ಭಾರತದ ಒಕ್ಕೂಟ ವ್ಯವಸ್ಥೆ – ಅಂದು, ಇಂದು, ಮುಂದೆ

ಈ ಬರಹ ಪ್ರಕಟಿಸಲು ಅನುಮತಿ ಇತ್ತ ಮುನ್ನೋಟಕ್ಕೆ ವಂದನೆಗಳು

ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸಂಸ್ಥೆಯ ಅಲೋಕ್ ಪ್ರಸನ್ನ ಅವರು ಭಾರತದ ಒಕ್ಕೂಟ ವ್ಯವಸ್ಥೆ ಕಳೆದ ಎಪ್ಪತ್ತು ವರ್ಷಗಳಲ್ಲಿ ನಡೆದು ಬಂದ ಬಗೆಯ ಬಗ್ಗೆ ಮಾತನಾಡಿದರು. ಪ್ರಪಂಚದ ಹಲವು ದೇಶಗಳಲ್ಲಿ ಬರೆದಿಟ್ಟ ಮತ್ತು ಬರೆಯದ ಸಂವಿಧಾನ ಅನ್ನುವ ಎರಡು ರೀತಿಗಳಿವೆ. ಭಾರತದ ಸಂವಿಧಾನ ಬರೆಯಲಾದ ಸಂವಿಧಾನ ಅನ್ನುವಂತೆ ಪರಿಗಣಿಸಲ್ಪಟ್ಟರೂ ಬರೆಯದ ಅನೇಕ ವಿಚಾರಗಳು ನಮ್ಮ ಸಂವಿಧಾನದ ಮೂಲಭೂತ ಅಂಶಗಳು ಎಂಬಂತೆ ಪರಿಗಣಿಸಲ್ಪಟ್ಟಿವೆ. ಭಾರತದ ಸಂವಿಧಾನದಲ್ಲಿ ಫೆಡರಲಿಸಂ ಅನ್ನುವ ಪದ ಹೆಚ್ಚಾಗಿ ಬಳಸದೇ ಇದ್ದರೂ ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಸಂವಿಧಾನದ ಮೂಲಭೂತ ಅಂಶಗಳಲ್ಲಿ ಒಂದಾದ ಫೆಡರಲಿಸಂ ಅನ್ನು ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಬದಲಾಯಿಸಲಾಗದು ಅನ್ನುವ ಮಾತು ಭಾರತದ ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗೆ ನೀಡಿರುವ ಮಾನ್ಯತೆಯನ್ನು ತೋರುತ್ತದೆ ಅನ್ನುವ ಅಂಶವನ್ನು ಅಲೋಕ್ ಪ್ರಸನ್ನ ಅವರು ಎತ್ತಿ ತೋರಿದರು. ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಸಂವಿಧಾನದ ರಾಜ್ಯಪಟ್ಟಿಯಲ್ಲಿನ ವಿಷಯಗಳನ್ನು ರಾಜ್ಯದ ಅನುಮತಿ ಪಡೆಯದೇ ಜಂಟಿ ಪಟ್ಟಿಗೆ ಸೇರಿಸುವ ಕೆಲ ತಪ್ಪು ನಿರ್ಧಾರಗಳು ಇಂದಿಗೂ ಸರಿ ಹೋಗಿಲ್ಲ. ಅದರಿಂದಾಗಿಯೇ ನೀಟ್ ತರದ ಏಕಮುಖಿ ಪರೀಕ್ಷೆಯ ನಿರ್ಧಾರಗಳನ್ನು ರಾಜ್ಯಗಳ ಮೇಲೆ ಹೇರಲು ಕೇಂದ್ರಕ್ಕೆ ಸಾಧ್ಯವಾಗಿದೆ, ಆದರೆ ನೀಟ್ ಬಗೆಗಿನ ರಾಜ್ಯಗಳ ವಿರೋಧದಲ್ಲಿ ತುರ್ತುಪರಿಸ್ಥಿತಿಯ ಈ ಕೆಡುಕಿನ ನಿರ್ಧಾರಗಳನ್ನು ಪ್ರಶ್ನಿಸುವ ಆಯಾಮ ಕಂಡು ಬರಲಿಲ್ಲ ಎಂದರು. ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರುವ ಹಿಂದಿನ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳ ಆಡಳಿತದ ನಿಲುವನ್ನು ಮೊದಲಿಗೆ ಸುಪ್ರೀಂ ಕೋರ್ಟ್ ಒಪ್ಪಿತ್ತಾದರೂ ಅದರ ದುರ್ಬಳಕೆ ಮಿತಿ ಮೀರಿದಾಗ ಬೊಮ್ಮಾಯಿಯವರ ಪ್ರಕರಣದಲ್ಲಿ ಕಂಡುಬಂದಂತೆ ಕೇಂದ್ರದ ಇಂತಹ ನಿಲುವನ್ನು ಪ್ರಶ್ನಿಸುವ, ಪರಿಶೀಲಿಸುವ ಹಾಗೂ ತನಗೆ ಸರಿಕಂಡಲ್ಲಿ ವಜಾಗೊಳಿಸುವ ಹಕ್ಕು ತನಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ ರಾಷ್ಟ್ರಪತಿ ಆಡಳಿತದ ದುರ್ಬಳಕೆ ಬಹುತೇಕ ನಿಂತಿದೆ. ಇದು ಸುಪ್ರೀಂ ಕೋರ್ಟ್ ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿದ ನಿರ್ಧಾರಗಳಲ್ಲಿ ಒಂದು ಎಂದು ಅಲೋಕ್ ವ್ಯಾಖ್ಯಾನಿಸಿದರು. ಭಾರತದಂತಹ ವೈವಿಧ್ಯತೆ ತುಂಬಿದ ನಾಡಿನ ಏಳಿಗೆಗೆ ರಾಜ್ಯಗಳ ಏಳಿಗೆ ಬಹುಮುಖ್ಯ ಹಾಗೂ ಅದಾಗಲೂ ರಾಜ್ಯಗಳು ತಮ್ಮ ಏಳಿಗೆಯ ಪಥವನ್ನು ತಾವೇ ನಿರ್ಧರಿಸುವಂತೆ ಅವುಗಳಿಗೆ ಸ್ವಾಯತ್ತತೆ ಕಲ್ಪಿಸುವುದು ಮುಖ್ಯ ಅನ್ನುವ ಮಾತುಗಳನ್ನಾಡಿದ ಅಲೋಕ್ ಜೊತೆಯಲ್ಲೇ ಅಧಿಕಾರ ವಿಕೇಂದ್ರಿಕರಣದ ಈ ಚರ್ಚೆ ರಾಜ್ಯದ ಮುಖ್ಯಮಂತ್ರಿಗಳವರೆಗೆ ಬಂದು ನಿಲ್ಲದೇ ಅಲ್ಲಿಂದಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸ್ಥಳೀಯ ಸಂಸ್ಥೆಗಳು, ಪಂಚಾಯತ್ ಮತ್ತು ಪಾಲಿಕೆಗಳಿಗೆ ಆರ್ಥಿಕ ಮತ್ತು ರಾಜಕೀಯ ಅಧಿಕಾರವನ್ನು ಕೊಡುವ ಮಟ್ಟಕ್ಕೆ ಸಾಗಬೇಕು ಎಂದರು. ನಗರದ ಗುಂಡಿ ಬಿದ್ದ ರಸ್ತೆಗಳನ್ನು ನೋಡುವ ಕೆಲಸ ಮುಖ್ಯಮಂತ್ರಿಗಳದ್ದಾಗಬಾರದು, ಅದು ಪಾಲಿಕೆಯ ಮೇಯರ್ ನೋಡಿಕೊಳ್ಳಬೇಕಾದ ಕೆಲಸವಾಗಬೇಕು. ಆ ಸ್ವರೂಪದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ಕೆಲಸವೂ ಜೊತೆಯಲ್ಲೇ ಆಗಬೇಕು ಎಂದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s