಕ್ಕೂ ಪ್ರಾತಿನಿಧ್ಯ ಸಿಕ್ಕಿದೆ ನಿಜ, ಆದರೆ ರಾಜ್ಯಗಳ ಮಾತಿಗೆ ಮಂಡಳಿಯಲ್ಲಿ ನೀಡಿರುವ ಓಟಿನ ತೂಕದ ಬಗ್ಗೆ ಗಮನ ಹರಿಸಬೇಕಿದೆ. ಕೇಂದ್ರ ಸರಕಾರ ಜಿ.ಎಸ್.ಟಿ ಮಂಡಳಿಯಲ್ಲಿ ಎಲ್ಲಾ ರಾಜ್ಯಗಳ ಓಟು ಸೇರಿಸಿ ಮೂರನೇ ಎರಡರಷ್ಟು ಭಾಗದ ತೂಕ ನೀಡಿದರೆ, ತನಗೆ ಮೂರನೇ ಒಂದರಷ್ಟು ಭಾಗದ ತೂಕ ಇಟ್ಟುಕೊಂಡಿದೆ. ಇದರ ಜೊತೆಗೆ ಮಂಡಳಿಯ ಮುಖ್ಯಸ್ಥರಿಗೆ ಸುಯೋ ಮೋಟೋ (Suo Moto) ಅಧಿಕಾರ ಇರುವ ಕಾರಣ ಇಲ್ಲಿ ರಾಜ್ಯಗಳ ಪ್ರಾತಿನಿಧಿತ್ವ ಕೇವಲ ತೋರಿಕೆಗೆ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕೇಂದ್ರ ಸರಕಾರದಲ್ಲಿ ಅಧಿಕಾರ ಇರುವ ಪಕ್ಷದ ಸರಕಾರಗಳು ರಾಜ್ಯದಲ್ಲಿ ಇದ್ದಾಗ ಕೇಂದ್ರ ಸರಕಾರ ಆಡುವ ಮಾತಿಗೆ ತಲೆ ಬಗ್ಗಿಸಬೇಕಾಗುತ್ತದೆ, ಮಂಡಳಿಯಲ್ಲಿ ಒಂದು ರಾಜ್ಯ ವಿರೋಧ ವ್ಯಕ್ತ ಪಡಿಸಿದರು ತನ್ನ ಪಕ್ಷದ ಇತರೆ ರಾಜ್ಯಗಳ ಪ್ರತಿನಿಧಿಗಳ ಸಹಾಯದಿಂದ ಹಾಗು ತನ್ನ ಹತ್ತಿರವಿರುವ ಮೂರನೇ ಒಂದರಷ್ಟು ಓಟು ಗಳಿಂದ ತನಗೆ ಬೇಕಾದ ರೀತಿಯ ತೆರಿಗೆಗಳನ್ನು ಒಲ್ಲದ ರಾಜ್ಯಗಳ ಮೇಲೆ ಹೇರುವುದಕ್ಕೆ ಯಾವುದೇ ತೊಂದರೆ ಇಲ್ಲ.

ಒಂದು ವೇಳೆ ಜಿ.ಎಸ್.ಟಿ ಜಾರಿಯಿಂದ ರಾಜ್ಯಗಳಿಗೆ ತೊಂದರೆಯಾಗುತ್ತಿದ್ದರೆ ಆ ರಾಜ್ಯಗಳು ಜಿ.ಎಸ್.ಟಿ ಮಂಡಳಿಯ ಮುಂದೆ ದೂರನ್ನು ತರಬಹುದು ಎಂದು ಹೇಳಲಾಗಿದೆ. ತಮ್ಮ ಒಳಿತಿಗಾಗಿಯೇ ಒಂದು ರಾಜ್ಯ ಜನರು ಸರಕಾರವನ್ನು ಆರಿಸಿ ಕಳುಹಿಸಿರಬೇಕಾದರೆ ತನ್ನ ರಾಜ್ಯದ ತೆರಿಗೆ ಹಾಗು ಆದಾಯದ ವಿಷಯಕ್ಕಾಗಿ ಸರಕಾರ ಒಂದು ಮಂಡಳಿಯಮುಂದೆ ಬಗ್ಗಬೇಕಿರುವುದು ಪ್ರಜಾಪ್ರಭುತ್ವ ಹಾಗು ಒಕ್ಕೂಟಕ್ಕೆ ಮಾಡುವ ಅವಮಾನವಾಗಿದೆ. ಒಂದು ಬಾರಿ ಜಿ.ಎಸ.ಟಿ ಯನ್ನು ರಾಜ್ಯಗಳು ಒಪ್ಪಿಕೊಂಡರೆ ಮತ್ತೆ ಅದರಿಂದ ಹೊರಗೆ ಬರುವ ವ್ಯವಸ್ಥೆಯನ್ನು ಮಸೂದೆಯಲ್ಲಿ ಮಾಡಲಾಗಿಲ್ಲ. ಒಂದು ರಾಜ್ಯಕ್ಕೆ ಜಿ.ಎಸ.ಟಿ ಯಿಂದ ತೊಂದರೆಯಾಗುತ್ತಿರುವುದು ಅರ್ಥವಾದರೂ ತಾನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಜಿ.ಎಸ್.ಟಿ ಜಾರಿಯಿಂದ ಯಾರಿಗೆ ಲಾಭ?
ಜಿ.ಎಸ್.ಟಿ ಜಾರಿಗೆ ಬರುವುದರಿಂದ ಒಂದು ದೇಶ ಒಂದು ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬರುತ್ತದೆ. ಹಾಗಿದ್ದರೆ ಇದರಿಂದ ಲಾಭ ಯಾರಿಗೆ ಎಂದು ನೋಡಿದರೆ ಈಗಾಗಲೇ ಗಟ್ಟಿಯಾಗಿ ನೆಲೆ ಊರಿರುವ ವ್ಯಾಪಾರಿಗಳಿಗೆ ಹಾಗು ಸಂಸ್ಥೆಗಳಿಗೆ ತಮ್ಮ ವ್ಯಾಪಾರವನ್ನು ಬೇರೆ ರಾಜ್ಯಗಳಿಗೆ ವಿಸ್ತರಿಸಲು ಸಹಾಯಕವಾಗುತ್ತದೆ. ಆದರೆ ರಾಜ್ಯಗಳ್ಲಲಿ ಈಗ ತಾನೇ ತಲೆ ಎತ್ತುತ್ತಿರುವ ಉದ್ಯಮಗಳಿಗೆ ದೊಡ್ಡ ಮಟ್ಟದ ಹೊಡೆತವನ್ನು ಜಿ.ಎಸ್.ಟಿ ನೀಡುತ್ತದೆ. ಈಗ ತಾನೇ ಈಜುವುದನ್ನು ಕಲಿಯುತ್ತಿರುವ ಮಗುವೊಂದನ್ನು ಸಮುದ್ರದಲ್ಲಿ ಈಜು ಎಂಬಂತಾಗುತ್ತದೆ ಪರಿಸ್ಥಿತಿ. ಈಗಾಗಲೇ ತನ್ನ ವ್ಯಾಪಾರವನ್ನು ಗಟ್ಟಿಯಾಗಿ ನೆಲೆ ಉರುವಂತೆ ಮಾಡಿರುವ ಸಂಸ್ಥೆಯೊಂದಕ್ಕೆ ಜಿ.ಎಸ್.ಟಿ ಬೇರೆ ರಾಜ್ಯದಲ್ಲಿ ವ್ಯಾಪಾರವನ್ನು ವಿಸ್ತಾರ ಮಾಡುವುದಕ್ಕೆ ಕೆಂಪು ಹಾಸಿನ ಸ್ವಾಗತವನ್ನು ನೀಡುತ್ತದೆ, ಆದರೆ ನಮ್ಮ ರಾಜ್ಯದಲ್ಲೇ ಹೊಸದಾಗಿ ತಲೆ ಎತ್ತುತ್ತಿರುವ ಉದ್ಯಮವೊಂದು ಈ ಸಂಸ್ಥೆಯ ಜೊತೆ ಪೈಪೋಟಿ ಮಾಡಲಾಗದೆ ಬಾಗಿಲು ಹಾಕುವ ಪರಿಸ್ಥಿತಿ ಎದುರಾಗಬಹುದು. ಜಿ.ಎಸ್.ಟಿ ಜಾರಿಯಿಂದಾಗಿ ತನ್ನ ರಾಜ್ಯದಲ್ಲಿನ ಹೊಸ ಪೀಳಿಗೆಯ ಉದ್ದಿಮೆದಾರರನ್ನು ಹುಟ್ಟು ಹಾಕಲು, ಅವರ ಒಳಿತಿಗಾಗಿ ತೆರಿಗೆ ಪರಿಷ್ಕರಣೆ ಮಾಡಲು ಆಗದ ಕಷ್ಟದ ಸ್ಥಿತಿ ರಾಜ್ಯ ಸರಕಾರಗಳಿಗೆ ಎದುರಾಗುತ್ತದೆ. ತನ್ನ ನಾಡಿನ ಉದ್ದಿಮೆಗಳ, ಉದ್ದಿಮೆದಾರ ಹಿತಾಸಕ್ತಿಯನ್ನು ಸಹ ಕಾಪಾಡಲು ಸಾಧ್ಯವಾದ ಪರಿಸ್ಥಿತಿಯಲ್ಲಿ ರಾಜ್ಯಗಳಿವೆ.

ಜಿ.ಎಸ್.ಟಿ ಜಾರಿಯ ಬಳಿಕ ರಾಜ್ಯಗಳಿಗೆ ಸೆಸ್, ಸರ್ಚಾರ್ಜ್ ಮುಂತಾದ ತೆರಿಗೆಗಳನ್ನು ವಿಧಿಸಲು ಇದ್ದ ಅವಕಾಶವನ್ನು ಹಿಂಪಡೆಯಲಾಗಿದೆ, ಆದರೆ ಕೇಂದ್ರ ಸರಕಾರ ಸೆಸ್ ವಿಧಿಸಬಹುದು ಹಾಗು ಹೀಗೆ ಸಂಗ್ರಹಿಸುವ ಸೆಸ್ ನಲ್ಲಿ ರಾಜ್ಯಗಳಿಗೆ ಪಾಲು ಇಲ್ಲ ಅನ್ನುವುದು ಗಮನಿಸಬೇಕಾಗಿರುವ ವಿಷಯ. ಸದ್ಯಕ್ಕೆ ಇದನ್ನು 5 ವರ್ಷಗಳ ಕಾಲ ಉಳಿಸಿಕೊಳ್ಳಲಾಗುವುದು ಹಾಗು ಬೇಕಾದರೆ ಮುಂದುವರೆಸುವ ಅಧಿಕಾರ ಮಂಡಳಿಗೆ ಇದೆ. ಸೆಸ್ ವಿಧಿಸುವ ಅಧಿಕಾರವನ್ನು ತನಗೆ ಮಾತ್ರ ಉಳಿಸಿಕೊಂಡಿರುವ ಕೇಂದ್ರ ಸರಕಾರ ರಾಜ್ಯಗಳು ಹೆಚ್ಚಿನ ಸಂಪನ್ಮೂಲ ಬೇಕಾದಾಗ ಸೆಸ್ ಮೂಲಕ ಸಂಪನ್ಮೂಲ ಸಂಗ್ರಹಿಸುವ ಅಧಿಕಾರವನ್ನು ಕಿತ್ತುಕೊಂಡಿರುವುದು ಎಲ್ಲಿಯ ನ್ಯಾಯ?

ರಾಜ್ಯಗಳಿಗೆ ಇರಬೇಕು ತೆರಿಗೆ ವಿಧಿಸುವ ಅಧಿಕಾರ
ಭಾರತದಂತಹ ವೈವಿಧ್ಯಮಯ ದೇಶಕ್ಕೆ ಒಂದು ದೇಶ, ಒಂದು ಭಾಷೆ, ಒಂದು ಮಾರುಕಟ್ಟೆ, ಒಂದು ಉಡುಪು ಮುಂತಾದ ಒಂದುಗಳಿಂದ ಕಂಟಕ ಎದುರಾಗಿದೆ. ತನ್ನ ರಾಜ್ಯದ ಒಳಿತಿಗಾಗಿ ಎಷ್ಟು ದುಡ್ಡು ಸಂಗ್ರಹಿಸಬೇಕು, ಅದಕ್ಕೆ ಎಷ್ಟು ತೆರಿಗೆ ವಿಧಿಸಬೇಕು, ಬರುವ ತೆರಿಗೆಯಿಂದ ಯಾವ ಸೌಲಭ್ಯಗಳನ್ನು ಜನರಿಗೆ ಕೊಡಬೇಕು ಎನ್ನುವ ತೀರ್ಮಾನ ಮಾಡುವ ಹಕ್ಕು ರಾಜ್ಯ ಸರಕಾರಗಳಿಗೆ ಇರಬೇಕು.

ಉದಾಹರಣೆಗೆ ಕರ್ನಾಟಕದಲ್ಲಿ ಬಡ ಜನರ ಒಳಿತಿಗಾಗಿ ಉಚಿತ ಅಕ್ಕಿ, ಕಡಿಮೆ ಬೆಳೆಗೆ ಧಾನ್ಯಗಳು, ಉಚಿತ ಚಿಕಿತ್ಸೆ, ಶಿಕ್ಷಣ ಮುಂತಾದ ಹಲವಾರು ಯೋಜನೆಗಳಿವೆ, ಈ ಯೋಜನೆಗಳಿಂದ ಲಾಭ ಪಡೆಯುತ್ತಿರುವ ಕೋಟ್ಯಂತರ ಜನರು ಇದ್ದಾರೆ. ಇಂತಹ ಯೋಜನೆಗಳನ್ನು ಜಾರಿಗೆ ತರಲು ಕರ್ನಾಟಕ ಸರಕಾರ ಯಾವ ಉದ್ಯಮಗಳಿಗೆ ಎಷ್ಟು ತೆರಿಗೆ ವಿಧಿಸಬೇಕು, ಈಗಿರುವ ತೆರಿಗೆಯನ್ನು ಹೆಚ್ಚು ಮಾಡಬೇಕೋ ಕಡಿಮೆ ಮಾಡಬೇಕೋ, ಎಷ್ಟು ಜನರು ತೆರಿಗೆ ಕಟ್ಟುತ್ತಿದ್ದಾರೆ ಹೀಗೆ ಹಲವಾರು ಅಂಶಗಳನ್ನು ಗಣನೆಗೆ ತಗೆದುಕೊಂಡಿರುತ್ತದೆ. ಆದರೆ ಜಿ.ಎಸ್.ಟಿ ಯಂತಹ ಒಕ್ಕೂಟ ವ್ಯವಸ್ಥೆಗೆ ಮಾರಕ ಆಗುವ ಯೋಚನೆಗಳು ಇಂತಹ ಹಲವಾರು ಜನಪ್ರಿಯ ಯೋಜನೆಗಳನ್ನು ಸರಕಾರಗಳು ಕೈಬಿಡುವಂತೆ ಮಾಡುತ್ತವೆ.

ಜಗತ್ತಿನ ವ್ಯಾಪಾರದ ಕೇಂದ್ರಬಿಂದು ಮುಕ್ತ ಮಾರುಕಟ್ಟೆಯ ಪ್ರತಿಪಾದಿಸುವ ಅಮೇರಿಕ ದೇಶದಲ್ಲಿ ಜಿ.ಎಸ್.ಟಿ ಜಾರಿಯಲ್ಲಿಲ್ಲ. ಇದಕ್ಕೆ ಕಾರಣ ಅಲ್ಲಿನ ರಾಜ್ಯಗಳಿಗೆ ನೀಡಲಾಗಿರುವ ಸ್ವಾಯತ್ತದೆ. ಅಲ್ಲಿ ರಾಜ್ಯಗಳಿಗೆ ತಮಗೆ ಬೇಕಾದ ರೀತಿಯಲ್ಲಿ ತೆರಿಗೆ ವಿಧಿಸುವ ಅಧಿಕಾರವಿದೆ. ಒಂದು ವಸ್ತುವಿಗೆ ಆ ರಾಜ್ಯದ ಬೇಡಿಕೆಯ ಅನುಗುಣವಾಗಿ ಎಷ್ಟು ತೆರಿಗೆ ವಿಧಿಸಬೇಕೋ ಬೇಡವೋ, ಎಷ್ಟು ತೆರಿಗೆ ವಿಧಿಸಬೇಕು, ತೆರಿಗೆ ವಿನಾಯ್ತಿ ನೀಡಬೇಕು, ಎಷ್ಟು ವರ್ಷಕ್ಕೆ ತೆರಿಗೆ ವಿಧಿಸಬೇಕು ಹೀಗೆ ಎಲ್ಲಾ ವಿಷಯಗಳಲ್ಲೂ ನಿರ್ಧಾರ ತಗೆದುಕೊಳ್ಳುವ ಹಕ್ಕಿದೆ. ಈ ವಿಷಯದಲ್ಲಿ ಅಲ್ಲಿನ ಫೆಡರಲ್ ಸರಕಾರ ಮೂಗು ತೂರಿಸುವುದಿಲ್ಲ. ಹಾಗಿದ್ದರೂ ಅಲ್ಲಿನ ವ್ಯಾಪಾರ ವಹಿವಾಟು ಸರಾಗವಾಗಿಯೇ ನಡೆಯುತ್ತಿದೆ. ಭಾರತ ಸ್ವಾಯತ್ತತೆ ಹೊಂದಿರುವ ಒಕ್ಕೂಟ ಅನ್ನುವ ನಾವು ಈ ನೀತಿಯನ್ನು ನಮ್ಮಲ್ಲಿ ಪಾಲಿಸಬಹುದಲ್ಲವೇ?

ತಮ್ಮ ಒಳಿತಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಸ್ಪಷ್ಟ ತಿಳುವಳಿಕೆ ರಾಜ್ಯ ಸರಕಾರಗಳಿಗೆ ಇರುತ್ತದೆ, ಹಾಗಿದ್ದಾಗ ದೆಹಲಿಯಲ್ಲಿ ಕುಳಿತಿರುವ ಕೇಂದ್ರ ಸರಕಾರ ರಾಜ್ಯದ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ತನ್ನ ಕೈಗೊಂಬೆ ಮಾಡಿಕೊಳ್ಳುತ್ತಿದೆ. ಇಂತಹ ಪರಿಪಾಠ ನಿಲ್ಲಬೇಕು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಎಲ್ಲಾ ಹಕ್ಕುಗಳಿರಬೇಕು.

ಎನ್.ಸಿ.ಟಿ.ಸಿ: ಏನು, ಎತ್ತ ಹಾಗು ಹೇಗಿರಬೇಕು?

Authored by : Chetan Jeeral

2008 ರಲ್ಲಿ ಮುಂಬೈ ನಗರದ ಮೇಲೆ ಉಗ್ರರ ದಾಳಿ ಆದ ನಂತರ ಅಂದು ಅಸ್ತಿತ್ವದಲ್ಲಿದ್ದ ಯುಪಿಎ ಸರಕಾರ ಭಾರತದಲ್ಲಿ ಆಗುತ್ತಿರುವ ಉಗ್ರರ ದಾಳಿಗಳನ್ನು ಎದುರಿಸಲು ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್ ಸಂಸ್ಥೆಯೊಂದನ್ನು ಸ್ಥಾಪಿಸಲು ಮುಂದಾಯಿತು. ಈ ಮೂಲಕ ಸಂಸ್ಥೆಯು ವಾಸ್ತವದಲ್ಲಿ ಉಗ್ರರ ಚಟುವಟಿಕೆಗಳನ್ನು ಗಮನಿಸುವ ಹಾಗು ಅವುಗಳನ್ನು ತಡೆಯುವ ಕೆಲಸ ಮಾಡುವುದಾಗಿ ಹೇಳಿತ್ತು. ಅಂದಿನ ಕೇಂದ್ರದ ಗೃಹಮಂತ್ರಿಗಳಾಗಿದ್ದ ಪಿ. ಚಿದಂಬರಂ ಅವರು ಈ ಸಂಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ಆದರೆ ಯಾವಾಗ ಈ ವಿಷಯದ ಬಗ್ಗೆ ರಾಜ್ಯಗಳಿಗೆ ತಿಳಿಸಲಾಯಿತೋ ಆಗ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿ, ಜಯಲಲಿತಾ, ಮಮತಾ ಬಾನೆರ್ಜಿ ಸೇರಿದಂತೆ ಹಲವಾರು ರಾಜ್ಯಗಳು ಎನ್.ಸಿ.ಟಿ.ಸಿ ಜಾರಿಗೆ ತರಲು ಬಲವಾಗಿ ವಿರೋಧಿಸಿದ್ದವು.

ಎನ್.ಸಿ.ಟಿ.ಸಿ ಗೆ ಸ್ಫೂರ್ತಿ ಅಮೇರಿಕ
ಪಿ. ಚಿದಂಬರಂ ಹಾಗು ರಾಷ್ಟ್ರೀಯ ಭದ್ರತಾ ಸಲೆಹೆಗಾರರಾಗಿದ್ದ ಎಂ.ಕೆ.ನಾರಾಯಣ್ ಅವರು 2009 ರಲ್ಲಿ ಅಮೇರಿಕಾದ ಪ್ರವಾಸ ಕೈಗೊಂಡ ನಂತರ ಅಲ್ಲಿ ಅಸ್ತಿತ್ವದಲ್ಲಿದ್ದ ಎನ್.ಸಿ.ಟಿ.ಸಿ ನೋಡಿ ಅದರಂತೆ ಭಾರತದಲ್ಲೂ ಸಹ ಎನ್.ಸಿ.ಟಿ.ಸಿ ಜಾರಿಗೆ ತರಬೇಕು ಎಂದು ನಿರ್ಣಯಿಸಿದ್ದರು.

ಮುಂಬೈ ಮೇಲಿನ ದಾಳಿಯ ನಂತರ ಉಗ್ರ ಚಟುವಟಿಕೆಗಳನ್ನು ಗಮನಿಸಲು ಹಾಗು ಹತ್ತಿಕ್ಕಲು ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರಗಳ ನಡುವೆ ಹಿಂದೆಂದಿಗಿಂತಲೂ ಹೆಚ್ಚಿನ ಒಡನಾಟ ಹಾಗು ಸಹಕಾರ ಬೇಕಾಗಿದೆ ಹಾಗಾಗಿ ಎನ್.ಸಿ.ಟಿ.ಸಿ ಯಂತಹ ಸಂಸ್ಥೆಗಳು ಬೇಕು ಎಂದು ಗೃಹ ಸಚಿವರು ಹೇಳಿದ್ದರು.

ಎನ್.ಸಿ.ಟಿ.ಸಿ ಯ ಸ್ವರೂಪ ಹಾಗು ಕಾರ್ಯಾಚರಣೆ
ಎನ್.ಸಿ.ಟಿ.ಸಿ ಯನ್ನು Unlawful Activities Prevention Act, 1967 ರ ಅಡಿಯಲ್ಲಿ ರೂಪಿಸಲಾಯಿತು. ಈ ಎನ್.ಸಿ.ಟಿ.ಸಿ ಯು ಇಂಟೆಲಿಜೆನ್ಸ್ ಬ್ಯೂರೋ ನ ಅಡಿಯಲ್ಲಿ ಕೆಲಸ ಮಾಡುತ್ತದೆ. ಎನ್.ಸಿ.ಟಿ.ಸಿ ಯು ದೇಶದ ಯಾವುದೇ ಭಾಗದಲ್ಲಿ/ಯಾರನ್ನು ಬೇಕಾದರೂ ಶೋಧ ಕಾರ್ಯಾಚರಣೆಗೆ ಒಳಪಡಿಸಬಹುದು ಹಾಗು ಪೂರ್ವಾನುಮತಿಯಿಲ್ಲದೆ ಯಾರನ್ನು ಬೇಕಾದದು ಬಂಧಿಸುವ ಅಧಿಕಾರವನ್ನು ನೀಡಲಾಗಿತ್ತು. ಎನ್.ಸಿ.ಟಿ.ಸಿ ಯು ಉಗ್ರಗಾಮಿಗಳ ಮಾಹಿತಿ, ಅವರ ಚಟುವಟಿಕೆಗಳ ಮಾಹಿತಿ ಸಂಗ್ರಹಿಸುವ, ಬೇಕಾದಾಗ ಹಂಚಿಕೊಳ್ಳುವ ಹಾಗು ಉಗ್ರ-ವಿರೋಧಿ ಕಾರ್ಯಾಚರಣೆಗಳನ್ನು ನಡೆಸುವ ಅಧಿಕಾರ ನೀಡಲಾಗಿತ್ತು. ಈ ಮೇಲೆ ಹೇಳಿದ ಕೆಲಸಗಳನ್ನು ಕೈಗೊಳ್ಳಲು ಈ ಸಂಸ್ಥೆಯು ಯಾವುದೇ ರಾಜ್ಯ ಸರಕಾರ ಅನುಮತಿಯನ್ನಾಗಲಿ, ಅಥವಾ ಅಲ್ಲಿನ ಪೊಲೀಸ್ ನವರ ಸಹಾಯವನ್ನಾಗಲಿ ಕೇಳಬೇಕಾಗಿರಲಿಲ್ಲ.
ಆದರೆ ಯಾವಾಗ ಈ ಎನ್.ಸಿ.ಟಿ.ಸಿ ಗೆ ನೀಡಿರುವ ಅಧಿಕಾರದ ವಿರುದ್ಧ ರಾಜ್ಯ ಸರಕಾರಗಳು ತಿರುಗಿ ಬಿದ್ದವೋ ಆಗ ಎನ್.ಸಿ.ಟಿ.ಸಿ ಯನ್ನು ಇಂಟೆಲಿಜೆನ್ಸ್ ಬ್ಯೂರೋ ದಿಂದ ಹೊರಗಿಡಲಾಗುವುದು ಹಾಗು ಯಾವುದೇ ರಾಜ್ಯದಲ್ಲಿ ಕಾರ್ಯಾಚರಣೆ ಮಾಡುವ ಮುಂಚೆ ಆಯಾ ರಾಜ್ಯದ ಸರಕಾರ ಹಾಗು ಪೊಲೀಸ್ ಜೊತೆಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ತಿದ್ದುಪಡಿ ಮಾಡಲಾಯಿತು.

ಎನ್.ಸಿ.ಟಿ.ಸಿ ಗೆ ವಿರೋಧವೇಕೆ?
ಉಗ್ರಗಾಮಿ ಚಟುವಟಿಗೆಗಳನ್ನು ಹತ್ತಿಕ್ಕಲು ಇಂತಹ ಒಂದು ಸಂಸ್ಥೆ ಜಾರಿಗೆ ಬಂದರೆ ಒಳ್ಳೆಯದಲ್ಲವೇ? ಅದನ್ನು ರಾಜ್ಯಗಳು ಯಾಕೆ ವಿರೋಧಿಸುತ್ತಿವೆ ಅನ್ನುವ ಪ್ರಶ್ನೆ ಜನ ಸಾಮಾನ್ಯರಲ್ಲಿ ಏಳುವುದು ಸಹಜ. ಇದಕ್ಕೆ ಉತ್ತರ ಮುಂದೆ ನೋಡೋಣ. ಅಮೆರಿಕಾದ ಎನ್.ಸಿ.ಟಿ.ಸಿ ಹಾಗು ಇಂಗ್ಲೆಂಡ್ ನ ಜಾಯಿಂಟ್ ಟೆರರಿಸಂ ಅನಾಲಿಸಿಸ್ ಸೆಂಟರ್ ನಿಂದ ಸ್ಫೂರ್ತಿ ಪಡೆದಿರುವ ಭಾರತದ ಎನ್.ಸಿ.ಟಿ.ಸಿ ಅಲ್ಲಿಯ ಸಂಸ್ಥೆಗಳ ಹಾಗೆ ಕೇವಲ ತಂತ್ರಗಾರಿಕೆ ಮಾಡುವ ಹಾಗು ಸಮನ್ವಯತೇ ಸಾಧಿಸುವ ಸಂಸ್ಥೆಯಾಗಿರದೆ ಕಾರ್ಯಾಚರಣೆ ಮಾಡುವ ಅಧಿಕಾರ ಕೂಡ ಹೊಂದಿದೆ.

ಈ ಅಂಶವೇ ರಾಜ್ಯಗಳು ಪ್ರಮುಖವಾಗಿ ಎನ್.ಸಿ.ಟಿ.ಸಿ ಸಂಸ್ಥೆ ಜಾರಿಗೆ ವಿರೋಧಕ್ಕೆ ಕಾರಣ. ಈ ಸಂಸ್ಥೆ ಜಾರಿಗೆ ಬಂದರೆ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ಉಂಟಾಗಲಿದೆ ಎಂದು ರಾಜ್ಯಗಳು ವಾದಿಸಿದ್ದವು ಹಾಗು ಇದು ನಿಜ ಕೂಡ. ಲಾ ಅಂಡ್ ಆರ್ಡರ್ ರಾಜ್ಯಪಟ್ಟಿಯಲ್ಲಿದೆ ಹಾಗು ಇದು ರಾಜ್ಯಗಳು ನೋಡಿಕೊಳ್ಳಬೇಕಾದ ಕೆಲಸ. ಇದರ ಜೊತೆಗೆ ಈಗಾಗಲೇ ಮಾಹಿತಿ ಹಂಚಿಕೊಳ್ಳುವುದಕ್ಕೆ ಐ.ಬಿ ಸಾಥಿ ಇರುವಾಗ ಮತ್ತೊಂದು ಸಂಸ್ಥೆ ಯಾಕೆ ಬೇಕು ಎಂದು ರಾಜ್ಯಗಳು ಪ್ರಶ್ನಿಸಿದ್ದವು.

ಭಾರತದಲ್ಲಿ ಒಕ್ಕೂಟ ತತ್ವವನ್ನೇ ಸರಿಯಾಗಿ ಪಾಲಿಸಲಾಗುತ್ತಿಲ್ಲ, ಇಂತಹ ಹೊತ್ತಿನಲ್ಲಿ ಎನ್.ಸಿ.ಟಿ.ಸಿ ಯ ಮೂಲಕ ಕೇಂದ್ರ ಸರಕಾರ ತನ್ನ ಕೆಲಸ ಸಾಧಿಕೊಳ್ಳಲು ರಾಜ್ಯದ ಕಾನೂನು ಹಾಗು ಸುವ್ಯವಸ್ಥೆಯ ಮೇಲು ಹತೋಟಿ ಸಾಧಿಸುವ ಸಾಧನವನ್ನಾಗಿ ಬಳಸುವ ಅವಕಾಶ ಕೊಟ್ಟಂತಾಗುತ್ತದೆ ಎಂದು ಹಲವಾರು ರಕ್ಷಣಾ ತಜ್ಞರು ಅಭಿಪ್ರಾಯ ಪಡುತ್ತಾರೆ. ಇದಲ್ಲದೆ ಒಂದು ರಾಜ್ಯದಲ್ಲಿ ವಾಸವಾಗಿರುವ ಪ್ರಜೆಯೊಬ್ಬನನ್ನು ಎನ್.ಸಿ.ಟಿ.ಸಿ ಬಂದಿಸಿದರೆ, ಅದರಿಂದಾಗುವ ಪರಿಣಾಮಗಳನ್ನು ರಾಜ್ಯ ಸರಕಾರವೇ ಈಡೇರಿಸಬೇಕಾಗುತ್ತದೆಯೇ ಹೊರತು ಎನ್.ಸಿ.ಟಿ.ಸಿ ಯಲ್ಲ. ಹಾಗಿದ್ದಾಗ ಎನ್.ಸಿ.ಟಿ.ಸಿ ಗೆ ಇಂತಹ ಅಧಿಕಾರ ಕೊಡುವುದಾದರೂ ಯಾಕೆ?

ಉಗ್ರ ಚಟುವಟಿಕೆಗಳನ್ನು ಯಾವ ರಾಜ್ಯವು ಪ್ರೋತ್ಸಾಹಿಸುತ್ತಿಲ್ಲ, ಆದರೆ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ನೆಪದಲ್ಲಿ ರಾಜ್ಯ ಸರಕಾರದ ಅಧಿಕಾರಗಳನ್ನು ಮೊಟಕು ಗೊಳಿಸುವ, ಅವರನ್ನು ಗಣನೆಗೆ ತಗೆದುಕೊಳ್ಳದೆ ಯಾವ ಕಾನೂನು ಬೇಕಾದರೂ ಮಾಡಬಹುದು, ಯಾವ ಸಂಸ್ಥೆಯನ್ನು ರೂಪಿಸಬಹದು ಎನ್ನುವ ಮನಸ್ಥಿತಿಯೇ ಭಾರತದ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ. ನರೇಂದ್ರ ಮೋದಿ, ನವೀನ್ ಪಾಟ್ನಾಯಕ್, ಜಯಲಲಿತಾ, ಮಮತಾ ಬ್ಯಾನೆರ್ಜಿ ಮುಂತಾದ ಮುಖ್ಯಮಂತ್ರಿಗಳು ಸೇರಿದಂತೆ ಸುಮಾರು 13 ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಹಾಗು ಪಾರ್ಲಿಮೆಂಟ್ ನಲ್ಲಿ ಅಂದಿನ ಪ್ರತಿಪಕ್ಷವಾಗಿದ್ದ ಬಿಜೆಪಿ ಹಾಗು ಇತರೆ ಪಕ್ಷಗಳು ಈ ಸಂಸ್ಥೆ ಜಾರಿಗೆ ತರದಂತೆ ನೋಡಿಕೊಂಡಿದ್ದು ರಾಜ್ಯಗಳ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಗೆಲುವು ಎಂದರೆ ತಪ್ಪಲ್ಲ.

ಆದರೆ ಈಗ ಅಧಿಕಾರದಲ್ಲಿರುವ ಎನ್.ಡಿ.ಎ ಸರಕಾರ ನೆನೆಗುದಿಗೆ ಬಿದ್ದಿದ್ದ ಈ ಪ್ರಸ್ತಾವನೆಯನ್ನು ಮತ್ತೆ ಜಾರಿಗೆ ತರಲು ಉತ್ಸುಕವಾಗಿದೆ ಮತ್ತು ಗೃಹ ಸಚಿವಾಲದಯ ಲೋಕಸಭಾ ಸಮಿತಿಯ ಅಧ್ಯಕ್ಷರಾಗಿರುವ ಪಿ. ಚಿದಂಬರಂ ಅವರು ಗೃಹ ಸಚಿವಾಲದಯ ಕಾರ್ಯದರ್ಶಿಗಳಿಗೆ ಎನ್.ಸಿ.ಟಿ.ಸಿ ಯನ್ನು ಜಾರಿಗೆ ತರುವ ಬಗ್ಗೆ ಸರಕಾರದ ನಿಲುವೇನು ಎಂದು ಕೇಳಿದಾಗ, ಈ ವಿಷಯ ಸರಕಾರದ ಗಮನದಲ್ಲಿದ್ದು ರಾಜ್ಯಗಳಿಗೆ ಅಸಮಾಧಾನವಾಗದಂತೆ ಜಾರಿಗೆ ತರುವ ಬಗ್ಗೆ ಯೋಚಿಸಬೇಕಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ರಾಜ್ಯಗಳು ಈ ವಿಷಯದಲ್ಲಿ ತಮ್ಮ ಸಂವಿಧಾನ ಬದ್ಧ ಅಧಿಕಾರ ಕಳೆದುಕೊಳ್ಳದೆ ಉಗ್ರವಾದವನ್ನು ಮಟ್ಟ ಹಾಕಲು ಎನ್.ಸಿ.ಟಿ.ಸಿ ಯನ್ನು ಜಾರಿಗೆ ತರುವ ಬಗ್ಗೆ ಯೋಚಿಸಬೇಕಿದೆ.

ನೀಟ್ ಎಂಬ ಒಕ್ಕೂಟ ವಿರೋಧಿ ನೀತಿ

Authored by : Chetan Jeeral

ಇತ್ತೀಚಿಗೆ ಕೇಂದ್ರ ಸರಕಾರ ನೀಟ್ ಪರೀಕ್ಷೆಯನ್ನು ರಾಷ್ಟ್ರದಾದ್ಯಂತ ಜಾರಿಗೆ ತಂದಿದೆ. ಇದರ ಬಗ್ಗೆ ಹಲವಾರು ಪರ ವಿರೋಧಗಳು ಕೇಳಿ ಬರುತ್ತಿವೆ. ನೀಟ್ ನ ಮೊದಲ ಪರೀಕ್ಷೆಯಾದ ನಂತರ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪರೀಕ್ಷೆ ನಡೆಸಿದ ರೀತಿಯ ಬಗ್ಗೆ ಹಲವಾರು ಅಪಸ್ವರಗಳು ಕೇಳಿಬಂದಿವೆ. ಸಿ.ಬಿ.ಎಸ್.ಇ ಮಂಡಳಿಯು ಪರೀಕ್ಷೆಯನ್ನು ಸಮರ್ಥವಾಗಿ ನಡೆಸದೇ ಇರುವುದು, ಪರೀಕ್ಷೆಗಳು ಪಕ್ಷಪಾತದಿಂದ ಕೂಡಿದ್ದು ಹಾಗೂ ಈ ಪರೀಕ್ಷೆಗಳ ಮೂಲಕ ಸಿ.ಬಿ.ಎಸ್.ಇ ಯೇತರ ಪಠ್ಯಕ್ರಮಗಳ ಮಕ್ಕಳಿಗೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಗಳು ಕೇಳಿಬಂದಿದ್ದವು.

ಈ ನೀಟ್ ಪರೀಕ್ಷೆ ಎಂದರೇನು? ಇದರಿಂದ ಏನಾದರೂ ಲಾಭಗಳಿವೆಯೇ? ಈ ಪರೀಕ್ಷೆಯ ಬಗ್ಗೆ ಹಲವಾರು ಶೈಕ್ಷಣಿಕ ಸಂಸ್ಥೆಗಳು ಹಾಗು ರಾಜ್ಯ ಸರಕಾರಗಳು ವಿರೋಧ ವ್ಯಕ್ತ ಪಡಿಸಿದ್ದವು, ಅವರು ನೀಡಿದ ಕಾರಣವೇನು? ಈ ನೀಟ್ ಪರೀಕ್ಷೆಯಿಂದ ರಾಜ್ಯಗಳಿಗೆ ಏನಾದರೂ ಒಳಿತಾಗಲಿದೆಯೇ? ಮುಂದೆ ನೋಡೋಣ.

ನೀಟ್ ಎಂದರೆ ರಾಷ್ಟ್ರೀಯ ಅರ್ಹತಾ ಹಾಗು ಪ್ರವೇಶ ಪರೀಕ್ಷೆ (National Eligibility Cum Entrance Test). ಇದನ್ನು ವೈದ್ಯಕೀಯ ಹಾಗು ದಂತ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ರಾಷ್ಟ್ರಾದ್ಯಂತ ನಡೆಸಲಾಗುವ ಪರೀಕ್ಷೆ. ಈ ಪರೀಕ್ಷೆಯನ್ನು ಸಿ.ಬಿ.ಎಸ್.ಇ ಮಂಡಳಿಯು ನಡೆಸುತ್ತದೆ. ನೀಟ್ ಪರೀಕ್ಷೆ ಜಾರಿಯಾದ ನಂತರ ಈ ಮುಂಚೆ ಇದ್ದ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಹಾಗು ಹಲವಾರು ರಾಜ್ಯಗಳು ಹಾಗು ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿದ್ದ ಪ್ರವೇಶ ಪರೀಕ್ಷೆಗಳು ರದ್ದುಗೊಂಡಿವೆ. ಸಿ.ಬಿ.ಎಸ್.ಇ ಮಂಡಳಿಯು ನೀಟ್ ಪರೀಕ್ಷೆಯ ಫಲಿತಾಂಶಗಳನ್ನು ಹಾಗು ರಾಷ್ಟ್ರ ಮಟ್ಟದ ಅರ್ಹತಾ ಪಟ್ಟಿಯನ್ನು ಘೋಷಿಸುತ್ತದೆ.

ನೀಟ್ ಪರೀಕ್ಷೆಯ ಇತಿಹಾಸ
2012 ರ ನಂತರ ನೀಟ್ ಪರೀಕ್ಷೆಯನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರಕಾರ ಯೋಜನೆ ರೂಪಿಸಿತ್ತು. ಆದರೆ ಸಿ.ಬಿ.ಎಸ್.ಇ ಹಾಗು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಈ ಪರೀಕ್ಷೆಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಿದವು. ಮೇ 2013 ರಲ್ಲಿ ಮೊದಲ ಬಾರಿಗೆ ಈ ಪರೀಕ್ಷೆಯನ್ನು ನಡೆಸಲಾಯಿತು. ಆದರೆ ಅದೇ ವರ್ಷದ ಜೂಲೈ ನಲ್ಲಿ ಸುಪ್ರೀಂ ಕೋರ್ಟ್ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ಎಂ.ಸಿ.ಐ ಕಾಲೇಜುಗಳು ನಡೆಸುವ ಪ್ರವೇಶ ಪ್ರಕ್ರಿಯೆಯಲ್ಲಿ ಮೂಗು ತುರಿಸುವಂತಿಲ್ಲ ಎಂದು ಆದೇಶ ನೀಡಿತು.

2012 ರಲ್ಲಿ ಯಾವಾಗ ಎಂಸಿಐ ವೈದ್ಯಕೀಯ ಶಿಕ್ಷಣಕ್ಕೆ ನೀಟ್ ಪರೀಕ್ಷೆಯನ್ನು ಜಾರಿಗೆ ತರುವುದಾಗಿ ಹೇಳಿತೋ ಆಗ ಆಂಧ್ರ ಪ್ರದೇಶ, ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ ಹಾಗು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ಈ ಬದಲಾವಣೆಯನ್ನು ವಿರೋಧಿಸಿದ್ದವು. ಎಂ.ಸಿ.ಐ ಹೇಳಿರುವ ಪಠ್ಯಕ್ರಮಕ್ಕೂ, ರಾಜ್ಯ ಸರಕಾರಗಳ ಪಠ್ಯಕ್ರಮಕ್ಕೂ ಭಾರಿ ವ್ಯತ್ಯಾಸವಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಪರೀಕ್ಷೆಯನ್ನು ವಿರೋಧಿಸಿದ್ದವು.

ಆದರೆ ಏಪ್ರಿಲ್ 2016 ರಲ್ಲಿ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಹಿಂದೆ ನೀಡಿದ್ದ ಆದೇಶವನ್ನು ವಾಪಸ್ ಪಡೆದು, ಕೇಂದ್ರ ಸರಕಾರ ಹಾಗು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಲು ಆದೇಶ ನೀಡಿತು.

ನೀಟ್ ಪರೀಕ್ಷೆಗೆ ವಿರೋಧ
ಹಾಲಿ ಇರುವ ನೀಟ್ ಪರೀಕ್ಷೆಯು ರಾಜ್ಯಗಳು ನಡೆಸುತ್ತಿದ್ದ ವೈದ್ಯಕೀಯ ಅರ್ಹತಾ ಪರೀಕ್ಷೆಗೆ ಬದಲಾಗಿ ಜಾರಿಗೆ ತರಲಾಗಿದೆ. ಇದಕ್ಕೆ ಹಲವಾರು ಹಿಂದಿಯೇತರ ಭಾಷಿಕ ರಾಜ್ಯಗಳು ಬಲವಾಗಿ ವಿರೋಧ ವ್ಯಕ್ತಪಡಿಸಿದ್ದವು. ರಾಜ್ಯಗಳು ನಡೆಸುತ್ತಿದ್ದ ಅರ್ಹತಾ ಪರೀಕ್ಷೆಯಲ್ಲಿ ಆಯಾ ರಾಜ್ಯದ ಪಠ್ಯ ಕ್ರಮದಲ್ಲಿ ಓದಿದ್ದ ವಿದ್ಯಾರ್ಥಿಗಳು ಸೀಟಿನ ಆಕಾಂಕ್ಷಿಗಳಾಗಿರುತ್ತಿದ್ದರು. ನೀಟ್ ಪರೀಕ್ಷೆಯ ಫಲಿತಾಂಶ ಹೊರಬಂದಾಗ ರಾಜ್ಯ ಸರಕಾರದ ಪಠ್ಯಕ್ರಮದಲ್ಲಿ ಓದಿದ್ದ ವಿದ್ಯಾರ್ಥಿಗಳಿಗಿಂತ ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಓದಿದ್ದ ವಿದ್ಯಾರ್ಥಿಗಳು ಈ ನೀಟ್ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದರು. ಇದು ರಾಜ್ಯ ಪಾಠ್ಯಕ್ರಮದಲ್ಲಿ ಓದಿದ್ದ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವೇ ಸರಿ.

ಯಾವಾಗ ಸುಪ್ರೀಂ ಕೋರ್ಟ್ ನೀಟ್ ಪರೀಕ್ಷೆಯನ್ನು ಜಾರಿಗೆ ತರಬೇಕು ಎಂದು ಹೇಳಿತೋ ಆಗ ತೀರ್ಪು ವಿರೋಧಿಸಿ ಹಲವಾರು ಪ್ರತಿಭಟನೆಗಳು ನಡೆದಿವೆ. ನೀಟ್ ಪರೀಕ್ಷೆಯನ್ನು ಜಾರಿಗೆ ತರುವ ಬಗ್ಗೆ ವಿದ್ಯಾರ್ಥಿಗಳು, ವೈದ್ಯರು, ಪೋಷಕರು, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಸಂಘಟನೆಗಳು ಸೇರಿದಂತೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಇದ್ದ ಕಾರಣ ನೀಟ್ ಪರೀಕ್ಷೆಯು ಸಿ.ಬಿ.ಎಸ್.ಇ ಪಠ್ಯಕ್ರಮ ಓದುವ ಮಕ್ಕಳಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ ಹಾಗೂ ಇದರಿಂದ ರಾಜ್ಯ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವುದು.

ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಓದುವ ಹೆಚ್ಚಿನ ಮಕ್ಕಳು ನಗರ ಪ್ರದೇಶದವರು, ಶ್ರೀಮಂತರು ಹಾಗೂ ಹಿಂದಿ ರಾಜ್ಯಗಳಿಂದ ಬಂದಿರುವವರು ಆಗಿರುತ್ತಾರೆ. ಇದರ ಜೊತೆಜೊತೆಗೆ ಸಿ.ಬಿ.ಎಸ್. ಇ ಯಲ್ಲಿ ಓದಿಸಿದರೆ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎನ್ನುವ ಆಸೆ ತೋರಿಸಿ ಸ್ಥಳೀಯ ಮಕ್ಕಳನ್ನು ಈ ಶಾಲೆಗೇ ಸೇರಿಸುವ ಪರಿಪಾಠ ಶುರುವಾಗಿದೆ. ಗಮನಿಸಬೇಕಾದ ವಿಷಯವೆಂದರೆ ಈ ಶಾಲೆಗಳಲ್ಲಿ ಸ್ಥಳೀಯ ಭಾಷೆಯನ್ನ ಒಂದು ಆಯ್ಕೆಯ ವಿಷ್ಯವಾಗಿಯೂ ಕಲಿಸದಿರುವ ಶಾಲೆಗಳಿವೆ. ಇದರ ಜೊತೆ ಜೊತೆಗೆ ಹಲವಾರು ದಶಕಗಳಿಂದ ದಕ್ಷತೆಯಿಂದ ನಡೆಸಿಕೊಂಡು ಬಂದಿದ್ದ ಸಿ.ಇ.ಟಿ ಯಂತಹ ಪರೀಕ್ಷಾ ವಿಧಾನಗಳನ್ನು ರದ್ದುಗೊಳಿಸುತ್ತಿರುವುದು.

ನೀಟ್ ನ ಮಿಥ್ಯಗಳು
ನ್ಯಾಯಾಲಯ ನೀಟ್ ಪರೀಕ್ಷೆಯನ್ನು ಜಾರಿಗೆ ತರಲು ನೀಡಿದ ಕಾರಣಗಳಲ್ಲಿ ಖಾಸಗಿ ಸಂಸ್ಥೆಗಳು ಸೀಟು ಭರ್ತಿಯ ಸಮಯದಲ್ಲಿ ಮಾಡುವ ಭ್ರಷ್ಟಾಚಾರ, ಮಕ್ಕಳು ಹಲವಾರು ಪರೀಕ್ಷೆಗಳನ್ನು ಬರೆಯಲು ಮಾಡುವ ಖರ್ಚು, ಆತಂಕ ಮುಂತಾದ ವಿಷಯಗಳು ಇದ್ದವು. ಇದರ ಜೊತೆಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಸಿ.ಬಿ.ಎಸ್.ಇ ಪ್ರವೇಶ ಪ್ರಕ್ರಿಯೆಯ ಸಮಯದಲ್ಲಿ ಆಗುವ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತವೆ ಎಂದು ಹೇಳಿತ್ತು ಹಾಗೂ ಒಂದೇ ಪಠ್ಯಕ್ರಮ ಬಳಸುವುದರಿಂದ ಶಿಕ್ಷಣ ಮುಗಿಸಿ ಹೊರಬರುವ ವೈದ್ಯರು ಒಂದೇ ರೀತಿಯ ಅರ್ಹತೆ ಹೊಂದಿರುತ್ತಾರೆ ಎಂದು ಹೇಳಿತ್ತು.

ಆದರೆ ಈ ವಾದಗಳು ಅಷ್ಟು ಸಮಂಜಸವಾಗಿಲ್ಲ ಎನ್ನುವುದನ್ನು ನಾವು ನೋಡಬಹುದು. ಮೊದಲನೆಯದಾಗಿ ಪ್ರವೇಶ ಪರೀಕ್ಷೆಯಿಂದ ಒಂದೇ ರೀತಿಯ ವೈದ್ಯರು ಹೊರಬರುತ್ತಾರೆ ಎನ್ನುವುದು ಬಾಲಿಶ ವಾದ. ಈಗಾಗಲೇ ಅನೇಕ ರಾಜ್ಯಗಳು ತಮ್ಮದೇ ಆದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಹೊಂದಿದ್ದವು, ಕರ್ನಾಟಕದ ಸಿ.ಇ.ಟಿ ಪರೀಕ್ಷೆಯು ದೇಶಕ್ಕೆ ಮಾದರಿಯಾದ ಪರೀಕ್ಷೆಯಾಗಿತ್ತು. ಕರ್ನಾಟಕ ಸಿ.ಇ.ಟಿ ಪರೀಕ್ಷೆಯನ್ನು ನೋಡಿ ದೇಶದ ಹಲವಾರು ರಾಜ್ಯಗಳು ತಮ್ಮ ರಾಜ್ಯದಲ್ಲೂ ಅದೇ ವಿಧಾನವನ್ನು ಅಳವಡಿಸಿಕೊಂಡಿದ್ದವು. ಆದರೆ ನೀಟ್ ಜಾರಿಗೆ ಬಂದ ಮೇಲೆ ಸಿ.ಇ.ಟಿ ಮೂಲಕ ವೈದ್ಯಕೀಯ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಎಲ್ಲೋ ಕೆಲವು ಕಡೆ ಆಗುವ ಭ್ರಷ್ಟಾಚಾರ ನೆಪವೊಡ್ಡಿ ರಾಜ್ಯಗಳು ನಡೆಸುತ್ತಿದ್ದ ಉತ್ತಮ ಪರೀಕ್ಷಾ ಮಾದರಿಯನ್ನು ರದ್ದುಗೊಳಿಸುವುದು ರಾಜ್ಯ ಹಕ್ಕುಗಳನ್ನು ಮೊಟಕುಗೊಳಿಸಿದಂತೆ ಆಗುವುದಲ್ಲವೇ? ಇದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅನ್ಯಾಯ.

ಇನ್ನು ಹಲವಾರು ಪರೀಕ್ಷೆಗಳನ್ನು ಬರೆಯುವ ಮಕ್ಕಳಿಗೆ ಇದರಿಂದ ಮುಕ್ತಿ ಸಿಗುತ್ತದೆ ಎನ್ನುವ ವಾದದ ಸುತ್ತ ನೋಡಿದರೆ, ಮೊದಲನೆಯದಾಗಿ ಹೊರರಾಜ್ಯದಿಂದ ಬಂದ ವಿದ್ಯಾರ್ಥಿ ಒಬ್ಬ ಎಷ್ಟು ರಾಜ್ಯಗಳಲ್ಲಿ ಪರೀಕ್ಷೆ ಬರೆಯುತ್ತಾನೆ ಎನ್ನುವ ಅಂಕಿ ಅಂಶಗಳನ್ನು ಕೇಂದ್ರ ಸರಕಾರವಾಗಲಿ ಅಥವಾ ಕೋರ್ಟ್ ಆಗಲಿ ಕೊಟ್ಟಿಲ್ಲ. ಅನುಭವದ ಆಧಾರದ ಮೇಲೆ ಹೇಳುವುದಾದರೆ ಆ ರೀತಿ ಪರೀಕ್ಷೆ ಬರೆಯುವವರ ಸಂಖ್ಯೆ ತೀರಾ ಚಿಕ್ಕದು. ಹಾಗಿದ್ದ ಮೇಲೆ ಯಾರ ಒಳಿತಿಗಾಗಿ ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಬಲಿಕೊಡುವ ವ್ಯವಸ್ಥೆ ಮಾಡಲಾಗಿದೆ?

ಸಿ.ಬಿ.ಎಸ್.ಇ ಪಠ್ಯಕ್ರಮ
ನೀಟ್ ಪರೀಕ್ಷೆಯಲ್ಲಿ ಸಿ.ಬಿ.ಎಸ್.ಇ ಪಠ್ಯಕ್ರಮವನ್ನು ಉಪಯೋಗಿಸಲಾಗುತ್ತಿದೆ. ಹಾಗಿದ್ದರೆ ಸಿ.ಬಿ.ಎಸ್.ಇ ಮಂಡಳಿಯ ಶಾಲೆಯಲ್ಲಿ ಓದುತ್ತಿರುವ ಮಕ್ಕಳೇ ಹೆಚ್ಚಿರಬೇಕು ಎಂದು ನಮ್ಮಲ್ಲಿ ಪ್ರಶ್ನೆ ಮೂಡುವುದು ಸಹಜ ಆದರೆ ಅದು ನಿಜವಲ್ಲ. ಸಿ.ಬಿ.ಎಸ್.ಇ ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳ ಒಟ್ಟು ಸಂಖ್ಯೆ ಮಹಾರಾಷ್ಟ್ರ ರಾಜ್ಯದ ಪಠ್ಯಕ್ರಮದಲ್ಲಿ 12 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆಗಿಂತ ಕಡಿಮೆ ಇದೆ. ಹಾಗಿದ್ದರೆ ಯಾವ ಆಧಾರದ ಮೇಲೆ ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ತಗೆದುಕೊಳ್ಳಲಾಯಿತು?

ಹಾಗಂತ ಸಿ.ಬಿ.ಎಸ್.ಇ ಪಠ್ಯಕ್ರಮ ಎಲ್ಲ ಬೇರೆ ಪಠ್ಯಕ್ರಮಕ್ಕಿಂತ ಉತ್ತಮವೇ ಎನ್ನುವ ಪ್ರಶ್ನೆಯು ನಮ್ಮಲ್ಲಿ ಬರಬಹುದು. ಆದರೆ ಇದಕ್ಕೂ ಉತ್ತರ ನಕಾರಾತ್ಮಕವಾಗಿದೆ. ಅಧ್ಯಾಯನ ಒಂದರ ಪ್ರಕಾರ ಬೇರೆ ಬೇರೆ ಪಠ್ಯಕ್ರಮದಲ್ಲಿ ಓದಿರುವ ಮಕ್ಕಳ ವಿಜ್ಞಾನ ವಿಷಯದ ಮೇಲಿನ ಹಿಡಿತದ ಬಗ್ಗೆ ಸಂಶೋಧನೆ ನಡೆಸಿದಾಗ ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಓದಿದ ಮಕ್ಕಳೇನು ಮೊದಲಿನ ಸ್ಥಾನದಲ್ಲಿರಲಿಲ್ಲ. ಪಶ್ಚಿಮ ಬಂಗಾಳದ ಪಠ್ಯಕ್ರಮದಲ್ಲಿ ಓದಿದ ಮಕ್ಕಳು ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗಿಂತ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತದಲ್ಲಿ ಮುಂದಿದ್ದರು. ಹಾಗಿದ್ದ ಮೇಲೆ ಯಾವ ಆಧಾರ ಮೇಲೆ ಸಿ.ಬಿ.ಎಸ್.ಇ ಪಠ್ಯಕ್ರಮವನ್ನು ಪಾಲಿಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಯಿತು? ಕೇವಲ ಯಾರೋ ಕೆಲವು ಜನರ ತರ್ಕ ಹೀನ ನಿರ್ಧಾರ ಭಾರತದ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಕತ್ತಲೆಯ ಕೂಪಕ್ಕೆ ತಳ್ಳುವ ನಿರ್ಧಾರವನ್ನು ಒಪ್ಪಿಕೊಳ್ಳಬೇಕೇ?

ಇನ್ನು ಭ್ರಷ್ಟಾಚಾರದ ವಿಷಯಕ್ಕೆ ಬರುವುದಾದರೆ ಎಂ.ಸಿ.ಐ (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಹಾಗೂ ಸಿ.ಬಿ.ಎಸ್.ಇ ಆಡಳಿತ ಮಂಡಳಿಯ ಮೇಲೆಯೇ ಹಲವಾರು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಹಾಗಿರುವಾಗ ಭ್ರಷ್ಟತೆಯ ಕಳಂಕ ಹೊಂದಿರುವ ಸಂಸ್ಥೆಗಳಿಂದಲೇ ಭ್ರಷ್ಟ ಮುಕ್ತ ಪರೀಕ್ಷೆ ಹಾಗೂ ಪ್ರವೇಶ ಪ್ರಕ್ರಿಯೆಯನ್ನು ಅಪೇಕ್ಷಿಸಲು ಸಾಧ್ಯವೇ ಎನ್ನುವುದನ್ನು ಯೋಚಿಸಿ ನೋಡಬೇಕಾಗುತ್ತದೆ. ಇದಲ್ಲದೆ ಪರೀಕ್ಷೆಗಿಂತ ಮುಂಚೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ನೀಟ್ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸಿ.ಬಿ.ಎಸ್.ಇ Vs ರಾಜ್ಯ ಪಠ್ಯಕ್ರಮ
ಸಹಜವಾಗಿ ನೀಟ್ ಪರೀಕ್ಷೆಯನ್ನು ಸಿ.ಬಿ.ಎಸ್.ಇ ಪಠ್ಯಕ್ರಮ ಹೊಂದಿರುವ ಶಾಲೆಗಳು ತೆರೆದ ಕೈಗಳಿಂದ ಅಪ್ಪಿಕೊಂಡು ಮುದ್ದಾಡುತ್ತಿವೆ. ನೀಟ್ ಜಾರಿಗೆ ಬಂದಾಗಿನಿಂದ ಪರೀಕ್ಷೆಗೆ ಪಾಠ ಹೇಳಿಕೊಡುವ ಟ್ಯೂಷನ್ ಗಳು ವಿದ್ಯಾರ್ಥಿಗಳ ಸುಲಿಗೆಯನ್ನು ಶುರು ಮಾಡಿವೆ. ನೀಟ್ ಪರೀಕ್ಷೆಯಲ್ಲಿ ತಮ್ಮ ಪಠ್ಯಕ್ರಮದಲ್ಲಿ ಓದಿದ ಮಕ್ಕಳು ಹೆಚ್ಚಿನ ಸೀಟುಗಳನ್ನು ಪಡೆದಂತೆ ತಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚು ಪ್ರಸಾರ ಮಾಡುತ್ತವೆ. ಪೋಷಕರಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಓದಿಸಿದರೆ ಉಪಯೋಗವಿಲ್ಲ, ನಿಮ್ಮ ಮಕ್ಕಳಿಗೆ ಸುಭದ್ರ ಭವಿಷ್ಯ ಬೇಕಿದ್ದಲ್ಲಿ ಅವರನ್ನು ಸಿ.ಬಿ.ಎಸ್.ಇ ಶಾಲೆಗೇ ಸೇರಿಸಿ ಎನ್ನುವ ಕೀಳರಿಮೆ ಬಿತ್ತಲು ಶುರು ಮಾಡುತ್ತವೆ. ಇನ್ನು ಸಿ.ಬಿ.ಎಸ್.ಇ ಶಾಲೆಗಳು ನಾಯಿ ಕೊಡೆಗಳಂತೆ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ತಲೆ ಎತ್ತುತ್ತವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ದುಡ್ಡು ನೀವು ತೆರಬೇಕು ಎನ್ನುವ ನಿಯಮ ಹೇಳುತ್ತವೆ. ಇದೇ ಹೊತ್ತಿನಲ್ಲಿ ಸಿ.ಬಿ.ಎಸ್.ಇ ಮಂಡಳಿಯು ಮೂಲ ನಿಯಮ ತೂರಿ ಹೊಸ ಶಾಲೆ ಪ್ರಾರಂಭಕ್ಕೆ ಬರುವ ಪ್ರತಿಯೊಂದು ಅರ್ಜಿಗೂ ಅಸ್ತು ಅನ್ನುತ್ತದೆ. ಈ ಎಲ್ಲ ಪ್ರಕ್ರಿಯೆಯಲ್ಲೂ ರಾಜ್ಯ ಸರಕಾರಕ್ಕೆ ಯಾವುದೇ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ ಎನ್ನುವುದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಶಿಕ್ಷಣದ ಹಕ್ಕು ರಾಜ್ಯದ್ದು ಎಂದು ಹೇಳುವ ಕೇಂದ್ರ ಸರಕಾರ ಇನ್ನೊಂದು ಕಡೆಯಿಂದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಸದ್ದಿಲ್ಲದಂತೆ ತನ್ನ ತೆಕ್ಕೆಗೆ ತಗೆದುಕೊಳ್ಳುತ್ತ ರಾಜ್ಯ ಸರಕಾರದ ಹಿಡಿತವನ್ನು ಮುರಿಯುತ್ತಿದೆ.

ನೀಟ್ ಪರೀಕ್ಷೆಯ ಫಲಿತಾಂಶಗಳು ಸಿ.ಬಿ.ಎಸ್.ಇ ಪಠ್ಯಕ್ರಮ ಉತ್ತಮ ಹಾಗೂ ರಾಜ್ಯಗಳ ಪಠ್ಯಕ್ರಮ ಉಪಯೋಗಕ್ಕೆ ಬಾರದ್ದು ಎನ್ನುವ ಅತಾರ್ಕಿತ ವಾದವನ್ನು ಹುಟ್ಟು ಹಾಕುತ್ತಿವೆ. ರಾಜ್ಯ ಪಠ್ಯಕ್ರಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಈ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಇಲ್ಲಿ ಸಿ.ಬಿ.ಎಸ್.ಇ ಮಂಡಳಿಯು ಅದ್ಭುತವಾದ ಪಠ್ಯಕ್ರಮವನ್ನೇನು ರೂಪಿಸಿಲ್ಲ ಬದಲಾಗಿ ತನ್ನ ಪಠ್ಯಕ್ರಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ನಿಯಮಗಳನ್ನು ರೂಪಿಸಿ ಇತರೆ ಪಠ್ಯಕ್ರಮದಲ್ಲಿ ಓದಿದ ವಿದ್ಯಾಥಿಗಳು ಹಾಗೂ ಪೋಷಕರಲ್ಲಿ ಕೀಳರಿಮೆಯನ್ನು ಬಿತ್ತುವ ಕೆಲಸ ಮಾಡುತ್ತಿದೆ.

ಹಿಂದಿಯೇತರ ಭಾಷೆಗಳಲ್ಲಿ ನೀಟ್ ಪರೀಕ್ಷೆ
ನೀಟ್ ಪರೀಕ್ಷೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ರಾಜ್ಯಗಳು ಆಯಾ ರಾಜ್ಯದ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಾಗ ಸಿ.ಬಿ.ಎಸ್.ಇ ಮಂಡಳಿಯು ಮೊದಲಿಗೆ ಅದು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಯಾವಾಗ ಸಾಮಾನ್ಯ ಜನರು ಹಾಗೂ ರಾಜ್ಯ ಸರಕಾರಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಶುರುಮಾಡಿದರೋ ಆಗ ಹಿಂದಿಯೇತರ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಸಿ.ಬಿ.ಎಸ್.ಇ ಮಂಡಳಿಯು ಅನುವು ಮಾಡಿಕೊಟ್ಟಿತು.

ಆದರೆ ಸಮಸ್ಯೆ ಇಲ್ಲಿಗೆ ಮುಗಿಯಲಿಲ್ಲ, ಮೊದಲನೆಯದಾಗಿ ಪ್ರತಿಯೊಂದು ರಾಜ್ಯವು ತನ್ನ ರಾಜ್ಯದ ಮಕ್ಕಳಿಗೆ ಹೊಂದುವಂತೆ ಪಠ್ಯಕ್ರಮಗಳನ್ನು ರೂಪಿಸಿ, ಅದಕ್ಕೆ ಹೊಂದುವಂತೆ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿದ್ದವು. ಯಾವಾಗ ನೀಟ್ ಜಾರಿಯಾಯಿತೋ ರಾಜ್ಯ ಪಠ್ಯಕ್ರಮವನ್ನು ಓದುತ್ತಿದ್ದ ಮಕ್ಕಳು ಒಂದೇ ಬಾರಿಗೆ ಸಿ.ಬಿ.ಎಸ್.ಇ ಮಂಡಳಿಯ ಪಠ್ಯಕ್ರಮದ ಮಕ್ಕಳ ಜೊತೆ ಪೈಪೋಟಿ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಹೇಗಾದರೂ ಸರಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸ್ಪರ್ಧೆ ಒಪ್ಪಿಕೊಂಡು ಮಕ್ಕಳು ಪರೀಕ್ಷೆ ಬರೆಯಲು ಸಿದ್ಧರಾದರು, ಆದರೆ ಅಲ್ಲೂ ಕೂಡ ರಾಜ್ಯದ ಪಠ್ಯಕ್ರಮ ಓದಿದ ಮಕ್ಕಳಿಗೆ ಮೋಸವೊಂದು ಕಾದಿತ್ತು.

ಸಾಮಾನ್ಯ ಪ್ರವೇಶ ಪರೀಕ್ಷೆಯೆಂದರೆ ಆ ಪರೀಕ್ಷೆಯನ್ನು ಬರೆಯುವ ಎಲ್ಲ ಮಕ್ಕಳಿಗೂ ಒಂದೇ ಪ್ರಶ್ನೆ ಪತ್ರಿಕೆ ಇರುತ್ತದೆ ಎಂದು ನಾವೆಲ್ಲಾ ಅಂದುಕೊಂಡಿರುತ್ತೇವೆ ಅಲ್ಲವೇ? ಆದರೆ ನೀಟ್ ಪರೀಕ್ಷೆಯಲ್ಲಿ ಮೂಲ ಪ್ರಶ್ನೆಗಳು ಎಲ್ಲ ಭಾಷೆಗಳಿಗೂ ಅನುವಾದವಾಗದೆ, ಪ್ರತಿಯೊಂದು ಭಾಷೆಯಲ್ಲೂ ಬೇರೆ ಬೇರೆ ರೀತಿಯ ಪ್ರಶ್ನೆ ಪತ್ರಿಕೆಗಳನ್ನು ಸಿ.ಬಿ.ಎಸ್.ಇ ಮಂಡಳಿಯು ತಯಾರು ಮಾಡಿತ್ತು. ಇತರ ಭಾಷೆಯ ಪ್ರಶ್ನೆಗಳು ಹಿಂದಿ ಭಾಷೆಯ ಪ್ರಶ್ನೆಗಳಿಗಿಂತ ಬಹಳಷ್ಟು ಕಠಿಣವಾಗಿದ್ದವು ಎನ್ನುವುದನ್ನ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರೇ ಎತ್ತಿ ತೋರಿಸಿದ್ದಾರೆ. ಇದರ ಜೊತೆಗೆ ಸಿ.ಬಿ.ಎಸ್.ಇ ಸಹ ಎಲ್ಲಿಯೂ ತಾನು ಬೇರೆ ಭಾಷೆಯ ವಿಧಾರ್ಥಿಗಳಿಗೆ ಬೇರೆ ಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡುತ್ತೇವೆ ಎಂದು ಹೇಳಿರಲಿಲ್ಲ. ಹಾಗಿದ್ದರೆ ಇದು ಸಿ.ಬಿ.ಎಸ್.ಇ ಮಂಡಳಿಯು ಹಿಂದಿಯೇತರ, ಸಿ.ಬಿ.ಎಸ್.ಇ ಯೇತರ ರಾಜ್ಯಗಳ ಪಠ್ಯಕ್ರಮವನ್ನು ಓದಿದ ಮಕ್ಕಳಿಗೆ ಮಾಡಿದ ಮೋಸವಲ್ಲವೇ? ಹಾಗಿದ್ದ ಮೇಲೆ ಇದನ್ನ ಸಮಾನ ಅರ್ಹತಾ ಪ್ರವೇಶ ಪರೀಕ್ಷೆಯಂದು ಹೇಗೆ ಕರೆಯಲು ಸಾಧ್ಯ?

ಸಮಸ್ಯೆ ಇಲ್ಲಿಗೆ ನಿಲ್ಲುವುದಿಲ್ಲ, ಹಿಂದಿ ಭಾಷೆಯಲ್ಲಿದ್ದ ಪ್ರಶೆಗಳ ಸಂಖ್ಯೆ ಹಾಗೂ ಬೇರೆ ಭಾಷೆಯಲ್ಲಿದ್ದ ಪ್ರಶ್ನೆಗಳ ಸಂಖ್ಯೆಯು ಒಂದೇ ಆಗಿರಲಿಲ್ಲ. ಇದರಿಂದ ಆಗುವ ದುಷ್ಪರಿಣಾಮ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯುವ ಮಕ್ಕಳು ಮಾಡಿದ ತಪ್ಪಿಗೆ ಕಳೆದುಕೊಳ್ಳುವ ಅಂಕಕ್ಕಿಂತ ಹಿಂದಿಯೇತರ ಭಾಷೆಗಳ ಮಕ್ಕಳು ತಪ್ಪು ಮಾಡಿದರೆ ಹೆಚ್ಚಿನ ಅಂಕಗಳನ್ನು ಕಳೆದುಕೊಳ್ಳುತ್ತಾರೆ ಇದರಿಂದಾಗಿ ಹಿಂದಿಯೇತರ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಮಕ್ಕಳು ನೀಟ್ ನ ಅರ್ಹತಾ ಪಟ್ಟಿಯಲ್ಲಿ ಕೆಳಗಿನ ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ.
ಸಿ.ಬಿ.ಎಸ್.ಇ ಮಂಡಳಿಯು ತನ್ನ ಪಠ್ಯಕ್ರಮವನ್ನು ಇಂಗ್ಲಿಷ್ ಹಾಗೂ ಹಿಂದಿ ಹೊರೆತುಪಡಿಸಿ ಬೇರೆ ಭಾಷೆಗಳಲ್ಲಿ ಕಲಿಸುವುದಿಲ್ಲ, ಹಾಗಾಗಿ ಹಿಂದಿಯೇತರ ರಾಜ್ಯಗಳ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ಸಿ.ಬಿ.ಎಸ್.ಇ ನಡೆಸುತ್ತಿರುವ ಈ ಅಸಮಾನ ಪರೀಕ್ಷೆಯಿಂದಾಗಿ ತಾನು ಪಡೆದುಕೊಳ್ಳಬೇಕು ಎಂದುಕೊಂಡಿದ್ದ ಸೀಟು ಸಹ ಕೈಯಿಂದ ಜಾರಿಹೋದಂತಾಗುತ್ತದೆ. ಆದರೆ ಇದರಿಂದ ಲಾಭಾ ಯಾರಿಗೆ ಎಂದು ನೋಡಿದರೆ ಸಿ.ಬಿ.ಎಸ್.ಇ ಗೆ ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಹೇಗೆ? ಸಿ.ಬಿ.ಎಸ್.ಇ ಮಂಡಳಿಯ ಶಾಲೆಗಳು ದೇಶದ ಎಲ್ಲಾ ರಾಜ್ಯಗಳಲ್ಲೂ ಇರುವುದು ನಮಗೆಲ್ಲ ಗೊತ್ತಿದೆ, ರಾಜ್ಯದ ಪಠ್ಯಕ್ರಮ ಓದಿದ ಮಕ್ಕಳಿಗಿಂತ ಸಿ.ಬಿ.ಎಸ್.ಇ ಮಂಡಳಿಯು ತನ್ನ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ನೀಟ್ ಪರೀಕ್ಷೆಯನ್ನು ಸುಲಭ ಮಾಡಿಕೊಟ್ಟಂತೆ ಆಗುತ್ತದೆ. ಹೀಗಾಗಿ ಸಿ.ಬಿ.ಎಸ್.ಇ ಯಾ ಮಕ್ಕಳಿಗೆ ಇಂತಹ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸುಲಭವಾಗುತ್ತದೆ. ಹಾಗಾಗಿ ರಾಜ್ಯ ಪಠ್ಯಕ್ರಮದಲ್ಲಿ ಓದಿದ ಮಕ್ಕಳು ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟುಗಳನ್ನು ಪಡೆಯುವ ಆಸೆಯನ್ನು ಕೈಚೆಲ್ಲಿ ಕೂಡಬೇಕಾದ ಸಂದರ್ಭ ಒದಗಿ ಬಂದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಮಕ್ಕಳು ಮಾಡಿರುವ ಒಂದೇ ತಪ್ಪೆಂದರೆ ಅವರು ಆಯಾ ರಾಜ್ಯದ ಭಾಷೆಯಲ್ಲಿ, ಆಯಾ ರಾಜ್ಯದ ಪಠ್ಯಕ್ರಮದ ಶಾಲೆಗಳಲ್ಲಿ ಓದಿದ್ದು.

ನೀಟ್ ಪರೀಕ್ಷೆ ಜಾರಿಗೆ ಬರುವುದಕ್ಕಿಂತ ಮುಂಚೆ ಶೇ 75 ರಷ್ಟು ಬಂಗಾಳಿ ಮಾಧ್ಯಮದಲ್ಲಿ ಓದಿದ ಮಕ್ಕಳು ವೈದ್ಯಕೀಯ ಸೀಟುಗಳನ್ನು ಪಡೆದಿದ್ದರು ನೀಟ್ ಜಾರಿಗೆ ಬಂದ ಮೇಲೆ ಕೇವಲ ಶೇ 7 ರಷ್ಟು ಬಂಗಾಳಿ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಸೀಟು ಪಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಈ ವಿಷಯದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡುತ್ತಿರುವ ಗರ್ಗ ಚಟರ್ಜೀ ಅವರು.

ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರಕ
ನೀಟ್ ಪರೀಕ್ಷೆಯು ಹಿಂದಿಯೇತರ ಮಾಧ್ಯಮದ ವಿದ್ಯಾರ್ಥಿಗಳು ಅದರಲ್ಲೂ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಈ ವರ್ಗದ ವಿಧಾರ್ಥಿಗಳಿಗೆ ಓದಲು ಇರುವ ಅವಕಾಶ ರಾಜ್ಯ ಸರಕಾರಗಳು ನಡೆಸುವ ಶಾಲೆಗಳಲ್ಲಿ. ಈ ಶಾಲೆಗಳಲ್ಲಿ ಇರುವುದು ರಾಜ್ಯಗಳ ಪಠ್ಯಕ್ರಮ. ಹಾಗಿರುವಾಗ ಈ ಮೇಲೆ ಹೇಳಿದಂತೆ ಈ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ನಡೆಸುತ್ತಿದ್ದ ಸಿ.ಇ.ಟಿ ಪರೀಕ್ಷೆ ತಮ್ಮ ಆಸೆಗಳಿಗೆ ಆಸರೆಯಾಗಿತ್ತು. ಆದರೆ ಈಗ ಈ ವಿದ್ಯಾರ್ಥಿಗಳು ಒಂದು ಸೀಟಿಗಾಗಿ ತಮ್ಮ ರಾಜ್ಯವಲ್ಲದೆ ಇಡೀ ದೇಶದ ವಿದ್ಯಾರ್ಥಿಗಳ ಜೊತೆ ಪೈಪೋಟಿ ನಡೆಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ಹಾಗಿದ್ದಾಗ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬೆಲೆ ಎಲ್ಲಿದೆ? ತಾವು ಕೇವಲ ರಾಜ್ಯದ ಪಠ್ಯಕ್ರಮದಲ್ಲಿ ಓದಿದ ಮಾತ್ರಕ್ಕೆ ತಮ್ಮ ಆಸೆಗಳಿಗೆ ಎಳ್ಳುನೀರು ಬಿಡಬೇಕಾದ ಸ್ಥಿತಿಯನ್ನು ಹುಟ್ಟು ಹಾಕುವ ನೀಟ್ ನಂತಹ ಪರೀಕ್ಷೆಗಳ ಅವಶ್ಯಕತೆಯನ್ನು ನಾವು ಪ್ರಶ್ನಿಸಬೇಕಿದೆ.

ಇವತ್ತು ವೈದ್ಯಕೀಯ ಸೇವೆ ಭಾರತದ ಗ್ರಾಮೀಣ ಭಾಗದಲ್ಲಿ ತೀರಾ ಶೋಚನೀಯ ಸ್ಥಿತಿಯಲ್ಲಿದೆ. ಹೊಸದಾಗಿ ಹೊರಬರುತ್ತಿರುವ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವುದಕ್ಕೆ ಮುಂದಾಗುತ್ತಿಲ್ಲ. ತಾವು ಗ್ರಾಮೀಣ ಪ್ರದೇಶಕ್ಕೆ ಹೋದರೆ ಸ್ಪರ್ಧೆಯಿಂದ ಹಿಂದೆ ಉಳಿಯುತ್ತೇವೆ ಅನ್ನುವ ಕಲ್ಪನೆ ಹಲವು ವೈದ್ಯರಲ್ಲಿದೆ, ಹಾಗಾಗಿ ಗ್ರಾಮೀಣ ಪ್ರದೇಶದ ಆಸ್ಪತ್ರೆಗಲ್ಲಿ ವೈದ್ಯರನ್ನು ನೇಮಿಸುವುದಕ್ಕೆ ಸರಕಾರಗಳು ಹೆಣಗಾಡುತ್ತಿವೆ. ಗ್ರಾಮೀಣ ಪ್ರದೇಶದಿಂದ ಆಯ್ಕೆಯಾದ ಮಕ್ಕಳು ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ತಮ್ಮ ಹಳ್ಳಿಗಳಿಗೆ ಹೋಗಿ ಸೇವೆ ಮಾಡಲು ಮನಸ್ಸು ಮಾಡಬಹುದಾಗಿದ್ದ ದಾರಿಯನ್ನು ಸಹ ಈ ನೀಟ್ ಪರೀಕ್ಷೆ ನುಂಗಿ ಹಾಕುತ್ತಿದೆ. ಇದರಿಂದ ತೊಂದರೆ ಒಳಗಾಗುವವರು ಹಳ್ಳಿಯ ಜನರೇ ಅನ್ನುವುದು ಗಮನಿಸಬೇಕಾಗಿದೆ.

ಅಲ್ಲದೆ ಈ ನೀಟ್ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ನೆಪದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹಲವಾರು ರಾಜ್ಯಗಳು ಪ್ರತಿಭಟಿಸಿದ್ದವು. ಕೇರಳ ಮುಖ್ಯಮಂತ್ರಿ ಪಿ. ವಿಜಯನ್ ನೀಟ್ ಪರೀಕ್ಷೆಯನ್ನು ನಡೆಸಿದ ರೀತಿ ಮಾನವ ಹಕ್ಕುಗಳ ಉಲ್ಲಂಘನೆಯಂದು ಹೇಳಿಕೆ ನೀಡಿದ್ದರು. ಪರೀಕ್ಷೆಯನ್ನು ನಡೆಸಿದ ರೀತಿ ಹಾಗೂ ಫಲಿತಾಂಶದ ಬಗ್ಗೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳು ಆಗಿರುವ ಎಡವಟ್ಟುಗಳ ಬಗ್ಗೆ ಎತ್ತರದ ಧ್ವನಿಯಲ್ಲಿ ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿವೆ. ತಮಿಳುನಾಡು ಸರಕಾರ ತನ್ನ ರಾಜ್ಯವನ್ನು ನೀಟ್ ಪರೀಕ್ಷೆಯಿಂದ ಹೊರಗಿಡಬೇಕು ಎಂದು ಮೊಸೂದೆಯೊಂದನ್ನು ಜಾರಿಗೆ ತರಲು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿಕೊಟ್ಟಿದೆ.

ಸ್ವಾಯತ್ತತೆಗೆ ಮಾರಕ
ನೀಟ್ ಪರೀಕ್ಷೆಯನ್ನು ಜಾರಿಗೊಳಿಸಲು ಪಾಲಿಸುತ್ತಿರುವ ನೀತಿಯನ್ನು ನೋಡಿದರೆ ಕೇಂದ್ರ ಸರಕಾರ ನಿಧಾನವಾಗಿ ಶಿಕ್ಷಣವನ್ನು ತನ್ನ ಹಿಡಿತಕ್ಕೆ ತಗೆದುಕೊಳ್ಳಲು ನೋಡುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ತಮಿಳುನಾಡಿನ ಹೈಕೋರ್ಟ್ ಅಲ್ಲಿನ ಸರಕಾರಕ್ಕೆ ಯಾಕೆ ಸಿ.ಬಿ.ಎಸ್.ಇ ಪಠ್ಯಕ್ರಮವನ್ನು ನೀವು ಪಾಲಿಸಬಾರದು, ಇದರಿಂದ ಒಂದೇ ಪಠ್ಯಕ್ರಮ ಎಲ್ಲಡೆ ಇರುತ್ತದೆ ಎಂದು ಹೇಳಿರುವ ಮಾತು ಪ್ರಾಮುಖ್ಯತೆ ಪಡೆಯುತ್ತದೆ. ನಾಯಾಧೀಶರು ಹೇಳಿರುವ ಮಾತು ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿಯೇ ಕಾಣಿಸುತ್ತವೆ. ಆದರೆ ಅವರು ಆಡಿರುವ ಮಾತುಗಳನ್ನು ಹಲವಾರು ಜನರು ಒಪ್ಪುತ್ತಾರೆ ಕೂಡ. ಈ ಜನರಿಗೆ “ಒಂದು ದೇಶ ಒಂದು ಭಾಷೆಯ” ಸಿದ್ಧಾಂತವನ್ನು ಜಾರಿಗೆ ತರುವ ಹಂಬಲವಿದೆ. ಈ ಜನರಿಗೆ ದೇಶದ ವೈವಿಧ್ಯತೆ ಮಾರಕವಾಗಿ ಕಾಣಿಸುತ್ತದೆ. ಈ ಜನರಿಗೆ ರಾಜ್ಯಗಳು ಕೇವಲ ಕೇಂದ್ರ ಸರಕಾರ ಮಾತನ್ನು ಪಾಲಿಸುವ ಕಾರಕೂನರಾಗಿ ಮಾತ್ರ ಕೆಲಸ ಮಾಡಬೇಕು ಎನ್ನುವ ಆಸೆ. ಈ ಜನರೇ ನೀಟ್ ನಂತಹ ಪರೀಕ್ಷೆಯನ್ನು ಜಾರಿಗೆ ತರಲೇಬೇಕು ಎಂದು ಹೋರಾಡಿದವರು.
ನಾವು ರಾಜ್ಯಗಳ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಇದೆ. ಈ ಹೊತ್ತಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳಬೇಕಾಗಿದೆ. ಸಂವಿಧಾನದಲ್ಲಿ ಶಿಕ್ಷಣವನ್ನು ರಾಜ್ಯ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅಂದರೆ ರಾಜ್ಯ ಸರಕಾರಕ್ಕೆ ತನ್ನ ರಾಜ್ಯದ ಭೌಗೋಳಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಂಶಗಳ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಹಾಗೂ ಅದಕ್ಕೆ ಪೂರಕವಾದ ಪಠ್ಯಕ್ರಮವನ್ನು ರೂಪಿಸುವ ಹಕ್ಕು ಇತ್ತು. ಇದರಲ್ಲಿ ಕೇಂದ್ರ ಸರ್ಕಾರಕ್ಕಾಗಲಿ, ಸಿ.ಬಿ.ಎಸ್.ಇ ಗಾಗಲಿ ಮೂಗು ತೂರಿಸುವ ಅವಕಾಶವಿದ್ದಿಲ್ಲ. ಆದರೆ ತುರ್ತು ಪರಿಸ್ಥಿತಿಯನ್ನೇ ನೆಪವಾಗಿಟ್ಟುಕೊಂಡು ಶಿಕ್ಷಣವನ್ನು ಜಂಟಿ ಪಟ್ಟಿಗೆ ಸೇರಿಸಿ ಕೇಂದ್ರ ಸರಕಾರ ಮೊದಲ ಹಿಡಿತವನ್ನು ಸಾಧಿಸಿದೆ. ಈ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಹೀಗೆ ಮಾಡಿ ಎಂದು ಹೇಳುವ ಅಧಿಕಾರವನ್ನು ಹಿಂಬಾಗಿಲಿನ ಮೂಲಕ ಪಡೆದುಕೊಂಡಿವೆ.

ನೀಟ್ ಕೇಂದ್ರ ರಾಜ್ಯಗಳ ಮೇಲೆ ಸವಾರಿ ಮಾಡಲು ಬಳಸಿರುವ ಮೊದಲ ಅಸ್ತ್ರ. ಇಂತಹ ಅನೇಕ ಅಸ್ತ್ರಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ನೀಟ್ ಹಾಗೂ ಸಿ.ಬಿ.ಎಸ್.ಇ ಮಂಡಳಿಯ ಪರೀಕ್ಷೆ ನಡೆಸುವ ವಿಧಾನ ನೋಡಿದರೆ ನಿಧಾನವಾಗಿ ರಾಜ್ಯ ಪಠ್ಯಕ್ರಮಗಳನ್ನು ನುಂಗಿಹಾಕಿ ಅಲ್ಲಿ ತಾವು ಸ್ಥಾಪಿತಗೊಳ್ಳುವ ಎಲ್ಲ ಹುನ್ನಾರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಇದನ್ನು ನಾವು ಒಕ್ಕೊರಲಿನ ಧ್ವನಿಯಲ್ಲಿ ವಿರೋಧಿಸಬೇಕಿದೆ, ಮೊದಲು ಕರ್ನಾಟಕ ಸರಕಾರ ಈ ನೀಟ್ ಪರೀಕ್ಷೆಯ ಪರಿಧಿಯಿಂದ ತಮ್ಮನ್ನು ಹೊರಗಿಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಬೇಕು, ಇದಕ್ಕೆ ಪೂರಕವಾದ ಮಸೂದೆಯನ್ನು ರಾಜ್ಯ ಸರಕಾರ ರೂಪಿಸಬೇಕು. ರಾಜ್ಯ ಸರಕಾರವು ರಾಜ್ಯದ ಮಕ್ಕಳ ಹಿತ ಕಾಪಾಡಲು ಬೇಕಿರುವ ಎಲ್ಲ ಕ್ರಮಗಳನ್ನು ದಿಟ್ಟತನದಿಂದ ತಗೆದುಕೊಳ್ಳಬೇಕು. ಬೇರೆಯವರನ್ನು ಉದ್ಧಾರ ಮಾಡಲು ನಮ್ಮ ರಾಜ್ಯದ ಮಕ್ಕಳು ಬಲಿಯಾಗುವುದನ್ನು ನಾವು ಒಟ್ಟಿಗೆ ನಿಂತು ತಡೆಯಬೇಕು.

ಭಾರತ ಒಕ್ಕೂಟ ವ್ಯವಸ್ಥೆಯಲ್ಲಿನ ಸವಾಲುಗಳು

Authored by : Chetan Jeeral

ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಅಧಿಕಾರ ಒಂದು ಕೇಂದ್ರ ವ್ಯವಸ್ಥೆ ಹಾಗೂ ಸಾಂವಿಧಾನಿಕ ರಾಜಕೀಯ ಘಟಕಗಳ ನಡುವೆ ಹಂಚಿಕೆಯಾಗಿರುತ್ತದೆ. ಭಾರತದಲ್ಲಿ ಪ್ರಸ್ತುತವಾಗಿ ಬಳಕೆಯಲ್ಲಿರುವ ಒಕ್ಕೂಟ ವ್ಯವಸ್ಥೆಯು ಅಮೆರಿಕದಂತಹ ದೇಶದ ಒಕ್ಕೂಟ ವ್ಯವಸ್ಥೆಗಿಂತ ಭಿನ್ನವಾಗಿದೆ.

ಭಾರತ ಒಂದು ನಿಜವಾದ ರಾಜ್ಯಗಳ ಒಕ್ಕೂಟವೇ?

ಭಾರತದಲ್ಲಿ ಪಾಲಿಸಲಾಗುತ್ತಿರುವ ಒಕ್ಕೂಟ ವ್ಯವಸ್ಥೆಯನ್ನು ಭಾಗಶಃ ಒಕ್ಕೂಟ ವ್ಯವಸ್ಥೆ (quasi -federal system) ಎಂದು ಕರೆಯಬಹುದು. ಯಾಕೆಂದರೆ ಭಾರತ ಇತರೆ ದೇಶದಲ್ಲಿರುವಂತೆ ಸಂಪೂರ್ಣವಾದ ಒಕ್ಕೂಟ ವ್ಯವಸ್ಥೆಯ ತತ್ವವನ್ನು ಪಾಲಿಸುತ್ತಿಲ್ಲ.

ಭಾರತದಲ್ಲಿರುವ ಒಕ್ಕೂಟ ವ್ಯವಸ್ಥೆಯ ವೈಶಿಷ್ಟ್ಯಗಳು

 • ಎರಡು ಸರಕಾರಗಳಿವೆ – ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ
 • ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ೩ ಹಂತಗಳಲ್ಲಿ ಅಧಿಕಾರಗಳನ್ನು ಹಂಚಿಕೊಳ್ಳಲಾಗಿದೆ – ರಾಜ್ಯ ಪಟ್ಟಿ, ಜಂಟಿ ಪಟ್ಟಿ ಹಾಗೂ ಕೇಂದ್ರ ಪಟ್ಟಿ.
 • ಸಂವಿಧಾನಕ್ಕೆ ಹೆಚ್ಚಿನ ಪ್ರಾಬಲ್ಯ ನೀಡಲಾಗಿದೆ.
 • ನ್ಯಾಯಾಂಗ ಸ್ವತಂತ್ರವಾಗಿ ಕೆಲಸ ಮಾಡುತ್ತದೆ.
 • ಬೈಕಾಮೆರಾಲ್ ವ್ಯವಸ್ಥೆಯನ್ನು ಹೊಂದಿದೆ (ವಿಧಾನಸಭೆ ಹಾಗೂ ವಿಧಾನಪರಿಷತ್).

ಭಾರತ ಒಕ್ಕೂಟ ವ್ಯವಸ್ಥೆಯಲ್ಲಿನ ಸವಾಲುಗಳು

ಅಧಿಕಾರದ ಹಂಚಿಕೆ

ಭಾರತದಲ್ಲಿ ರಾಜ್ಯ ಹಾಗೂ ಕೇಂದ್ರಗಳ ನಡುವೆ ಅಧಿಕಾರವನ್ನು ಸಂವಿಧಾನದ 7 ನೇ ಪರಿಚ್ಛೇದದ  ಅಡಿಯಲ್ಲಿ  3 ಪಟ್ಟಿಗಳ ಅಡಿಯಲ್ಲಿ ಹಂಚಲಾಗಿದೆ. ರಾಜ್ಯಗಳು ತಮಗೆ ಸೇರಿರುವ ವಿಷಯಗಳನ್ನು ರಾಜ್ಯ ಪಟ್ಟಿಯಲ್ಲಿ, ಕೇಂದ್ರಕ್ಕೆ ಸೇರಿದ ವಿಷಯಗಳನ್ನು ಕೇಂದ್ರ ಪಟ್ಟಿಯಲ್ಲಿ ಹಂಚಿಕೆ ಮಾಡಲಾಗಿದೆ. ತಮಗೆ ಸೇರಿದ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ರಾಜ್ಯ ಅಥವಾ ಕೇಂದ್ರ ಸರಕಾರಗಳು ಶಾಸನಗಳನ್ನು ರಚಿಸಬಹುದು. ಜಂಟಿ ಪಟ್ಟಿಯಲ್ಲಿರುವ ವಿಷಯಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಶಾಸನಗಳನ್ನು ರಚಿಸಬಹುದು, ಆದರೆ ಇದರಲ್ಲಿ ಕೇಂದ್ರ ಹೇಳಿದ್ದಕ್ಕೆ ಮಾನ್ಯತೆ. ಈ ಪಟ್ಟಿಯನ್ನು ಹೊರತುಪಡಿಸಿದ ವಿಷಯದಲ್ಲಿ ಕೇಂದ್ರ ಸರ್ಕಾರದ್ದೇ ಅಧಿಕಾರ.

ಮೇಲಿನ ಪಟ್ಟಿಗಳಲ್ಲಿ ವಿಷಯಗಳನ್ನು ಹಂಚಿಕೆ ಮಾಡುವಾಗ ರಾಷ್ಟ್ರೀಯ ಪಾಮುಖ್ಯತೆ ಹೊಂದಿರುವ ವಿಷಯಗಳನ್ನು ಉದಾ: ಸೇನೆ, ಹೊರದೇಶದ ಜೊತೆ ಸಂಬಂಧ, ಕರೆನ್ಸಿ, ಮುಂತಾದವು ಕೇಂದ್ರ ಸರಕಾರದ ಅಡಿಯಲ್ಲಿ ಹಾಗು ಪ್ರಾದೇಶಿಕವಾಗಿರುವ ವಿಷಯಗಳನ್ನು ಉದಾ: ಶಿಕ್ಷಣ, ಆರೋಗ್ಯ, ಪೊಲೀಸ್, ಸ್ಥಳೀಯ ಆಡಳಿತ ಮುಂತಾದ ವಿಶಯಗಳನ್ನು ಆಯಾ ರಾಜ್ಯ ಸರಕಾರಗಳಿಗೆ ನೀಡಲಾಗಿದೆ. ಯಾವ ವಿಷಯಗಳಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಪಾಲ್ಗೊಳ್ಳುವಿಕೆಯ ಅಗತ್ಯವಿದೆಯೋ ಅಂತಹ ವಿಷಯಗಳನ್ನು ಜಂಟಿ ಪಟ್ಟಿಯಲ್ಲಿ ಇಡಲಾಗಿದೆ. ಆದರೆ ಜಂಟಿ ಪಟ್ಟಿಯಲ್ಲಿರುವ ಯಾವುದೇ ವಿಶಯದಲ್ಲಿ ಕೇಂದ್ರ ಹಾಗೂ ರಾಜ್ಯದ ನಡುವೆ ಅಭಿಪ್ರಾಯ ಭೇದವಿದ್ದಲ್ಲಿ ಕೇಂದ್ರ ಸರಕಾರದ ಹೇಳಿಕೆಯೇ ಅಂತಿಮವಾಗುತ್ತದೆ.

ಕಲಮು 200, ಹಾಗೂ ಕಲಮು 352, 356 ಹಾಗೂ 360 ರ ಅಡಿಯಲ್ಲಿರುವ ತುರ್ತು ಪರಿಸ್ಥಿತಿಯ ನಿಯಮಗಳು ಮತ್ತು ಕಲಮು 256, 257 ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕಿರುವ ಕಾರ್ಯಂಗ ಅಧಿಕಾರಗಳು ಕೇಂದ್ರೀಕರಣಕ್ಕೆ ಅನುವುಮಾಡಿಕೊಡುತ್ತದೆ, ಹಾಗಾಗಿ ಇದು ರಾಜ್ಯ ಸರಕಾರಗಳು ಆಕ್ಷೇಪವೆತ್ತುವಂತೆ ಮಾಡಿದೆ. ಭಾರತದ ಒಕ್ಕೂಟಕ್ಕೆ ಅಧಿಕಾರ ಕೇಂದ್ರೀಕರಣವು ಮಾರಕವಾಗಿದೆ.

ಹಣಕಾಸಿನಲ್ಲಿ ರಾಜ್ಯಗಳಿಗೆ ಕಡಿಮೆ ಹಿಡಿತ

ಭಾರತ ಒಕ್ಕೂಟ ದೇಶವೆಂದು ಹೇಳಿಕೊಂಡರು ಹಣಕಾಸಿನ ವಿಷಯದಲ್ಲಿ ಈ ಮಾತು ಸತ್ಯವಿಲ್ಲ ಎಂದೇ ಹೇಳಬೇಕು. ಭಾರತದ ಸಂವಿಧಾನ ಕೇಂದ್ರ ಸರಕಾರಕ್ಕೆ ಬೇಕೆಂದೇ ಹಣಕಾಸಿನ ವಿಷಯದಲ್ಲಿ ಅವಶ್ಯಕತೆಗಿಂತ ಹೆಚ್ಚಿನ ತೆರಿಗೆಯ ಪಾಲನ್ನು ನೀಡಿದೆ. ಇದರ ಜೊತೆಗೆ ಹಣಕಾಸು ಆಯೋಗದ ಮೂಲಕ ಕೇಂದ್ರದ ಒಟ್ಟು ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ನೀಡುವ ಪಾಲನ್ನು ನಿರ್ಧಾರಮಾಡುವ ಮೂಲಕ ರಾಜ್ಯಗಳಿಗೆ ಆಗುವ ಹೊರೆಯನ್ನು ತಗ್ಗಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಮಾತು ಅಷ್ಟು ಸರಿಯಲ್ಲ. ಕಾರಣ ಹಣಕಾಸು ಆಯೋಗ ಕೇಂದ್ರ ಸಂಗ್ರಹಿಸಿರುವ ತೆರಿಗೆಯಲ್ಲಿ ರಾಜ್ಯಕ್ಕೆ ನೀಡುವಾಗ ಹೆಚ್ಚು ತೆರಿಗೆ ನೀಡಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡದೆ ಎಲ್ಲಾ ರಾಜ್ಯಗಳ ಹೊರೆಯನ್ನು ನಿಭಾಯಿಸುವ ಕೆಲಸ ಮಾಡುತ್ತದೆ. ಇದು ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಹೊಡೆತ ನೀಡುತ್ತದೆ.

ಸದ್ಯಕ್ಕೆ ಶೇ 40 ರಷ್ಟು ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ನೀಡಲಾಗುತ್ತಿದೆ. ಇದರಲ್ಲಿ ನೀತಿ ಆಯೋಗದ ಯೋಜನೆಗಳು ಹಾಗೂ ಕೇಂದ್ರ ಸಚಿವಾಲಯಗಳ ಯೋಜನೆಗಳು ಸೇರಿವೆ. ಈ ಅಸಮಾನ ಹಂಚಿಕೆ ರಾಜ್ಯಗಳ ಏಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರಲು ಕಾರಣವಾಗಿದೆ. ಜಿ.ಎಸ.ಟಿ ಯಂತಹ ಯೋಜನೆಗಳು ರಾಜ್ಯಗಳ ತೆರಿಗೆ ಸಂಗ್ರಹದ ಮೇಲೆ ದೊಡ್ಡ ಹೊಡೆತವನ್ನೇ ನೀಡಿದೆ.

ರಾಜ್ಯಗಳಿಗೆ ಅಸಮಾನ ಪ್ರಾತಿನಿಧ್ಯ

ನಮಗೆ ಗೊತ್ತಿರುವಂತೆ ಸಂವಿಧಾನದ ತಿದ್ದುಪಡಿ ಅಥವಾ ಮಹತ್ವದ ಯೋಜನೆಗಳು ರೂಪುಗೊಳ್ಳುವುದು ಕೇಂದ್ರ ಸರಕಾರದ ಅಡಿಯಲ್ಲಿ. ಹಾಗಾಗಿ ರಾಜ್ಯ ಸರಕಾರಗಳಿಗಿಂತ ಕೇಂದ್ರ ಸರಕಾರಕ್ಕೆ ಹೆಚ್ಚಿನ ಮಹತ್ವ ಭಾರತದಲ್ಲಿದೆ. ಇದೇ ಕಾರಣಕ್ಕೆ ಲೋಕಸಭೆ ಹಾಗೂ ರಾಜ್ಯಸಭೆಗಳು ಹೆಚ್ಚಿನ ಮಹತ್ವ ಪಡೆಯುತ್ತವೆ. ಆದರೆ ಕೇಂದ್ರ ಸರಕಾರದಲ್ಲಿ ಎಲ್ಲಾ ರಾಜ್ಯಗಳಿಗೂ ಸಮನಾದ ಪ್ರಾತಿನಿಧ್ಯವಿಲ್ಲ. ರಾಜ್ಯದ ಭೌಗೋಳಿಕ ವಿಸ್ತೀರ್ಣದ ಮೇಲೆ ಆಯಾ ರಾಜ್ಯದಲ್ಲಿ ಲೋಕಸಭೆ ಸೀಟುಗಳು ಎಷ್ಟು ಎನ್ನುವುದು ನಿರ್ಧಾರವಾಗುತ್ತದೆ. ಉತ್ತರ ಪ್ರದೇಶದಂತಹ ರಾಜ್ಯದ ಪ್ರಭಾವ ಗೋವಾ, ಅಸ್ಸಾಂನಂತಹ ರಾಜ್ಯಗಳ ಪ್ರಭಾವಕ್ಕಿಂತ ಹೆಚ್ಚು. ಎಷ್ಟು ಹೆಚ್ಚು ಸೀಟುಗಳೋ ಅಷ್ಟು ಹೆಚ್ಚಿನ ಪ್ರಭಾವ ಕೇಂದ್ರ ಸರಕಾರದ ಮೇಲಿರುತ್ತದೆ.

ಇದನ್ನು ಸರಿದೂಗಿಸಲು ರಾಜ್ಯಸಭೆಯನ್ನು ಮಾಡಲಾಯಿತಾದರೂ, ರಾಜ್ಯಸಭೆ ಹಲ್ಲು ಕಿತ್ತ ಹಾವಿನಂತೆ. ಹೆಸರಿಗೆ ಇದೆ, ಆದರೆ ಲೋಕಸಭೆಯಲ್ಲಿ ತಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ. ಹಾಗಾಗಿ ಇಂದಿನ ರಾಜಕೀಯದಲ್ಲಿ ಯಾವ ರಾಜ್ಯ ಹೆಚ್ಚು ಸೀಟನ್ನು ಕೇಂದ್ರಕ್ಕೆ ಆರಿಸಿ ಕಳಿಸುತ್ತದೋ ಅಥವಾ ಕೇಂದ್ರ ಸರಕಾರಕ್ಕೆ ಅಧೀನವಾಗಿರುತ್ತದೋ ಅವರಿಗೆ ಹೆಚ್ಚಿನ ಉಪಯೋಗ ದೊರಕುವ ಸಂಭವವಿದೆ.

ಆದರೆ ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ಕೇಂದ್ರದಲ್ಲಿ ಸಮನಾದ ಪ್ರಾತಿನಿಧಿತ್ವ ಸಿಕ್ಕರೆ ಆಗ ಕೇಂದ್ರ ಸರಕಾರಕ್ಕೆ ಎಲ್ಲಾ ರಾಜ್ಯಗಳನ್ನು ಸಮನಾಗಿ ನೋಡುವುದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಸಂವಿಧಾನ ತಿದ್ದುಪಡಿ ಅಧಿಕಾರ ಕೇಂದ್ರಕ್ಕೆ ಮಾತ್ರ

ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟದ ಸಂವಿಧಾನವನ್ನು ಬದಲಾಯಿಸುವ ಹಕ್ಕು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಇರುತ್ತದೆ. ಅಮೆರಿಕದಂತಹ ದೇಶದಲ್ಲಿ ರಾಜ್ಯಗಳು ತಮ್ಮದೇ ಆದರೆ ಸಂವಿಧಾನವನ್ನು ಹೊಂದಲು ಅವಕಾಶಗಳಿವೆ, ಭಾರತ ಅಷ್ಟರ ಮಟ್ಟಿಗೆ ಮುಂದುವರಿದಿಲ್ಲವಾದರೂ, ರಾಜ್ಯಗಳಿಗೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಅಧಿಕಾರವನ್ನು ಕೊಟ್ಟಿಲ್ಲ. ಕಲಮು 356 ರ ಅಡಿಯಲ್ಲಿ ಸಂವಿಧಾನದ ತಿದ್ದುಪಡಿಯ ಹಕ್ಕು ಕೇಂದ್ರ ಸರಕಾರಕ್ಕೆ ಮಾತ್ರವಿದೆ. ಸಂವಿಧಾನದಲ್ಲಿ ಯಾವುದೇ ತಿದ್ದುಪಡಿ ಮಾಡಿದಾಗ ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಒಪ್ಪಿಕೊಳ್ಳಬೇಕು ಎನ್ನುವ ಪರಿಪಾಠ ಇದೆ, ಆದರೆ ಇದು ರಾಜ್ಯಗಳಿಗೆ ಈ ನಿಯಮದಿಂದ ಹೊರಗುಳಿಯುವ ಅಧಿಕಾರ ನೀಡಿಲ್ಲ. ಹಾಗಾಗಿ ರಾಜ್ಯಗಳಿಗೆ ಹೆಚ್ಚು ಕಡಿಮೆ ಸಾಂವಿಧಾನಿಕ ವಿಷಯಗಳಲ್ಲಿ ಅಧಿಕಾರವೇ ಇಲ್ಲ.

ರಾಜ್ಯಗಳ ಪುನಾರಚನೆ ಹಾಗೂ ಕೇಂದ್ರಕ್ಕಿರುವ ಅಧಿಕಾರ

ಒಕ್ಕೂಟ ವ್ಯವಸ್ಥೆ ಹೊಂದಿರುವ ಬೇರೆ ದೇಶಗಳಂತೆ ಭಾರತೀಯ ಸಂವಿಧಾನ ರಾಜ್ಯಗಳಿಗೆ ಭಾರತದ ಒಕ್ಕೂಟದಿಂದ ಹೊರಹೋಗುವ ಅಧಿಕಾರ ನೀಡಿಲ್ಲ. ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಇತರೆ ದೇಶಗಳಲ್ಲಿ ಒಂದು ರಾಜ್ಯವನ್ನು ಒಡೆಯುವ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳನ್ನು ಕೂಡಿಸಲು ರಾಜ್ಯಗಳ ಅಭಿಪ್ರಾಯವೇ ಅಂತಿಮವಾಗಿರುತ್ತದೆ, ಆದರೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಈ ನಿಯಮವಿಲ್ಲ. ಇಲ್ಲಿ ಕೇಂದ್ರ ಸರಕಾರ ತಗೆದುಕೊಳ್ಳುವ ತೀರ್ಮಾನವೇ ಅಂತಿಮ. ಇದಕ್ಕೆ ಇತ್ತೀಚಿನ ಉದಾಹರಣೆಯಂದರೆ ಆಂಧ್ರಪ್ರದೇಶ ಸರಕಾರದ ಹಾಗೂ ಶಾಸನ ಸಭೆಯ ವಿರೋಧವಿದ್ದರೂ ಕೇಂದ್ರ ಸರಕಾರ ತೆಲಂಗಾಣ ರಾಜ್ಯವನ್ನು ಆಂಧ್ರಪ್ರದೇಶವನ್ನು ವಿಭಜಿಸುವುದರ ಮೂಲಕ ಮಾಡಿತು. ಕೇಂದ್ರ ಸರಕಾರದ ಈ ಧೋರಣೆಯ ಬಗ್ಗೆ ವಿರೋಧ ವ್ಯಕ್ತವಾಗಿದ್ದನ್ನು ಗಮನಿಸಬೇಕು. ರಾಜ್ಯಗಳ ವಿರೋಧದ ನಡುವೆಯೂ ರಾಜ್ಯಗಳನ್ನು ಒಡೆಯುವ ಕಾನೂನುಗಳು ಒಕ್ಕೂಟ ವ್ಯವಸ್ಥೆಯಲ್ಲಿ ಮಾರಕವಾಗಿವೆ.

ರಾಜ್ಯಗಳ ಮರುವಿಂಗಡಣೆಯಂತಹ ಸೂಕ್ಷ್ಮ ವಿಷಯಗಳಲ್ಲಿ ಕೇಂದ್ರ ಸರಕಾರ ತನ್ನ ಅಭಿಪ್ರಾಯಕ್ಕಿಂತ ರಾಜ್ಯಗಳ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಕೇಂದ್ರ ಸರಕಾರದ ಇಂತಹ ನಡೆಗಳು ರಾಜ್ಯ ಸರಕಾರಗಳನ್ನು ಮುನ್ಸಿಪಾಲ್ಟಿ ಕಚೇರಿಯ ಮಟ್ಟಕ್ಕೆ ಇಳಿಸಿಬಿಡುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಮಹತ್ವ ನೀಡುವ ಕಾನೂನು ಜಾರಿಗೆ ಬರಬೇಕಿದೆ.

ರಾಜ್ಯಪಾಲ ಹುದ್ದೆ

ಪ್ರತಿಯೊಂದು ರಾಜ್ಯಕ್ಕೂ ರಾಜ್ಯಪಾಲರಿರಬೇಕು ಎನ್ನುವ ವಿಷಯ ಬಹಳ ಸೂಕ್ಷ್ಮದ್ದು ಹಾಗೂ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಮಾರಕವಾಗಿದೆ. ರಾಜ್ಯಪಾಲರ ಹುದ್ದೆಯನ್ನು ಕೇಂದ್ರ ಸರಕಾರ ತನ್ನ ಲಾಭಕ್ಕೆ ಬಳಸಿಕೊಂಡಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ಇತ್ತೀಚಿನ ಉದಾಹರಣೆ ಅರುಣಾಚಲ ಪ್ರದೇಶದಲ್ಲಿ ಆಗಿದ್ದು. ಜನವರಿ ೨೦೧೬ರಲ್ಲಿ ಅರುಣಾಚಲ ಪ್ರದೇಶದ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿದ್ದರೂ ಕೇಂದ್ರ ಸರಕಾರ ರಾಜ್ಯಪಾಲರ ಮೂಲಕ ಬಲವಂತವಾಗಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತಂದಿತ್ತು. ಆದರೆ ಜೂಲೈ ನಲ್ಲಿ ಸುಪ್ರೀಂ ಕೋರ್ಟ್ ರಾಜ್ಯಪಾಲರ ಅಸಂವಿಧಾನಿಕ ಆದೇಶವನ್ನು ವಜಾಗೊಳಿಸಿ ಮತ್ತೆ ಅಲ್ಲಿ ಆಳ್ವಿಕೆ ಮಾಡುತ್ತಿದ್ದ ಸರಕಾರವನ್ನು ಅಧಿಕಾರಕ್ಕೆ ತಂದಿತು.

ಕೇಂದ್ರ ಸರಕಾರದ ಅಡಿಯಾಳಿನಂತೆ ಕೆಲಸ ಮಾಡುವ ರಾಜ್ಯಪಾಲ ಹುದ್ದೆಯು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಎತ್ತಿ ತೋರಿಸುತ್ತದೆ. ಕೇಂದ್ರ ಸರಕಾರ ರಾಜ್ಯಪಾಲರ ಮೂಲಕ  ಕಲಮು 356ರ ದುರ್ಬಳಕೆ ಮಾಡಿಕೊಂಡಿರುವ ಉದಾಹರಣೆಗಳು ಭಾರತದ ಇತಿಹಾಸದಲ್ಲಿ ಬಹಳಷ್ಟಿವೆ. ಈ ರಾಜ್ಯಪಾಲರ ಹುದ್ದೆಯನ್ನು ರಾಜ್ಯ ಸರಕಾರಗಳು ಅನುಮಾನದಿಂದ ನೋಡುವಂತೆ ಮಾಡಿವೆ ಹಾಗೂ ಕೇಂದ್ರ ಹಾಗೂ ರಾಜ್ಯಗಳ ನಡುವಿನ ವ್ಯಾಜ್ಯಕ್ಕೆ ಕಾರಣವಾಗಿವೆ.

ಕೇಂದ್ರೀಕೃತ ಯೋಜನೆಗಳು

ಹಣಕಾಸಿನ ಹಾಗೂ ಸಾಮಾಜಿಕ ಯೋಜನೆಗಳು ಸಂವಿಧಾನದ ಜಂಟಿಪಟ್ಟಿಯಲ್ಲಿದ್ದರೂ ಕೇಂದ್ರ ಸರಕಾರ ಅಗತ್ಯಕ್ಕಿಂತ ಹೆಚ್ಚಿನ ಹಿಡಿತವನ್ನು ಹೊಂದಿದೆ. ಹಿಂದೆ ಯೋಜನಾ ಆಯೋಗ, ಈಗ ನೀತಿ ಆಯೋಗದ ಮೂಲಕ ಕೇಂದ್ರೀಕೃತ ಯೋಜನೆಗಳನ್ನು ತಯಾರಿಸುತ್ತ ಬಂದಿದೆ. ತೆರಿಗೆಯ ಮೂಲಕ ಸಂಗ್ರಹಿಸುವ ಹೆಚ್ಚಿನ ಹಣವನ್ನು ಈ ಕೇಂದ್ರೀಕೃತ ಯೋಜನೆಗಳ ಮೂಲಕ ಹಂಚುವ ಕೆಲಸ ಮಾಡುತ್ತದೆ. ಹಾಗಾಗಿ ಯೋಜನೆಗಳಿಗೆ ಬೇಕಾಗುವ ಹಣಕ್ಕಾಗಿ ರಾಜ್ಯಗಳು ಕೇಂದ್ರ ಸರಕಾರದ ಮುಂದೆ ಬೇಡುವ ಪರಿಸ್ಥಿತಿ ಬಂದೊದಗಿದೆ.

ತಮ್ಮ ಅಗತ್ಯಕ್ಕೆ ತಕ್ಕಂತೆ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳದ ರಾಜ್ಯಗಳು ತಾವು ಮಾಡಬೇಕೆಂದಿರುವ ಯೋಜನೆಗಳಿಗೆ ನೀತಿ ಆಯೋಗದ ಮುಂದೆಯೋ ಅಥವಾ ಸಚಿವಾಲಗಳ ಮುಂದೆಯೋ ಬೇಡಬೇಕಾದ ಪರಿಸ್ಥಿತಿ. ದೆಹಲಿಯಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು ಭಾರತದಂತಹ ದೊಡ್ಡ ದೇಶದಲ್ಲಿ ಪ್ರತಿ ರಾಜ್ಯಕ್ಕೂ ಇರಬಹುದಾದ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುವ ಬಗ್ಗೆ ನಾವು ಊಹಿಸಿಕೊಳ್ಳಲು ಸಾಧ್ಯವೇ? ಅದರ ಬದಲು ಕೇಂದ್ರೀಕೃತ ಯೋಜನೆಗಳನ್ನೇ ತಗೆದು ಹಾಕಬೇಕಿದೆ. ರಾಜ್ಯಗಳು ತಮ್ಮ ರಾಜ್ಯಕ್ಕೆ ಸರಿಹೊಂದುವಂತಹ ಯೋಜನೆಗಳನ್ನು ಮಾಡಿಕೊಳ್ಳಲು ಸಶಕ್ತವಾಗಿವೆ ಹಾಗೂ ಅವುಗಳನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿವೆ. ಕೇಂದ್ರೀಕೃತವಾಗಿ ಎಲ್ಲವನ್ನು ನಿರ್ವಹಿಸುತ್ತೇನೆ ಎನ್ನುವ ಕೇಂದ್ರದ ನಿಲುವು ಒಕ್ಕೂಟ ವ್ಯವಸ್ಥೆಗೆ ಮಾರಕವೇ.

ಭಾಷ ಸಂಘರ್ಷ

ವಿವಿಧತೆಯಲ್ಲಿ ಏಕತೆ ಎನ್ನುವ ನಿಯಮವನ್ನು ಪಾಲಿಸುವಂತೆ ಭಾರತ ದೇಶದ ಸಂವಿಧಾನ ಹೇಳುತ್ತದೆ ಕಾರಣ ಭಾರತದಲ್ಲಿರುವ ಸಾಂಸ್ಕೃತಿಕ, ಭಾಷಿಕ ವೈವಿಧ್ಯತೆ. ಭಾರತದಲ್ಲಿ ತಮ್ಮ ಒಳನುಡಿಗಳು ಸೇರಿದಂತೆ ನೂರಾರು ಭಾಷೆಗಳಿವೆ. ಸಂವಿಧಾನದಲ್ಲಿ 22 ಭಾಷೆಗಳಿಗೆ ಆಡಳಿತ ಭಾಷೆಗಳು ಎನ್ನುವ ಮಾನ್ಯತೆ ನೀಡಲಾಗಿದೆ. ಆದರೆ ತೊಂದರೆ ಇರುವುದು ಕೇಂದ್ರ ಸರಕಾರ ಬಲವಂತವಾಗಿ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುತ್ತಿರುವುದರಿಂದ. 22 ಭಾಷೆಗಳು ಆಡಳಿತ ಭಾಷೆ ಸ್ಥಾನಮಾನ ಹೊಂದಿದ್ದರು ಕೇಂದ್ರ ಸರಕಾರ ಬಲವಂತವಾಗಿ ಹಿಂದಿ ಭಾಷೆಯನ್ನೂ 3 ಭಾಷ ಸೂತ್ರದ  ಹೆಸರಿನಲ್ಲಿ ದಕ್ಷಿಣದ ರಾಜ್ಯಗಳ ಮೇಲೆ ಹೇರುತ್ತಿದೆ.

ಭಾಷಾ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಮಾಡಲು ಹೊರಟಾಗ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳಾದವು, ಅದಾದ ನಂತರ ರಾಷ್ಟ್ರ ಭಾಷೆಯ ಕಲ್ಪನೆಯನ್ನು ಕೇಂದ್ರ ಸರಕಾರ ಕೈಬಿಟ್ಟಿತು. ಆದರೆ ಇವತ್ತಿಗೆ ಹಿಂದಿಗೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡುತ್ತಾ ಹಿಂದಿಯೇತರ ಭಾಷೆಗಳನ್ನು ತುಳಿಯುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ದಕ್ಷಿಣದ ರಾಜ್ಯಗಳು ಇಂದಿಗೂ ಹೋರಾಡುತ್ತಿವೆ. ಬಹುಭಾಷಿಕ ರಾಷ್ಟ್ರದಲ್ಲಿ ಒಂದೇ ಭಾಷೆಯನ್ನೂ ಮೆರೆಸುವ ಕೇಂದ್ರ ಸರಕಾರದ ನೀತಿ ಒಕ್ಕೂಟ ವ್ಯವಸ್ಥೆಗೆ ಮಾರಕ. ಕೇಂದ್ರ ಸರಕಾರ ಪ್ರತಿಯೊಂದು ಭಾಷೆಯಲ್ಲೂ ವ್ಯವಹರಿಸಲು ಅವಕಾಶ ನೀಡಬೇಕು ಹಾಗೂ ಸಮಾನವಾದ ಸ್ಥಾನಮಾನ ನೀಡಬೇಕು.