ನೀಟ್ ಎಂಬ ಒಕ್ಕೂಟ ವಿರೋಧಿ ನೀತಿ

Authored by : Chetan Jeeral

ಇತ್ತೀಚಿಗೆ ಕೇಂದ್ರ ಸರಕಾರ ನೀಟ್ ಪರೀಕ್ಷೆಯನ್ನು ರಾಷ್ಟ್ರದಾದ್ಯಂತ ಜಾರಿಗೆ ತಂದಿದೆ. ಇದರ ಬಗ್ಗೆ ಹಲವಾರು ಪರ ವಿರೋಧಗಳು ಕೇಳಿ ಬರುತ್ತಿವೆ. ನೀಟ್ ನ ಮೊದಲ ಪರೀಕ್ಷೆಯಾದ ನಂತರ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪರೀಕ್ಷೆ ನಡೆಸಿದ ರೀತಿಯ ಬಗ್ಗೆ ಹಲವಾರು ಅಪಸ್ವರಗಳು ಕೇಳಿಬಂದಿವೆ. ಸಿ.ಬಿ.ಎಸ್.ಇ ಮಂಡಳಿಯು ಪರೀಕ್ಷೆಯನ್ನು ಸಮರ್ಥವಾಗಿ ನಡೆಸದೇ ಇರುವುದು, ಪರೀಕ್ಷೆಗಳು ಪಕ್ಷಪಾತದಿಂದ ಕೂಡಿದ್ದು ಹಾಗೂ ಈ ಪರೀಕ್ಷೆಗಳ ಮೂಲಕ ಸಿ.ಬಿ.ಎಸ್.ಇ ಯೇತರ ಪಠ್ಯಕ್ರಮಗಳ ಮಕ್ಕಳಿಗೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಗಳು ಕೇಳಿಬಂದಿದ್ದವು.

ಈ ನೀಟ್ ಪರೀಕ್ಷೆ ಎಂದರೇನು? ಇದರಿಂದ ಏನಾದರೂ ಲಾಭಗಳಿವೆಯೇ? ಈ ಪರೀಕ್ಷೆಯ ಬಗ್ಗೆ ಹಲವಾರು ಶೈಕ್ಷಣಿಕ ಸಂಸ್ಥೆಗಳು ಹಾಗು ರಾಜ್ಯ ಸರಕಾರಗಳು ವಿರೋಧ ವ್ಯಕ್ತ ಪಡಿಸಿದ್ದವು, ಅವರು ನೀಡಿದ ಕಾರಣವೇನು? ಈ ನೀಟ್ ಪರೀಕ್ಷೆಯಿಂದ ರಾಜ್ಯಗಳಿಗೆ ಏನಾದರೂ ಒಳಿತಾಗಲಿದೆಯೇ? ಮುಂದೆ ನೋಡೋಣ.

ನೀಟ್ ಎಂದರೆ ರಾಷ್ಟ್ರೀಯ ಅರ್ಹತಾ ಹಾಗು ಪ್ರವೇಶ ಪರೀಕ್ಷೆ (National Eligibility Cum Entrance Test). ಇದನ್ನು ವೈದ್ಯಕೀಯ ಹಾಗು ದಂತ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ರಾಷ್ಟ್ರಾದ್ಯಂತ ನಡೆಸಲಾಗುವ ಪರೀಕ್ಷೆ. ಈ ಪರೀಕ್ಷೆಯನ್ನು ಸಿ.ಬಿ.ಎಸ್.ಇ ಮಂಡಳಿಯು ನಡೆಸುತ್ತದೆ. ನೀಟ್ ಪರೀಕ್ಷೆ ಜಾರಿಯಾದ ನಂತರ ಈ ಮುಂಚೆ ಇದ್ದ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಹಾಗು ಹಲವಾರು ರಾಜ್ಯಗಳು ಹಾಗು ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿದ್ದ ಪ್ರವೇಶ ಪರೀಕ್ಷೆಗಳು ರದ್ದುಗೊಂಡಿವೆ. ಸಿ.ಬಿ.ಎಸ್.ಇ ಮಂಡಳಿಯು ನೀಟ್ ಪರೀಕ್ಷೆಯ ಫಲಿತಾಂಶಗಳನ್ನು ಹಾಗು ರಾಷ್ಟ್ರ ಮಟ್ಟದ ಅರ್ಹತಾ ಪಟ್ಟಿಯನ್ನು ಘೋಷಿಸುತ್ತದೆ.

ನೀಟ್ ಪರೀಕ್ಷೆಯ ಇತಿಹಾಸ
2012 ರ ನಂತರ ನೀಟ್ ಪರೀಕ್ಷೆಯನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರಕಾರ ಯೋಜನೆ ರೂಪಿಸಿತ್ತು. ಆದರೆ ಸಿ.ಬಿ.ಎಸ್.ಇ ಹಾಗು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಈ ಪರೀಕ್ಷೆಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಿದವು. ಮೇ 2013 ರಲ್ಲಿ ಮೊದಲ ಬಾರಿಗೆ ಈ ಪರೀಕ್ಷೆಯನ್ನು ನಡೆಸಲಾಯಿತು. ಆದರೆ ಅದೇ ವರ್ಷದ ಜೂಲೈ ನಲ್ಲಿ ಸುಪ್ರೀಂ ಕೋರ್ಟ್ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ಎಂ.ಸಿ.ಐ ಕಾಲೇಜುಗಳು ನಡೆಸುವ ಪ್ರವೇಶ ಪ್ರಕ್ರಿಯೆಯಲ್ಲಿ ಮೂಗು ತುರಿಸುವಂತಿಲ್ಲ ಎಂದು ಆದೇಶ ನೀಡಿತು.

2012 ರಲ್ಲಿ ಯಾವಾಗ ಎಂಸಿಐ ವೈದ್ಯಕೀಯ ಶಿಕ್ಷಣಕ್ಕೆ ನೀಟ್ ಪರೀಕ್ಷೆಯನ್ನು ಜಾರಿಗೆ ತರುವುದಾಗಿ ಹೇಳಿತೋ ಆಗ ಆಂಧ್ರ ಪ್ರದೇಶ, ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ ಹಾಗು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ಈ ಬದಲಾವಣೆಯನ್ನು ವಿರೋಧಿಸಿದ್ದವು. ಎಂ.ಸಿ.ಐ ಹೇಳಿರುವ ಪಠ್ಯಕ್ರಮಕ್ಕೂ, ರಾಜ್ಯ ಸರಕಾರಗಳ ಪಠ್ಯಕ್ರಮಕ್ಕೂ ಭಾರಿ ವ್ಯತ್ಯಾಸವಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಪರೀಕ್ಷೆಯನ್ನು ವಿರೋಧಿಸಿದ್ದವು.

ಆದರೆ ಏಪ್ರಿಲ್ 2016 ರಲ್ಲಿ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಹಿಂದೆ ನೀಡಿದ್ದ ಆದೇಶವನ್ನು ವಾಪಸ್ ಪಡೆದು, ಕೇಂದ್ರ ಸರಕಾರ ಹಾಗು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಲು ಆದೇಶ ನೀಡಿತು.

ನೀಟ್ ಪರೀಕ್ಷೆಗೆ ವಿರೋಧ
ಹಾಲಿ ಇರುವ ನೀಟ್ ಪರೀಕ್ಷೆಯು ರಾಜ್ಯಗಳು ನಡೆಸುತ್ತಿದ್ದ ವೈದ್ಯಕೀಯ ಅರ್ಹತಾ ಪರೀಕ್ಷೆಗೆ ಬದಲಾಗಿ ಜಾರಿಗೆ ತರಲಾಗಿದೆ. ಇದಕ್ಕೆ ಹಲವಾರು ಹಿಂದಿಯೇತರ ಭಾಷಿಕ ರಾಜ್ಯಗಳು ಬಲವಾಗಿ ವಿರೋಧ ವ್ಯಕ್ತಪಡಿಸಿದ್ದವು. ರಾಜ್ಯಗಳು ನಡೆಸುತ್ತಿದ್ದ ಅರ್ಹತಾ ಪರೀಕ್ಷೆಯಲ್ಲಿ ಆಯಾ ರಾಜ್ಯದ ಪಠ್ಯ ಕ್ರಮದಲ್ಲಿ ಓದಿದ್ದ ವಿದ್ಯಾರ್ಥಿಗಳು ಸೀಟಿನ ಆಕಾಂಕ್ಷಿಗಳಾಗಿರುತ್ತಿದ್ದರು. ನೀಟ್ ಪರೀಕ್ಷೆಯ ಫಲಿತಾಂಶ ಹೊರಬಂದಾಗ ರಾಜ್ಯ ಸರಕಾರದ ಪಠ್ಯಕ್ರಮದಲ್ಲಿ ಓದಿದ್ದ ವಿದ್ಯಾರ್ಥಿಗಳಿಗಿಂತ ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಓದಿದ್ದ ವಿದ್ಯಾರ್ಥಿಗಳು ಈ ನೀಟ್ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದರು. ಇದು ರಾಜ್ಯ ಪಾಠ್ಯಕ್ರಮದಲ್ಲಿ ಓದಿದ್ದ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವೇ ಸರಿ.

ಯಾವಾಗ ಸುಪ್ರೀಂ ಕೋರ್ಟ್ ನೀಟ್ ಪರೀಕ್ಷೆಯನ್ನು ಜಾರಿಗೆ ತರಬೇಕು ಎಂದು ಹೇಳಿತೋ ಆಗ ತೀರ್ಪು ವಿರೋಧಿಸಿ ಹಲವಾರು ಪ್ರತಿಭಟನೆಗಳು ನಡೆದಿವೆ. ನೀಟ್ ಪರೀಕ್ಷೆಯನ್ನು ಜಾರಿಗೆ ತರುವ ಬಗ್ಗೆ ವಿದ್ಯಾರ್ಥಿಗಳು, ವೈದ್ಯರು, ಪೋಷಕರು, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಸಂಘಟನೆಗಳು ಸೇರಿದಂತೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಇದ್ದ ಕಾರಣ ನೀಟ್ ಪರೀಕ್ಷೆಯು ಸಿ.ಬಿ.ಎಸ್.ಇ ಪಠ್ಯಕ್ರಮ ಓದುವ ಮಕ್ಕಳಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ ಹಾಗೂ ಇದರಿಂದ ರಾಜ್ಯ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವುದು.

ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಓದುವ ಹೆಚ್ಚಿನ ಮಕ್ಕಳು ನಗರ ಪ್ರದೇಶದವರು, ಶ್ರೀಮಂತರು ಹಾಗೂ ಹಿಂದಿ ರಾಜ್ಯಗಳಿಂದ ಬಂದಿರುವವರು ಆಗಿರುತ್ತಾರೆ. ಇದರ ಜೊತೆಜೊತೆಗೆ ಸಿ.ಬಿ.ಎಸ್. ಇ ಯಲ್ಲಿ ಓದಿಸಿದರೆ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎನ್ನುವ ಆಸೆ ತೋರಿಸಿ ಸ್ಥಳೀಯ ಮಕ್ಕಳನ್ನು ಈ ಶಾಲೆಗೇ ಸೇರಿಸುವ ಪರಿಪಾಠ ಶುರುವಾಗಿದೆ. ಗಮನಿಸಬೇಕಾದ ವಿಷಯವೆಂದರೆ ಈ ಶಾಲೆಗಳಲ್ಲಿ ಸ್ಥಳೀಯ ಭಾಷೆಯನ್ನ ಒಂದು ಆಯ್ಕೆಯ ವಿಷ್ಯವಾಗಿಯೂ ಕಲಿಸದಿರುವ ಶಾಲೆಗಳಿವೆ. ಇದರ ಜೊತೆ ಜೊತೆಗೆ ಹಲವಾರು ದಶಕಗಳಿಂದ ದಕ್ಷತೆಯಿಂದ ನಡೆಸಿಕೊಂಡು ಬಂದಿದ್ದ ಸಿ.ಇ.ಟಿ ಯಂತಹ ಪರೀಕ್ಷಾ ವಿಧಾನಗಳನ್ನು ರದ್ದುಗೊಳಿಸುತ್ತಿರುವುದು.

ನೀಟ್ ನ ಮಿಥ್ಯಗಳು
ನ್ಯಾಯಾಲಯ ನೀಟ್ ಪರೀಕ್ಷೆಯನ್ನು ಜಾರಿಗೆ ತರಲು ನೀಡಿದ ಕಾರಣಗಳಲ್ಲಿ ಖಾಸಗಿ ಸಂಸ್ಥೆಗಳು ಸೀಟು ಭರ್ತಿಯ ಸಮಯದಲ್ಲಿ ಮಾಡುವ ಭ್ರಷ್ಟಾಚಾರ, ಮಕ್ಕಳು ಹಲವಾರು ಪರೀಕ್ಷೆಗಳನ್ನು ಬರೆಯಲು ಮಾಡುವ ಖರ್ಚು, ಆತಂಕ ಮುಂತಾದ ವಿಷಯಗಳು ಇದ್ದವು. ಇದರ ಜೊತೆಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಸಿ.ಬಿ.ಎಸ್.ಇ ಪ್ರವೇಶ ಪ್ರಕ್ರಿಯೆಯ ಸಮಯದಲ್ಲಿ ಆಗುವ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತವೆ ಎಂದು ಹೇಳಿತ್ತು ಹಾಗೂ ಒಂದೇ ಪಠ್ಯಕ್ರಮ ಬಳಸುವುದರಿಂದ ಶಿಕ್ಷಣ ಮುಗಿಸಿ ಹೊರಬರುವ ವೈದ್ಯರು ಒಂದೇ ರೀತಿಯ ಅರ್ಹತೆ ಹೊಂದಿರುತ್ತಾರೆ ಎಂದು ಹೇಳಿತ್ತು.

ಆದರೆ ಈ ವಾದಗಳು ಅಷ್ಟು ಸಮಂಜಸವಾಗಿಲ್ಲ ಎನ್ನುವುದನ್ನು ನಾವು ನೋಡಬಹುದು. ಮೊದಲನೆಯದಾಗಿ ಪ್ರವೇಶ ಪರೀಕ್ಷೆಯಿಂದ ಒಂದೇ ರೀತಿಯ ವೈದ್ಯರು ಹೊರಬರುತ್ತಾರೆ ಎನ್ನುವುದು ಬಾಲಿಶ ವಾದ. ಈಗಾಗಲೇ ಅನೇಕ ರಾಜ್ಯಗಳು ತಮ್ಮದೇ ಆದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಹೊಂದಿದ್ದವು, ಕರ್ನಾಟಕದ ಸಿ.ಇ.ಟಿ ಪರೀಕ್ಷೆಯು ದೇಶಕ್ಕೆ ಮಾದರಿಯಾದ ಪರೀಕ್ಷೆಯಾಗಿತ್ತು. ಕರ್ನಾಟಕ ಸಿ.ಇ.ಟಿ ಪರೀಕ್ಷೆಯನ್ನು ನೋಡಿ ದೇಶದ ಹಲವಾರು ರಾಜ್ಯಗಳು ತಮ್ಮ ರಾಜ್ಯದಲ್ಲೂ ಅದೇ ವಿಧಾನವನ್ನು ಅಳವಡಿಸಿಕೊಂಡಿದ್ದವು. ಆದರೆ ನೀಟ್ ಜಾರಿಗೆ ಬಂದ ಮೇಲೆ ಸಿ.ಇ.ಟಿ ಮೂಲಕ ವೈದ್ಯಕೀಯ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಎಲ್ಲೋ ಕೆಲವು ಕಡೆ ಆಗುವ ಭ್ರಷ್ಟಾಚಾರ ನೆಪವೊಡ್ಡಿ ರಾಜ್ಯಗಳು ನಡೆಸುತ್ತಿದ್ದ ಉತ್ತಮ ಪರೀಕ್ಷಾ ಮಾದರಿಯನ್ನು ರದ್ದುಗೊಳಿಸುವುದು ರಾಜ್ಯ ಹಕ್ಕುಗಳನ್ನು ಮೊಟಕುಗೊಳಿಸಿದಂತೆ ಆಗುವುದಲ್ಲವೇ? ಇದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅನ್ಯಾಯ.

ಇನ್ನು ಹಲವಾರು ಪರೀಕ್ಷೆಗಳನ್ನು ಬರೆಯುವ ಮಕ್ಕಳಿಗೆ ಇದರಿಂದ ಮುಕ್ತಿ ಸಿಗುತ್ತದೆ ಎನ್ನುವ ವಾದದ ಸುತ್ತ ನೋಡಿದರೆ, ಮೊದಲನೆಯದಾಗಿ ಹೊರರಾಜ್ಯದಿಂದ ಬಂದ ವಿದ್ಯಾರ್ಥಿ ಒಬ್ಬ ಎಷ್ಟು ರಾಜ್ಯಗಳಲ್ಲಿ ಪರೀಕ್ಷೆ ಬರೆಯುತ್ತಾನೆ ಎನ್ನುವ ಅಂಕಿ ಅಂಶಗಳನ್ನು ಕೇಂದ್ರ ಸರಕಾರವಾಗಲಿ ಅಥವಾ ಕೋರ್ಟ್ ಆಗಲಿ ಕೊಟ್ಟಿಲ್ಲ. ಅನುಭವದ ಆಧಾರದ ಮೇಲೆ ಹೇಳುವುದಾದರೆ ಆ ರೀತಿ ಪರೀಕ್ಷೆ ಬರೆಯುವವರ ಸಂಖ್ಯೆ ತೀರಾ ಚಿಕ್ಕದು. ಹಾಗಿದ್ದ ಮೇಲೆ ಯಾರ ಒಳಿತಿಗಾಗಿ ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಬಲಿಕೊಡುವ ವ್ಯವಸ್ಥೆ ಮಾಡಲಾಗಿದೆ?

ಸಿ.ಬಿ.ಎಸ್.ಇ ಪಠ್ಯಕ್ರಮ
ನೀಟ್ ಪರೀಕ್ಷೆಯಲ್ಲಿ ಸಿ.ಬಿ.ಎಸ್.ಇ ಪಠ್ಯಕ್ರಮವನ್ನು ಉಪಯೋಗಿಸಲಾಗುತ್ತಿದೆ. ಹಾಗಿದ್ದರೆ ಸಿ.ಬಿ.ಎಸ್.ಇ ಮಂಡಳಿಯ ಶಾಲೆಯಲ್ಲಿ ಓದುತ್ತಿರುವ ಮಕ್ಕಳೇ ಹೆಚ್ಚಿರಬೇಕು ಎಂದು ನಮ್ಮಲ್ಲಿ ಪ್ರಶ್ನೆ ಮೂಡುವುದು ಸಹಜ ಆದರೆ ಅದು ನಿಜವಲ್ಲ. ಸಿ.ಬಿ.ಎಸ್.ಇ ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳ ಒಟ್ಟು ಸಂಖ್ಯೆ ಮಹಾರಾಷ್ಟ್ರ ರಾಜ್ಯದ ಪಠ್ಯಕ್ರಮದಲ್ಲಿ 12 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆಗಿಂತ ಕಡಿಮೆ ಇದೆ. ಹಾಗಿದ್ದರೆ ಯಾವ ಆಧಾರದ ಮೇಲೆ ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ತಗೆದುಕೊಳ್ಳಲಾಯಿತು?

ಹಾಗಂತ ಸಿ.ಬಿ.ಎಸ್.ಇ ಪಠ್ಯಕ್ರಮ ಎಲ್ಲ ಬೇರೆ ಪಠ್ಯಕ್ರಮಕ್ಕಿಂತ ಉತ್ತಮವೇ ಎನ್ನುವ ಪ್ರಶ್ನೆಯು ನಮ್ಮಲ್ಲಿ ಬರಬಹುದು. ಆದರೆ ಇದಕ್ಕೂ ಉತ್ತರ ನಕಾರಾತ್ಮಕವಾಗಿದೆ. ಅಧ್ಯಾಯನ ಒಂದರ ಪ್ರಕಾರ ಬೇರೆ ಬೇರೆ ಪಠ್ಯಕ್ರಮದಲ್ಲಿ ಓದಿರುವ ಮಕ್ಕಳ ವಿಜ್ಞಾನ ವಿಷಯದ ಮೇಲಿನ ಹಿಡಿತದ ಬಗ್ಗೆ ಸಂಶೋಧನೆ ನಡೆಸಿದಾಗ ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಓದಿದ ಮಕ್ಕಳೇನು ಮೊದಲಿನ ಸ್ಥಾನದಲ್ಲಿರಲಿಲ್ಲ. ಪಶ್ಚಿಮ ಬಂಗಾಳದ ಪಠ್ಯಕ್ರಮದಲ್ಲಿ ಓದಿದ ಮಕ್ಕಳು ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗಿಂತ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತದಲ್ಲಿ ಮುಂದಿದ್ದರು. ಹಾಗಿದ್ದ ಮೇಲೆ ಯಾವ ಆಧಾರ ಮೇಲೆ ಸಿ.ಬಿ.ಎಸ್.ಇ ಪಠ್ಯಕ್ರಮವನ್ನು ಪಾಲಿಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಯಿತು? ಕೇವಲ ಯಾರೋ ಕೆಲವು ಜನರ ತರ್ಕ ಹೀನ ನಿರ್ಧಾರ ಭಾರತದ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಕತ್ತಲೆಯ ಕೂಪಕ್ಕೆ ತಳ್ಳುವ ನಿರ್ಧಾರವನ್ನು ಒಪ್ಪಿಕೊಳ್ಳಬೇಕೇ?

ಇನ್ನು ಭ್ರಷ್ಟಾಚಾರದ ವಿಷಯಕ್ಕೆ ಬರುವುದಾದರೆ ಎಂ.ಸಿ.ಐ (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಹಾಗೂ ಸಿ.ಬಿ.ಎಸ್.ಇ ಆಡಳಿತ ಮಂಡಳಿಯ ಮೇಲೆಯೇ ಹಲವಾರು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಹಾಗಿರುವಾಗ ಭ್ರಷ್ಟತೆಯ ಕಳಂಕ ಹೊಂದಿರುವ ಸಂಸ್ಥೆಗಳಿಂದಲೇ ಭ್ರಷ್ಟ ಮುಕ್ತ ಪರೀಕ್ಷೆ ಹಾಗೂ ಪ್ರವೇಶ ಪ್ರಕ್ರಿಯೆಯನ್ನು ಅಪೇಕ್ಷಿಸಲು ಸಾಧ್ಯವೇ ಎನ್ನುವುದನ್ನು ಯೋಚಿಸಿ ನೋಡಬೇಕಾಗುತ್ತದೆ. ಇದಲ್ಲದೆ ಪರೀಕ್ಷೆಗಿಂತ ಮುಂಚೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ನೀಟ್ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸಿ.ಬಿ.ಎಸ್.ಇ Vs ರಾಜ್ಯ ಪಠ್ಯಕ್ರಮ
ಸಹಜವಾಗಿ ನೀಟ್ ಪರೀಕ್ಷೆಯನ್ನು ಸಿ.ಬಿ.ಎಸ್.ಇ ಪಠ್ಯಕ್ರಮ ಹೊಂದಿರುವ ಶಾಲೆಗಳು ತೆರೆದ ಕೈಗಳಿಂದ ಅಪ್ಪಿಕೊಂಡು ಮುದ್ದಾಡುತ್ತಿವೆ. ನೀಟ್ ಜಾರಿಗೆ ಬಂದಾಗಿನಿಂದ ಪರೀಕ್ಷೆಗೆ ಪಾಠ ಹೇಳಿಕೊಡುವ ಟ್ಯೂಷನ್ ಗಳು ವಿದ್ಯಾರ್ಥಿಗಳ ಸುಲಿಗೆಯನ್ನು ಶುರು ಮಾಡಿವೆ. ನೀಟ್ ಪರೀಕ್ಷೆಯಲ್ಲಿ ತಮ್ಮ ಪಠ್ಯಕ್ರಮದಲ್ಲಿ ಓದಿದ ಮಕ್ಕಳು ಹೆಚ್ಚಿನ ಸೀಟುಗಳನ್ನು ಪಡೆದಂತೆ ತಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚು ಪ್ರಸಾರ ಮಾಡುತ್ತವೆ. ಪೋಷಕರಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಓದಿಸಿದರೆ ಉಪಯೋಗವಿಲ್ಲ, ನಿಮ್ಮ ಮಕ್ಕಳಿಗೆ ಸುಭದ್ರ ಭವಿಷ್ಯ ಬೇಕಿದ್ದಲ್ಲಿ ಅವರನ್ನು ಸಿ.ಬಿ.ಎಸ್.ಇ ಶಾಲೆಗೇ ಸೇರಿಸಿ ಎನ್ನುವ ಕೀಳರಿಮೆ ಬಿತ್ತಲು ಶುರು ಮಾಡುತ್ತವೆ. ಇನ್ನು ಸಿ.ಬಿ.ಎಸ್.ಇ ಶಾಲೆಗಳು ನಾಯಿ ಕೊಡೆಗಳಂತೆ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ತಲೆ ಎತ್ತುತ್ತವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ದುಡ್ಡು ನೀವು ತೆರಬೇಕು ಎನ್ನುವ ನಿಯಮ ಹೇಳುತ್ತವೆ. ಇದೇ ಹೊತ್ತಿನಲ್ಲಿ ಸಿ.ಬಿ.ಎಸ್.ಇ ಮಂಡಳಿಯು ಮೂಲ ನಿಯಮ ತೂರಿ ಹೊಸ ಶಾಲೆ ಪ್ರಾರಂಭಕ್ಕೆ ಬರುವ ಪ್ರತಿಯೊಂದು ಅರ್ಜಿಗೂ ಅಸ್ತು ಅನ್ನುತ್ತದೆ. ಈ ಎಲ್ಲ ಪ್ರಕ್ರಿಯೆಯಲ್ಲೂ ರಾಜ್ಯ ಸರಕಾರಕ್ಕೆ ಯಾವುದೇ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ ಎನ್ನುವುದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಶಿಕ್ಷಣದ ಹಕ್ಕು ರಾಜ್ಯದ್ದು ಎಂದು ಹೇಳುವ ಕೇಂದ್ರ ಸರಕಾರ ಇನ್ನೊಂದು ಕಡೆಯಿಂದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಸದ್ದಿಲ್ಲದಂತೆ ತನ್ನ ತೆಕ್ಕೆಗೆ ತಗೆದುಕೊಳ್ಳುತ್ತ ರಾಜ್ಯ ಸರಕಾರದ ಹಿಡಿತವನ್ನು ಮುರಿಯುತ್ತಿದೆ.

ನೀಟ್ ಪರೀಕ್ಷೆಯ ಫಲಿತಾಂಶಗಳು ಸಿ.ಬಿ.ಎಸ್.ಇ ಪಠ್ಯಕ್ರಮ ಉತ್ತಮ ಹಾಗೂ ರಾಜ್ಯಗಳ ಪಠ್ಯಕ್ರಮ ಉಪಯೋಗಕ್ಕೆ ಬಾರದ್ದು ಎನ್ನುವ ಅತಾರ್ಕಿತ ವಾದವನ್ನು ಹುಟ್ಟು ಹಾಕುತ್ತಿವೆ. ರಾಜ್ಯ ಪಠ್ಯಕ್ರಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಈ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಇಲ್ಲಿ ಸಿ.ಬಿ.ಎಸ್.ಇ ಮಂಡಳಿಯು ಅದ್ಭುತವಾದ ಪಠ್ಯಕ್ರಮವನ್ನೇನು ರೂಪಿಸಿಲ್ಲ ಬದಲಾಗಿ ತನ್ನ ಪಠ್ಯಕ್ರಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ನಿಯಮಗಳನ್ನು ರೂಪಿಸಿ ಇತರೆ ಪಠ್ಯಕ್ರಮದಲ್ಲಿ ಓದಿದ ವಿದ್ಯಾಥಿಗಳು ಹಾಗೂ ಪೋಷಕರಲ್ಲಿ ಕೀಳರಿಮೆಯನ್ನು ಬಿತ್ತುವ ಕೆಲಸ ಮಾಡುತ್ತಿದೆ.

ಹಿಂದಿಯೇತರ ಭಾಷೆಗಳಲ್ಲಿ ನೀಟ್ ಪರೀಕ್ಷೆ
ನೀಟ್ ಪರೀಕ್ಷೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ರಾಜ್ಯಗಳು ಆಯಾ ರಾಜ್ಯದ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಾಗ ಸಿ.ಬಿ.ಎಸ್.ಇ ಮಂಡಳಿಯು ಮೊದಲಿಗೆ ಅದು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಯಾವಾಗ ಸಾಮಾನ್ಯ ಜನರು ಹಾಗೂ ರಾಜ್ಯ ಸರಕಾರಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಶುರುಮಾಡಿದರೋ ಆಗ ಹಿಂದಿಯೇತರ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಸಿ.ಬಿ.ಎಸ್.ಇ ಮಂಡಳಿಯು ಅನುವು ಮಾಡಿಕೊಟ್ಟಿತು.

ಆದರೆ ಸಮಸ್ಯೆ ಇಲ್ಲಿಗೆ ಮುಗಿಯಲಿಲ್ಲ, ಮೊದಲನೆಯದಾಗಿ ಪ್ರತಿಯೊಂದು ರಾಜ್ಯವು ತನ್ನ ರಾಜ್ಯದ ಮಕ್ಕಳಿಗೆ ಹೊಂದುವಂತೆ ಪಠ್ಯಕ್ರಮಗಳನ್ನು ರೂಪಿಸಿ, ಅದಕ್ಕೆ ಹೊಂದುವಂತೆ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿದ್ದವು. ಯಾವಾಗ ನೀಟ್ ಜಾರಿಯಾಯಿತೋ ರಾಜ್ಯ ಪಠ್ಯಕ್ರಮವನ್ನು ಓದುತ್ತಿದ್ದ ಮಕ್ಕಳು ಒಂದೇ ಬಾರಿಗೆ ಸಿ.ಬಿ.ಎಸ್.ಇ ಮಂಡಳಿಯ ಪಠ್ಯಕ್ರಮದ ಮಕ್ಕಳ ಜೊತೆ ಪೈಪೋಟಿ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಹೇಗಾದರೂ ಸರಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸ್ಪರ್ಧೆ ಒಪ್ಪಿಕೊಂಡು ಮಕ್ಕಳು ಪರೀಕ್ಷೆ ಬರೆಯಲು ಸಿದ್ಧರಾದರು, ಆದರೆ ಅಲ್ಲೂ ಕೂಡ ರಾಜ್ಯದ ಪಠ್ಯಕ್ರಮ ಓದಿದ ಮಕ್ಕಳಿಗೆ ಮೋಸವೊಂದು ಕಾದಿತ್ತು.

ಸಾಮಾನ್ಯ ಪ್ರವೇಶ ಪರೀಕ್ಷೆಯೆಂದರೆ ಆ ಪರೀಕ್ಷೆಯನ್ನು ಬರೆಯುವ ಎಲ್ಲ ಮಕ್ಕಳಿಗೂ ಒಂದೇ ಪ್ರಶ್ನೆ ಪತ್ರಿಕೆ ಇರುತ್ತದೆ ಎಂದು ನಾವೆಲ್ಲಾ ಅಂದುಕೊಂಡಿರುತ್ತೇವೆ ಅಲ್ಲವೇ? ಆದರೆ ನೀಟ್ ಪರೀಕ್ಷೆಯಲ್ಲಿ ಮೂಲ ಪ್ರಶ್ನೆಗಳು ಎಲ್ಲ ಭಾಷೆಗಳಿಗೂ ಅನುವಾದವಾಗದೆ, ಪ್ರತಿಯೊಂದು ಭಾಷೆಯಲ್ಲೂ ಬೇರೆ ಬೇರೆ ರೀತಿಯ ಪ್ರಶ್ನೆ ಪತ್ರಿಕೆಗಳನ್ನು ಸಿ.ಬಿ.ಎಸ್.ಇ ಮಂಡಳಿಯು ತಯಾರು ಮಾಡಿತ್ತು. ಇತರ ಭಾಷೆಯ ಪ್ರಶ್ನೆಗಳು ಹಿಂದಿ ಭಾಷೆಯ ಪ್ರಶ್ನೆಗಳಿಗಿಂತ ಬಹಳಷ್ಟು ಕಠಿಣವಾಗಿದ್ದವು ಎನ್ನುವುದನ್ನ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರೇ ಎತ್ತಿ ತೋರಿಸಿದ್ದಾರೆ. ಇದರ ಜೊತೆಗೆ ಸಿ.ಬಿ.ಎಸ್.ಇ ಸಹ ಎಲ್ಲಿಯೂ ತಾನು ಬೇರೆ ಭಾಷೆಯ ವಿಧಾರ್ಥಿಗಳಿಗೆ ಬೇರೆ ಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡುತ್ತೇವೆ ಎಂದು ಹೇಳಿರಲಿಲ್ಲ. ಹಾಗಿದ್ದರೆ ಇದು ಸಿ.ಬಿ.ಎಸ್.ಇ ಮಂಡಳಿಯು ಹಿಂದಿಯೇತರ, ಸಿ.ಬಿ.ಎಸ್.ಇ ಯೇತರ ರಾಜ್ಯಗಳ ಪಠ್ಯಕ್ರಮವನ್ನು ಓದಿದ ಮಕ್ಕಳಿಗೆ ಮಾಡಿದ ಮೋಸವಲ್ಲವೇ? ಹಾಗಿದ್ದ ಮೇಲೆ ಇದನ್ನ ಸಮಾನ ಅರ್ಹತಾ ಪ್ರವೇಶ ಪರೀಕ್ಷೆಯಂದು ಹೇಗೆ ಕರೆಯಲು ಸಾಧ್ಯ?

ಸಮಸ್ಯೆ ಇಲ್ಲಿಗೆ ನಿಲ್ಲುವುದಿಲ್ಲ, ಹಿಂದಿ ಭಾಷೆಯಲ್ಲಿದ್ದ ಪ್ರಶೆಗಳ ಸಂಖ್ಯೆ ಹಾಗೂ ಬೇರೆ ಭಾಷೆಯಲ್ಲಿದ್ದ ಪ್ರಶ್ನೆಗಳ ಸಂಖ್ಯೆಯು ಒಂದೇ ಆಗಿರಲಿಲ್ಲ. ಇದರಿಂದ ಆಗುವ ದುಷ್ಪರಿಣಾಮ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯುವ ಮಕ್ಕಳು ಮಾಡಿದ ತಪ್ಪಿಗೆ ಕಳೆದುಕೊಳ್ಳುವ ಅಂಕಕ್ಕಿಂತ ಹಿಂದಿಯೇತರ ಭಾಷೆಗಳ ಮಕ್ಕಳು ತಪ್ಪು ಮಾಡಿದರೆ ಹೆಚ್ಚಿನ ಅಂಕಗಳನ್ನು ಕಳೆದುಕೊಳ್ಳುತ್ತಾರೆ ಇದರಿಂದಾಗಿ ಹಿಂದಿಯೇತರ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಮಕ್ಕಳು ನೀಟ್ ನ ಅರ್ಹತಾ ಪಟ್ಟಿಯಲ್ಲಿ ಕೆಳಗಿನ ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ.
ಸಿ.ಬಿ.ಎಸ್.ಇ ಮಂಡಳಿಯು ತನ್ನ ಪಠ್ಯಕ್ರಮವನ್ನು ಇಂಗ್ಲಿಷ್ ಹಾಗೂ ಹಿಂದಿ ಹೊರೆತುಪಡಿಸಿ ಬೇರೆ ಭಾಷೆಗಳಲ್ಲಿ ಕಲಿಸುವುದಿಲ್ಲ, ಹಾಗಾಗಿ ಹಿಂದಿಯೇತರ ರಾಜ್ಯಗಳ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ಸಿ.ಬಿ.ಎಸ್.ಇ ನಡೆಸುತ್ತಿರುವ ಈ ಅಸಮಾನ ಪರೀಕ್ಷೆಯಿಂದಾಗಿ ತಾನು ಪಡೆದುಕೊಳ್ಳಬೇಕು ಎಂದುಕೊಂಡಿದ್ದ ಸೀಟು ಸಹ ಕೈಯಿಂದ ಜಾರಿಹೋದಂತಾಗುತ್ತದೆ. ಆದರೆ ಇದರಿಂದ ಲಾಭಾ ಯಾರಿಗೆ ಎಂದು ನೋಡಿದರೆ ಸಿ.ಬಿ.ಎಸ್.ಇ ಗೆ ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಹೇಗೆ? ಸಿ.ಬಿ.ಎಸ್.ಇ ಮಂಡಳಿಯ ಶಾಲೆಗಳು ದೇಶದ ಎಲ್ಲಾ ರಾಜ್ಯಗಳಲ್ಲೂ ಇರುವುದು ನಮಗೆಲ್ಲ ಗೊತ್ತಿದೆ, ರಾಜ್ಯದ ಪಠ್ಯಕ್ರಮ ಓದಿದ ಮಕ್ಕಳಿಗಿಂತ ಸಿ.ಬಿ.ಎಸ್.ಇ ಮಂಡಳಿಯು ತನ್ನ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ನೀಟ್ ಪರೀಕ್ಷೆಯನ್ನು ಸುಲಭ ಮಾಡಿಕೊಟ್ಟಂತೆ ಆಗುತ್ತದೆ. ಹೀಗಾಗಿ ಸಿ.ಬಿ.ಎಸ್.ಇ ಯಾ ಮಕ್ಕಳಿಗೆ ಇಂತಹ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸುಲಭವಾಗುತ್ತದೆ. ಹಾಗಾಗಿ ರಾಜ್ಯ ಪಠ್ಯಕ್ರಮದಲ್ಲಿ ಓದಿದ ಮಕ್ಕಳು ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟುಗಳನ್ನು ಪಡೆಯುವ ಆಸೆಯನ್ನು ಕೈಚೆಲ್ಲಿ ಕೂಡಬೇಕಾದ ಸಂದರ್ಭ ಒದಗಿ ಬಂದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಮಕ್ಕಳು ಮಾಡಿರುವ ಒಂದೇ ತಪ್ಪೆಂದರೆ ಅವರು ಆಯಾ ರಾಜ್ಯದ ಭಾಷೆಯಲ್ಲಿ, ಆಯಾ ರಾಜ್ಯದ ಪಠ್ಯಕ್ರಮದ ಶಾಲೆಗಳಲ್ಲಿ ಓದಿದ್ದು.

ನೀಟ್ ಪರೀಕ್ಷೆ ಜಾರಿಗೆ ಬರುವುದಕ್ಕಿಂತ ಮುಂಚೆ ಶೇ 75 ರಷ್ಟು ಬಂಗಾಳಿ ಮಾಧ್ಯಮದಲ್ಲಿ ಓದಿದ ಮಕ್ಕಳು ವೈದ್ಯಕೀಯ ಸೀಟುಗಳನ್ನು ಪಡೆದಿದ್ದರು ನೀಟ್ ಜಾರಿಗೆ ಬಂದ ಮೇಲೆ ಕೇವಲ ಶೇ 7 ರಷ್ಟು ಬಂಗಾಳಿ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಸೀಟು ಪಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಈ ವಿಷಯದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡುತ್ತಿರುವ ಗರ್ಗ ಚಟರ್ಜೀ ಅವರು.

ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರಕ
ನೀಟ್ ಪರೀಕ್ಷೆಯು ಹಿಂದಿಯೇತರ ಮಾಧ್ಯಮದ ವಿದ್ಯಾರ್ಥಿಗಳು ಅದರಲ್ಲೂ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಈ ವರ್ಗದ ವಿಧಾರ್ಥಿಗಳಿಗೆ ಓದಲು ಇರುವ ಅವಕಾಶ ರಾಜ್ಯ ಸರಕಾರಗಳು ನಡೆಸುವ ಶಾಲೆಗಳಲ್ಲಿ. ಈ ಶಾಲೆಗಳಲ್ಲಿ ಇರುವುದು ರಾಜ್ಯಗಳ ಪಠ್ಯಕ್ರಮ. ಹಾಗಿರುವಾಗ ಈ ಮೇಲೆ ಹೇಳಿದಂತೆ ಈ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ನಡೆಸುತ್ತಿದ್ದ ಸಿ.ಇ.ಟಿ ಪರೀಕ್ಷೆ ತಮ್ಮ ಆಸೆಗಳಿಗೆ ಆಸರೆಯಾಗಿತ್ತು. ಆದರೆ ಈಗ ಈ ವಿದ್ಯಾರ್ಥಿಗಳು ಒಂದು ಸೀಟಿಗಾಗಿ ತಮ್ಮ ರಾಜ್ಯವಲ್ಲದೆ ಇಡೀ ದೇಶದ ವಿದ್ಯಾರ್ಥಿಗಳ ಜೊತೆ ಪೈಪೋಟಿ ನಡೆಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ಹಾಗಿದ್ದಾಗ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬೆಲೆ ಎಲ್ಲಿದೆ? ತಾವು ಕೇವಲ ರಾಜ್ಯದ ಪಠ್ಯಕ್ರಮದಲ್ಲಿ ಓದಿದ ಮಾತ್ರಕ್ಕೆ ತಮ್ಮ ಆಸೆಗಳಿಗೆ ಎಳ್ಳುನೀರು ಬಿಡಬೇಕಾದ ಸ್ಥಿತಿಯನ್ನು ಹುಟ್ಟು ಹಾಕುವ ನೀಟ್ ನಂತಹ ಪರೀಕ್ಷೆಗಳ ಅವಶ್ಯಕತೆಯನ್ನು ನಾವು ಪ್ರಶ್ನಿಸಬೇಕಿದೆ.

ಇವತ್ತು ವೈದ್ಯಕೀಯ ಸೇವೆ ಭಾರತದ ಗ್ರಾಮೀಣ ಭಾಗದಲ್ಲಿ ತೀರಾ ಶೋಚನೀಯ ಸ್ಥಿತಿಯಲ್ಲಿದೆ. ಹೊಸದಾಗಿ ಹೊರಬರುತ್ತಿರುವ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವುದಕ್ಕೆ ಮುಂದಾಗುತ್ತಿಲ್ಲ. ತಾವು ಗ್ರಾಮೀಣ ಪ್ರದೇಶಕ್ಕೆ ಹೋದರೆ ಸ್ಪರ್ಧೆಯಿಂದ ಹಿಂದೆ ಉಳಿಯುತ್ತೇವೆ ಅನ್ನುವ ಕಲ್ಪನೆ ಹಲವು ವೈದ್ಯರಲ್ಲಿದೆ, ಹಾಗಾಗಿ ಗ್ರಾಮೀಣ ಪ್ರದೇಶದ ಆಸ್ಪತ್ರೆಗಲ್ಲಿ ವೈದ್ಯರನ್ನು ನೇಮಿಸುವುದಕ್ಕೆ ಸರಕಾರಗಳು ಹೆಣಗಾಡುತ್ತಿವೆ. ಗ್ರಾಮೀಣ ಪ್ರದೇಶದಿಂದ ಆಯ್ಕೆಯಾದ ಮಕ್ಕಳು ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ತಮ್ಮ ಹಳ್ಳಿಗಳಿಗೆ ಹೋಗಿ ಸೇವೆ ಮಾಡಲು ಮನಸ್ಸು ಮಾಡಬಹುದಾಗಿದ್ದ ದಾರಿಯನ್ನು ಸಹ ಈ ನೀಟ್ ಪರೀಕ್ಷೆ ನುಂಗಿ ಹಾಕುತ್ತಿದೆ. ಇದರಿಂದ ತೊಂದರೆ ಒಳಗಾಗುವವರು ಹಳ್ಳಿಯ ಜನರೇ ಅನ್ನುವುದು ಗಮನಿಸಬೇಕಾಗಿದೆ.

ಅಲ್ಲದೆ ಈ ನೀಟ್ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ನೆಪದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹಲವಾರು ರಾಜ್ಯಗಳು ಪ್ರತಿಭಟಿಸಿದ್ದವು. ಕೇರಳ ಮುಖ್ಯಮಂತ್ರಿ ಪಿ. ವಿಜಯನ್ ನೀಟ್ ಪರೀಕ್ಷೆಯನ್ನು ನಡೆಸಿದ ರೀತಿ ಮಾನವ ಹಕ್ಕುಗಳ ಉಲ್ಲಂಘನೆಯಂದು ಹೇಳಿಕೆ ನೀಡಿದ್ದರು. ಪರೀಕ್ಷೆಯನ್ನು ನಡೆಸಿದ ರೀತಿ ಹಾಗೂ ಫಲಿತಾಂಶದ ಬಗ್ಗೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳು ಆಗಿರುವ ಎಡವಟ್ಟುಗಳ ಬಗ್ಗೆ ಎತ್ತರದ ಧ್ವನಿಯಲ್ಲಿ ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿವೆ. ತಮಿಳುನಾಡು ಸರಕಾರ ತನ್ನ ರಾಜ್ಯವನ್ನು ನೀಟ್ ಪರೀಕ್ಷೆಯಿಂದ ಹೊರಗಿಡಬೇಕು ಎಂದು ಮೊಸೂದೆಯೊಂದನ್ನು ಜಾರಿಗೆ ತರಲು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿಕೊಟ್ಟಿದೆ.

ಸ್ವಾಯತ್ತತೆಗೆ ಮಾರಕ
ನೀಟ್ ಪರೀಕ್ಷೆಯನ್ನು ಜಾರಿಗೊಳಿಸಲು ಪಾಲಿಸುತ್ತಿರುವ ನೀತಿಯನ್ನು ನೋಡಿದರೆ ಕೇಂದ್ರ ಸರಕಾರ ನಿಧಾನವಾಗಿ ಶಿಕ್ಷಣವನ್ನು ತನ್ನ ಹಿಡಿತಕ್ಕೆ ತಗೆದುಕೊಳ್ಳಲು ನೋಡುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ತಮಿಳುನಾಡಿನ ಹೈಕೋರ್ಟ್ ಅಲ್ಲಿನ ಸರಕಾರಕ್ಕೆ ಯಾಕೆ ಸಿ.ಬಿ.ಎಸ್.ಇ ಪಠ್ಯಕ್ರಮವನ್ನು ನೀವು ಪಾಲಿಸಬಾರದು, ಇದರಿಂದ ಒಂದೇ ಪಠ್ಯಕ್ರಮ ಎಲ್ಲಡೆ ಇರುತ್ತದೆ ಎಂದು ಹೇಳಿರುವ ಮಾತು ಪ್ರಾಮುಖ್ಯತೆ ಪಡೆಯುತ್ತದೆ. ನಾಯಾಧೀಶರು ಹೇಳಿರುವ ಮಾತು ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿಯೇ ಕಾಣಿಸುತ್ತವೆ. ಆದರೆ ಅವರು ಆಡಿರುವ ಮಾತುಗಳನ್ನು ಹಲವಾರು ಜನರು ಒಪ್ಪುತ್ತಾರೆ ಕೂಡ. ಈ ಜನರಿಗೆ “ಒಂದು ದೇಶ ಒಂದು ಭಾಷೆಯ” ಸಿದ್ಧಾಂತವನ್ನು ಜಾರಿಗೆ ತರುವ ಹಂಬಲವಿದೆ. ಈ ಜನರಿಗೆ ದೇಶದ ವೈವಿಧ್ಯತೆ ಮಾರಕವಾಗಿ ಕಾಣಿಸುತ್ತದೆ. ಈ ಜನರಿಗೆ ರಾಜ್ಯಗಳು ಕೇವಲ ಕೇಂದ್ರ ಸರಕಾರ ಮಾತನ್ನು ಪಾಲಿಸುವ ಕಾರಕೂನರಾಗಿ ಮಾತ್ರ ಕೆಲಸ ಮಾಡಬೇಕು ಎನ್ನುವ ಆಸೆ. ಈ ಜನರೇ ನೀಟ್ ನಂತಹ ಪರೀಕ್ಷೆಯನ್ನು ಜಾರಿಗೆ ತರಲೇಬೇಕು ಎಂದು ಹೋರಾಡಿದವರು.
ನಾವು ರಾಜ್ಯಗಳ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಇದೆ. ಈ ಹೊತ್ತಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳಬೇಕಾಗಿದೆ. ಸಂವಿಧಾನದಲ್ಲಿ ಶಿಕ್ಷಣವನ್ನು ರಾಜ್ಯ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅಂದರೆ ರಾಜ್ಯ ಸರಕಾರಕ್ಕೆ ತನ್ನ ರಾಜ್ಯದ ಭೌಗೋಳಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಂಶಗಳ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಹಾಗೂ ಅದಕ್ಕೆ ಪೂರಕವಾದ ಪಠ್ಯಕ್ರಮವನ್ನು ರೂಪಿಸುವ ಹಕ್ಕು ಇತ್ತು. ಇದರಲ್ಲಿ ಕೇಂದ್ರ ಸರ್ಕಾರಕ್ಕಾಗಲಿ, ಸಿ.ಬಿ.ಎಸ್.ಇ ಗಾಗಲಿ ಮೂಗು ತೂರಿಸುವ ಅವಕಾಶವಿದ್ದಿಲ್ಲ. ಆದರೆ ತುರ್ತು ಪರಿಸ್ಥಿತಿಯನ್ನೇ ನೆಪವಾಗಿಟ್ಟುಕೊಂಡು ಶಿಕ್ಷಣವನ್ನು ಜಂಟಿ ಪಟ್ಟಿಗೆ ಸೇರಿಸಿ ಕೇಂದ್ರ ಸರಕಾರ ಮೊದಲ ಹಿಡಿತವನ್ನು ಸಾಧಿಸಿದೆ. ಈ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಹೀಗೆ ಮಾಡಿ ಎಂದು ಹೇಳುವ ಅಧಿಕಾರವನ್ನು ಹಿಂಬಾಗಿಲಿನ ಮೂಲಕ ಪಡೆದುಕೊಂಡಿವೆ.

ನೀಟ್ ಕೇಂದ್ರ ರಾಜ್ಯಗಳ ಮೇಲೆ ಸವಾರಿ ಮಾಡಲು ಬಳಸಿರುವ ಮೊದಲ ಅಸ್ತ್ರ. ಇಂತಹ ಅನೇಕ ಅಸ್ತ್ರಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ನೀಟ್ ಹಾಗೂ ಸಿ.ಬಿ.ಎಸ್.ಇ ಮಂಡಳಿಯ ಪರೀಕ್ಷೆ ನಡೆಸುವ ವಿಧಾನ ನೋಡಿದರೆ ನಿಧಾನವಾಗಿ ರಾಜ್ಯ ಪಠ್ಯಕ್ರಮಗಳನ್ನು ನುಂಗಿಹಾಕಿ ಅಲ್ಲಿ ತಾವು ಸ್ಥಾಪಿತಗೊಳ್ಳುವ ಎಲ್ಲ ಹುನ್ನಾರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಇದನ್ನು ನಾವು ಒಕ್ಕೊರಲಿನ ಧ್ವನಿಯಲ್ಲಿ ವಿರೋಧಿಸಬೇಕಿದೆ, ಮೊದಲು ಕರ್ನಾಟಕ ಸರಕಾರ ಈ ನೀಟ್ ಪರೀಕ್ಷೆಯ ಪರಿಧಿಯಿಂದ ತಮ್ಮನ್ನು ಹೊರಗಿಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಬೇಕು, ಇದಕ್ಕೆ ಪೂರಕವಾದ ಮಸೂದೆಯನ್ನು ರಾಜ್ಯ ಸರಕಾರ ರೂಪಿಸಬೇಕು. ರಾಜ್ಯ ಸರಕಾರವು ರಾಜ್ಯದ ಮಕ್ಕಳ ಹಿತ ಕಾಪಾಡಲು ಬೇಕಿರುವ ಎಲ್ಲ ಕ್ರಮಗಳನ್ನು ದಿಟ್ಟತನದಿಂದ ತಗೆದುಕೊಳ್ಳಬೇಕು. ಬೇರೆಯವರನ್ನು ಉದ್ಧಾರ ಮಾಡಲು ನಮ್ಮ ರಾಜ್ಯದ ಮಕ್ಕಳು ಬಲಿಯಾಗುವುದನ್ನು ನಾವು ಒಟ್ಟಿಗೆ ನಿಂತು ತಡೆಯಬೇಕು.

One thought on “ನೀಟ್ ಎಂಬ ಒಕ್ಕೂಟ ವಿರೋಧಿ ನೀತಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s